ಶುಕ್ರವಾರ, ಮಾರ್ಚ್ 5, 2021
28 °C
ಹದಗೆಟ್ಟ ಸಿದ್ದರಾಮಯ್ಯ ಹೆಗ್ಗಡೆ ಆರೋಗ್ಯ * ಜ್ವರದಿಂದ ಬಳಲಿಕೆ

ಸತ್ಯಾಗ್ರಹ ಮಾಡಲಿ ಬಿಡಿ: ಜಿಲ್ಲಾಧಿಕಾರಿ ಉವಾಚ

ಪ್ರಜಾವಾಣಿ ವಾರ್ತೆ/ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಸತ್ಯಾಗ್ರಹ ಮಾಡಲಿ ಬಿಡಿ: ಜಿಲ್ಲಾಧಿಕಾರಿ ಉವಾಚ

ರಾಮನಗರ: ‘ಅವರ ಪಾಡಿಗೆ ಅವರು ಸತ್ಯಾಗ್ರಹ ಮಾಡಲಿ, ನಮ್ಮ ಪಾಡಿಗೆ ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ’...

ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು­ಗಾರಿಕೆ  ತಡೆಗಟ್ಟುವಂತೆ ಒತ್ತಾಯಿಸಿ ಚನ್ನಪಟ್ಟಣ ಮಿನಿ ವಿಧಾನಸೌಧದ ಮುಂಭಾಗ ಸತತ ಐದು ದಿನಗಳಿಂದ ಹಗಲು ರಾತ್ರಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವ ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ಹೆಗ್ಗಡೆ ಅವರ ಕುರಿತಂತೆ ಜಿಲ್ಲಾಧಿಕಾರಿ ಡಾ.ಡಿ.ಎಸ್‌.ವಿಶ್ವನಾಥ್‌ ಅವರು ಶುಕ್ರವಾರ ಪ್ರತಿಕ್ರಿಯಿಸಿದ ರೀತಿ ಇದು.ಸಿದ್ದರಾಮಯ್ಯ ಹೆಗ್ಗಡೆ ಅವರ ಹೋರಾಟದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎನ್ನುತ್ತಲೇ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಹೆಗ್ಗಡೆ ಸತ್ಯಾಗ್ರಹ ಮಾಡಲಿ ಬಿಡಿ’ ಎಂದು ಮಾಧ್ಯ­ಮದ­ವರಿಗೆ ನಿರ್ಲಿಪ್ತ ಉತ್ತರ ನೀಡಿದರು.‘ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಗಣಿ ಮತ್ತು ಭೂವಿಜ್ಞಾನ, ಪಿಡಬ್ಲ್ಯುಡಿ, ಕಂದಾಯ ಮತ್ತು ಪೊಲೀಸ್‌ ಇಲಾಖೆಗೆ ಸ್ಪಷ್ಟ ನಿರ್ದೇಶನ­ಗಳನ್ನು ನೀಡಿದ್ದೇನೆ ಎಂದು ಅವರು ತಿಳಿಸಿದರು.ಹದಗೆಟ್ಟ ಆರೋಗ್ಯ: ಏತನ್ಮಧ್ಯೆ ಸಿದ್ದರಾಮಯ್ಯ ಹೆಗ್ಗಡೆ ಅವರ ಆರೋಗ್ಯ ಗುರುವಾರ ರಾತ್ರಿ ಹದ­ಗೆಟ್ಟಿತ್ತು. ನಿರಂತರ ಧರಣಿ ಹಿನ್ನೆಲೆಯಲ್ಲಿ ಅವರಿಗೆ ರಾತ್ರಿ 11 ಗಂಟೆ ವೇಳೆಯಲ್ಲಿ ಜ್ವರ ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರ ಕೆಲ ಸ್ನೇಹಿತರು ಇಲ್ಲಿನ ಸರ್ಕಾರಿ ವೈದ್ಯ ಡಾ. ಶಿವಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸಿ, ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿದ್ದರು.ವೈದ್ಯರು ‘ಗ್ಲೂಕೋಸ್‌’ ಹಾಕಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿ ತೆರಳಿದರು. ಶುಕ್ರವಾರ ಬೆಳಿಗ್ಗೆ­ಯಷ್ಟ­ರಲ್ಲಿ ಅವರು ಚೇತರಿಸಿ­ಕೊಂಡರು.ಈ ನಡುವೆ ತಾಲ್ಲೂಕಿನ ಕೆಲ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ರೈತ ಸಂಘಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು ಅಕ್ರಮ ಮರಳುಗಾರಿಕೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಅವರೂ ಕೆಲ ಕಾಲ ಧರಣಿಯಲ್ಲಿ ಪಾಲ್ಗೊಂಡರು.ತನಿಖೆಗೆ ಸೂಚಿಸಬೇಕು: ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಹೆಗ್ಗಡೆ ‘ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕೂಡಲೇ ನಿಲ್ಲಬೇಕು. ಈ ಕುರಿತು ಸಿಬಿಐ ಅಥವಾ ಲೋಕಾಯುಕ್ತ ತನಿಖೆಗೆ ಸರ್ಕಾರ ಶಿಫಾರಸು ಮಾಡಬೇಕು. ಮರಳು­ಕಳ್ಳರು ಮತ್ತು ಅವರಿಗೆ ನೆರವಾಗಿರುವ ಭ್ರಷ್ಟ ಅಧಿಕಾರಿಗಳಿಂದ ನಷ್ಟವಾಗಿರುವ ಮರಳಿನ ಮೌಲ್ಯವನ್ನು ಭರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಇದಾಗದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.ಅನಸೂಯಮ್ಮ ಬೆಂಬಲ: ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಸೂಯಮ್ಮ ಅವರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ, ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಶೀಘ್ರವೇ ರಾಜ್ಯದ ಅಡ್ವೊಕೆಟ್‌ ಜನರಲ್‌ ರವಿಕುಮಾರ್‌ ವರ್ಮ ಅವರೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದರು.‘ಸಿದ್ದರಾಮಯ್ಯ ಅವರ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹಾಗೂ ‘ನರ್ಮದಾ ಬಚಾವೋ’ ಆಂದೋಲನದ ಮೇಧಾ ಪಾಟ್ಕರ್‌ ಅವರ ಬೆಂಬಲವನ್ನೂ ಪಡೆಯಲಾಗುವುದು’ ಎಂದು ತಿಳಿಸಿದರು.

ಗುಳೆ ಹೋಗಬೇಕಾಗುತ್ತದೆ:  ‘ಸಿದ್ದರಾಮಯ್ಯ ಹೆಗ್ಗಡೆ ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ತಾಲ್ಲೂಕಿನ ತೆಂಗು ನಾಶವಾಗಲು ಅಕ್ರಮ ಮರಳುಗಾರಿಕೆಯೇ ಕಾರಣ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಶ್ರೀರಕ್ಷೆಯಿಂದ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲೇ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಜನರೆಲ್ಲ ಬೇರೆಡೆ ಗುಳೆ ಹೋಗಬೇಕಾಗುತ್ತದೆ’ ಎಂದು ಜೆಡಿಎಸ್‌ ಮುಖಂಡ ಸಿಂ.ಲಿಂ. ನಾಗರಾಜು ಎಚ್ಚರಿಸಿದರು.ರೈತ ಮುಖಂಡ ಸಿ.ಪುಟ್ಟಸ್ವಾಮಿ ಅವರು ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ‘ಇದು ತಾಲ್ಲೂಕಿನ ಪ್ರತಿ ಗ್ರಾಮದವರು ಮಾಡಬೇಕಾದ ಹೋರಾಟ. ಹಳ್ಳಿ ಹಳ್ಳಿಯಿಂದ ಕನಿಷ್ಠ 5 ಜನರು ಈ ಹೋರಾಟದಲ್ಲಿ ಭಾಗವಹಿಸಿ, ಅಧಿಕಾರಿ ವರ್ಗಕ್ಕೆ ಎಚ್ಚರ ಮುಟ್ಟಿಸಬೇಕು’ ಎಂದರು.ಪ್ರಭಾರ ಎಸ್ಪಿ ಹೇಳುವುದೇನು?

‘ಅಕ್ರಮ ಮರಳುಗಾರಿಕೆ ತಡೆಗೆ ಪೊಲೀಸರಿಗೆ ಸೂಚಿಸಿದ್ದೇನೆ. ಚನ್ನಪಟ್ಟಣದಲ್ಲಿ ಸತ್ಯಾಗ್ರಹ ಮಾಡುತ್ತಿರುವ ಸಿದ್ದರಾಮಯ್ಯ ಹೆಗ್ಗಡೆ ಅವರಿಗೆ ಮರಳು ಮಾಫಿಯಾದಿಂದ ಜೀವ ಬೆದರಿಕೆ ಇದೆ ಎಂಬುದು ಗಮನಕ್ಕೆ ಬಂದಿದ್ದು, ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಚನ್ನಪಟ್ಟಣದ ಎ.ಎಸ್ಪಿ ಕುಲದೀಪ್‌ ಸಿಂಗ್‌ ಜೈನ್‌ ಅವರಿಗೆ ಸೂಚಿಸುತ್ತೇನೆ’ ಎಂದು ಜಿಲ್ಲೆಯ ಪ್ರಭಾರ ಎಸ್ಪಿ ಅಬ್ದುಲ್‌ ಅಹದ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.