ಮಂಗಳವಾರ, ಏಪ್ರಿಲ್ 20, 2021
32 °C

ಸತ್ವಹೀನ ಪ್ರಶ್ನೋತ್ತರ-ಸ್ಪೀಕರ್ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸದಾ ನಸುನಗುತ್ತಲೇ, ಎಲ್ಲವನ್ನೂ ಸೌಮ್ಯವಾಗಿ ಆಲಿಸುತ್ತಲೇ ಕಲಾಪ ನಡೆಸಿಕೊಡುವ ಸ್ಪೀಕರ್ ಮೀರಾ ಕುಮಾರ್ ಅವರಿಗೂ ಸಂಸದರ ವರ್ತನೆ ಇತ್ತೀಚಿನ ದಿನಗಳಲ್ಲಿ ತೀವ್ರ ಬೇಸರ ತಂದಿದ್ದು, ‘ಪ್ರಶ್ನೋತ್ತರ ಅವಧಿ ಸತ್ವಹೀನವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಸಮಾಜವಾದಿ ಪಕ್ಷದ ಸದಸ್ಯರು ಲೋಕಸಭಾ ಕಲಾಪದ ಪ್ರಶ್ನೋತರ ಅವಧಿಯಲ್ಲಿ ಸತತ ಮೂರನೇ ದಿನ ಕೋಲಾಹಲವೆಬ್ಬಿಸಿದ್ದರಿಂದ ಹತಾಶೆಗೊಂಡ ಮೀರಾ ಕುಮಾರ್ ಹೀಗೆ ಅಸಮಾಧಾನ ವ್ಯಕ್ತಪಡಿಸಿದರು.ಕನೌಜ್ ಸಂಸದ ಹಾಗೂ ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷರಾದ ಅಖಿಲೇಶ್ ಯಾದವ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಸಮಾಜವಾದಿ ಪಕ್ಷದ ಸಂಸದರು ಸದನದ ಬಾವಿಯತ್ತ ಮುನ್ನುಗ್ಗಿ ಕೋಲಾಹಲ  ನಡೆಸಿದರು.ಈ ಕುರಿತು ಚರ್ಚಿಸಲು ಆ ಪಕ್ಷದ ಸದಸ್ಯರೊಬ್ಬರಿಗೆ ಅವಕಾಶ ನೀಡಿದ ನಂತರವೂ ಸಂಸದರು ಹೀಗೆ ವರ್ತಿಸಿದ್ದರಿಂದ ಸ್ಪೀಕರ್ ತೀವ್ರ ಅಸಮಾಧಾನಗೊಂಡರು.ಈ ಸಂದರ್ಭದಲ್ಲಿ ಅವರು, ‘ಪ್ರಶ್ನೋತ್ತರ ಅವಧಿ ಬಹುತೇಕ ಸತ್ವರಹಿತವಾಗಿದೆ. ಅದನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ’ ಎಂದರು.ಸ್ಪೀಕರ್ ಈ ಬಗ್ಗೆ ಬಿರುನುಡಿಗಳನ್ನಾಡಿದ ನಂತರ ಸಮಾಜವಾದಿ ಪಕ್ಷದ ಸಂಸದರು ತಂತಮ್ಮ ಆಸನಗಳತ್ತ ಹಿಂದಿರುಗಿದರು.ಎಲ್ಲಾ ಸಂಸದರಿಗೂ ಮಾತನಾಡಲು ಅವಕಾಶ ನೀಡುವುದಾಗಿ ಸ್ಪಷ್ಟಪಡಿಸಿದ ಮೀರಾ ಕುಮಾರ್, ಅಗತ್ಯಬಿದ್ದರೆ ಸಂಸದರು ಆನಂತರ ಕೂಡ ತಮ್ಮೊಡನೆ ಚರ್ಚಿಸಬಹುದು ಎಂದು ಭರವಸೆ ನೀಡಿದರು.ಇದಕ್ಕೆ ಮುನ್ನ ಪಕ್ಷದ ಸಂಸದ ಶೈಲೇಂದ್ರ ಕುಮಾರ್ ಅವರು, ಮಾಯಾವತಿ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅಖಿಲೇಶ್ ಯಾದವ್ ಅವರನ್ನು ಬುಧವಾರ ಲಖನೌ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ದೂರಿದ್ದರು.ರಾಜ್ಯಸಭೆಯ ಪ್ರಶ್ನೋತ್ತರ ಅವಧಿಗೂ ಪದೇ ಪದೇ ಅಡ್ಡಿಯಾಗುತ್ತಿದ್ದುದರಿಂದ ಸಭಾಪತಿ ಹಮೀದ್ ಅನ್ಸಾರಿ ಅವರು ಬುಧವಾರವಷ್ಟೇ ಅಲ್ಲಿನ ಕಲಾಪವನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ಕ್ಕೆ ಬದಲಾಯಿಸಿದ್ದರು. ಅದಾದ ಮರುದಿನವೇ ಲೋಕಸಭೆಯ ಪ್ರಶ್ನೋತ್ತರ ಅವಧಿ ಬಗ್ಗೆ ಮೀರಾಕುಮಾರ್ ಅವರಿಂದ ವಿಷಾದದ ಹೇಳಿಕೆ ಹೊರಬಿದ್ದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.