ಸೋಮವಾರ, ಏಪ್ರಿಲ್ 12, 2021
23 °C

ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ : ಮಾದಿಗರ ಸಮುದಾಯದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ಯತ್ನಿಸಿದ ಮಾದಿಗ ಸಮುದಾಯ ಸಂಘಟನೆಗಳ ಒಕ್ಕೂಟದ 58 ಮಂದಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದ ಘಟನೆ ನಗರದಲ್ಲಿ ಬುಧವಾರ ನಡೆಯಿತು.ಪ್ರವಾಸಿ ಮಂದಿರದ ಬಳಿ ಜಮಾಯಿಸಿದ್ದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರ ಮನವಿಯನ್ನು ಸ್ವಾತಂತ್ರ್ಯೋತ್ಸವ ಆಚರಣೆ ಮುಗಿದ ನಂತರ ಸ್ವೀಕರಿಸುವುದಾಗಿ ಸಚಿವರು ಭರವೆ ನೀಡಿ ವೇದಿಕೆಗೆ ತೆರಳಿದ್ದರು. ಸಚಿವರ ಭಾಷಣ ಮುಗಿದು, ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗುತ್ತಾ ಮೈದಾನದೊಳಗೆ ನುಗ್ಗಲು ಮುಂದಾದರು.ಸ್ಥಳದಲ್ಲಿದ್ದ ತಕ್ಷಣವೇ ಒಕ್ಕೂಟದ ಅಧ್ಯಕ್ಷ ಬೀರೂರಿನ ಬಿ.ಆರ್.ಚಂದ್ರಶೇಖರ್, ಮುಖಂಡರಾದ ಚೌಡಪ್ಪ, ಈಶ್ವರಪ್ಪ, ಜಗದೀಶ್, ಟಿ.ಮಂಜಪ್ಪ, ತೇಜಮೂರ್ತಿ, ನಂದಿಶೇಖರಪ್ಪ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು. ಜೂನ್ 14ರಂದು ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಿಂಗಳಾದರೂ ಸರ್ಕಾರ ವರದಿ ಬಹಿರಂಗ ಪಡಿಸದೆ ಹಲವು ತಪ್ಪು ಸಂದೇಶಗಳಿಗೆ ಅವಕಾಶ ಮಾಡಿ ಕೊಟ್ಟಿದೆ. ಕೆಲವು ಸಮುದಾಯಗಳು ಒಳಮೀಸಲಾತಿ ಒಪ್ಪದೆ ಮೀಸಲಾತಿ ಹಂಚಿಕೊಳ್ಳಲು ನಿರಾಕರಿಸು ತ್ತಿರುವುದನ್ನು ಒಕ್ಕೂಟ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಆಯೋಗದ ವರದಿಯನ್ನು ಅಧಿವೇಶನದಲ್ಲಿ ಸರ್ಕಾರ ಬಹಿರಂಗಪಡಿಸಿ, ಅದಕ್ಕೆ ಒಪ್ಪಿಗೆ ನೀಡಿ ಕೇಂದ್ರಕ್ಕೆ ಕಳುಹಿಸಬೇಕು. ಮುಂಬರುವ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಗಳ ಮೀಸಲು ಕ್ಷೇತ್ರಗಳನ್ನು ಅಸ್ಪೃಶ್ಯ ಸಮುದಾಯಗಳಿಗೆ ಶೇ.80ರಷ್ಟು ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿದ್ದಾರೆ.ಮನವಿ: ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಸಚಿವ ಸಂಪುಟದಲ್ಲಿ ಶಿಫಾರಸು ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಕೆ.ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವನ್ನು ಮೀಸಲು ಕ್ಷೇತ್ರವನ್ನಾಗಿ ಘೋಷಿಸಬೇಕು. ಹುಲಿ ಯೋಜನೆ ಕೈಬಿಡಬೇಕು. ಬಗರ್‌ಹುಕುಂ ಸಾಗುವಳಿಗೆ ಹಕ್ಕುಪತ್ರ ಕೊಡಬೇಕು. ನಗರಸಭೆಯಲ್ಲಿ ನೀಡಿರುವ ಕಸದ ಟೆಂಡರ್ ರದ್ದುಗೊಳಿಸಿ 100 ಮಂದಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಪೆನ್ಶನ್ ಮೊಹಲ್ಲಾದಲ್ಲಿ ವಾಸಿಸುವ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ದಲಿತ ಭವನ ನಿರ್ಮಿಸಲು 25 ಲಕ್ಷ ರೂಪಾಯಿ ನೀಡಬೇಕೆಂದು ಮನವಿ ಮಾಡಿದರು.ಪಿ.ಕುಮಾರ್, ವಾಸು, ತಿಪ್ಪೇಶ್, ಮೂರ್ತಿ, ಬಾಲರಾಜು, ನರೇಂದ್ರ, ಬಿ.ಪೂವಪ್ಪ, ಲಕ್ಷ್ಮಣ, ಶ್ರೀನಿವಾಸ, ಬಿ.ರಮೇಶ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.