ಗುರುವಾರ , ಜೂಲೈ 9, 2020
21 °C

ಸದ್ಯದಲ್ಲೇ ಕ್ರೀಡಾನೀತಿ ಜಾರಿ: ಗಿರೀಶ್ ಪಟೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದ್ಯದಲ್ಲೇ ಕ್ರೀಡಾನೀತಿ ಜಾರಿ: ಗಿರೀಶ್ ಪಟೇಲ್

ಚಿಕ್ಕಮಗಳೂರು: ಎರಡು ತಿಂಗಳೊಳಗೆ ರಾಜ್ಯದಲ್ಲಿ ಕ್ರೀಡಾನೀತಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಗಿರೀಶ್ ಪಟೇಲ್ ತಿಳಿಸಿದರು.ನಗರಕ್ಕೆ ಗುರುವಾರ ಆಗಮಿಸಿದ್ದ ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನ, ಶತಮಾನೋತ್ಸವ ಕ್ರೀಡಾಂಗಣ, ಟೆನ್ನಿಸ್ ಕೋರ್ಟ್, ಜಿಮ್, ಕ್ರೀಡಾ ವಸತಿ ನಿಲಯ ಪರಿಶೀಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಕ್ರೀಡಾ ನೀತಿ ಜಾರಿಗೊಳಿಸಿದರೆ ಕ್ರೀಡಾ ಕ್ಷೇತ್ರದ ಎಲ್ಲಾ ಸಂಸ್ಥೆಗಳಿಗೂ ಪರಿಹಾರ ದೊರೆಯಲಿದೆ. ದೇಶದಲ್ಲಿ ಕ್ರೀಡಾ ನೀತಿ ಇಲ್ಲ. ಜಲನೀತಿ, ಕೃಷಿನೀತಿ, ಕೈಗಾರಿಕಾ ನೀತಿ ರೂಪಿಸುವ ಆಲೋಚನೆ ನಡೆಯಿತೆ ಹೊರತು ಕ್ರೀಡಾನೀತಿ ರೂಪಿಸುವ ಚಿಂತನೆ ನಡೆಯಲಿಲ್ಲ. ಕ್ರೀಡಾನೀತಿ ಕರಡುಪ್ರತಿ ಸಿದ್ಧವಾಗಿದೆ. ಕ್ರೀಡಾಕ್ಷೇತ್ರ ಅನುಭವಿಸುತ್ತಿರುವ ತರಬೇತುದಾರರ ಹಾಗೂ ಆಡಳಿತಗಾರರ ಕೊರತೆ, ಗ್ರಾಮೀಣ ಕ್ರೀಡಾಪಟು ಗಳ ಮುಂದಿನ ಗುರಿ, ಅಧಿಕಾರಿ ಮತ್ತು ಸಿಬ್ಬಂದಿ ನೇಮಕ, ಕ್ರೀಡೆಗೆ ಬೇಕಾಗಿರುವ ಅಗತ್ಯ ಸೌಲಭ್ಯಗಳು ಇದರಲ್ಲಿ ಒಳಗೊಂಡಿದೆ ಎಂದರು.ಈ ಕರಡು ಕ್ರೀಡಾನೀತಿಯನ್ನು ಹಿರಿಯ ಕ್ರೀಡಾಪಟುಗಳು, ಕ್ರೀಡೆಯಲ್ಲಿ ಅನುಭವ ಹೊಂದಿರುವ ಸಾರ್ವಜನಿಕರೊಂದಿಗೆ ಚರ್ಚಿಸಿ, ನಂತರ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ಕ್ರೀಡಾಸಚಿವರು ಆಲೋಚಿಸಿದ್ದಾರೆ ಎಂದರು. ರಾಜ್ಯದಲ್ಲಿ ಒಟ್ಟು 176 ತಾಲ್ಲೂಕುಗಳಿವೆ. ಅದರಲ್ಲಿ 154 ತಾಲ್ಲೂಕುಗಳಲ್ಲಿ  ಕ್ರೀಡಾಂಗಣವನ್ನು ನಿರ್ಮಿಲಾಗಿದೆ. ಕ್ರೀಡಾಧಿಕಾರಿಗಳು ಮತ್ತು ತರಬೇತುದಾರರ ಕೊರತೆ ಇದೆ. ಇರುವ ಸೌಲಭ್ಯಗಳು ಉಪಯೋಗವಾಗುತ್ತಿಲ್ಲ. ಈ ಇಲಾಖೆಯಲ್ಲಿ ಆಡಳಿತಗಾರರ, ತರಬೇತುದಾರರ ಕೊರತೆ ಇದೆ. ಯುವಜನ ಸೇವಾ ಕ್ರೀಡಾಧಿಕಾರಿಗಳ ಹುದ್ದೆಯೂ ಖಾಲಿ ಇದೆ. ಇವುಗಳನ್ನು ಭರ್ತಿ ಮಾಡಲು ಆಲೋಚಿಸಲಾಗಿದೆ ಎಂದು ತಿಳಿಸಿದರು.ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯನ್ನು ಪ್ರತ್ಯೇಕಗೊಳಿಸಲು ಕುರಿತು ಗಮನ ಸೆಳೆದಾಗ, ಕ್ರೀಡಾ ಇಲಾಖೆಯನ್ನು ಯುವಜನಸೇವಾ ಇಲಾಖೆಯಿಂದ ಪ್ರತ್ಯೇಕ ಗೊಳಿಸುವಂತೆ ಹಿಂದಿನಿಂದಲೂ ಒತ್ತಾಯಿಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.ಆಂಧ್ರಪ್ರದೇಶ, ಕೇರಳ, ಪಂಜಾಬ್ ರಾಜ್ಯಗಳಲ್ಲಿ ಕ್ರೀಡಾ ಇಲಾಖೆ ಒಂದು ಸ್ವತಂತ್ರ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ. ಯುವಜನ ಇಲಾಖೆ ವರ್ಷಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದರಿಂದ ಕ್ರೀಡಾ ಇಲಾಖೆ ಪ್ರತ್ಯೇಕವಾಗಿ ಇರುವುದು ಒಳ್ಳೆಯದು ಎಂದರು.ರಾಜ್ಯದಲ್ಲಿ ಹೊಸಕ್ರೀಡಾ ನೀತಿ ಜಾರಿಗೊಂಡರೆ ಈಗಾಗಲೇ ಕಡೆಗಣಿಸಲ್ಪಟ್ಟಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ಹೆಚ್ಚು ಒತ್ತು ನೀಡಲಾಗು ವುದು. ಕುಸ್ತಿ ಸೇರಿದಂತೆ ಕೊಕ್ಕೊ, ಕಬಡ್ಡಿ, ಹಳ್ಳಿ ಆಟಗಳಾದ ಲಗೋರಿ, ಚಿನ್ನಿದಾಂಡು ಬಿಲ್ಲುಗಾರಿಕೆಗಳು ಆದ್ಯತೆ ಪಡೆಯಲಿವೆ ಎಂದು ಹೇಳಿದರು.ಹಿರಿಯ ಕ್ರೀಡಾಪಟುಗಳಿಗೆ ಮಾಸಾಶನ ನೀಡುವ ಕುರಿತು ಪ್ರಶ್ನಿದಾಗ, ಶಿವಮೊಗ್ಗದಲ್ಲಿ ಕುಸ್ತಿಪಟುಗಳಿಗೆ ಮಾಸಾಶನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದನ್ನೆ ಅನುಸರಿಸಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೂ ಮಾಸಾಶನ ನೀಡುವ ಕುರಿತು ಆಲೋಚನೆ ಮಾಡಲಾಗಿದೆ ಎಂದರು.ಶತಮಾನೋತ್ಸವ ಕ್ರೀಡಾಂಗಣ ಮತ್ತು ಜಿಲ್ಲಾ ಆಟದ ಮೈದಾನದ ಪರಿಶೀಲನೆ ವೇಳೆ ನಗರಸಭೆ ಅಧ್ಯಕ್ಷ ಕೆ. ಶ್ರೀನಿವಾಸ್, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಪ್ರೇಂ ಕುಮಾರ್, ಕಾರ್ಯದರ್ಶಿ ವರಸಿದ್ದಿ ವೇಣುಗೋಪಾಲ್, ವಕ್ತಾರ ಬಿ.ರಾಜಪ್ಪ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.