ಗುರುವಾರ , ಫೆಬ್ರವರಿ 25, 2021
29 °C
ಅರಮನೆ ನಗರಿಯಲ್ಲಿ ಇಂದಿನಿಂದ ಸಿನಿಮೋತ್ಸವ, 500ಕ್ಕೂ ಹೆಚ್ಚು ನೋಂದಣಿ

ಸಪ್ತ ದಿನಗಳ ಸಿನಿ ಜಗತ್ತಿಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಪ್ತ ದಿನಗಳ ಸಿನಿ ಜಗತ್ತಿಗೆ...

ಮೈಸೂರು: ಸಿನಿಮಾ ಜಗತ್ತು ಅದೊಂಥರ ಅಕ್ಷಯ ಪಾತ್ರೆ. ಎಷ್ಟೇ ಬಗೆದರೂ ಅದು ಮತ್ತಷ್ಟು ತುಂಬಿಕೊಳ್ಳುತ್ತಾ ಹೋಗುತ್ತದೆ. ಭಾವನೆಗಳ ರಾಶಿಯನ್ನೇ ತುಂಬುವ, ತವಕ ತಲ್ಲಣಗಳಿಗೆ ಸಾಥ್‌ ನೀಡುವ, ಕನಸುಗಳ ಲೋಕಕ್ಕೆ ಕರೆದುಕೊಂಡು ಹೋಗುವ ಸಿನಿ ಲೋಕದ ಬಾಗಿಲು ತೆರೆಯಲು ಅರಮನೆಗಳ ನಗರಿಯಲ್ಲಿ ಕ್ಷಣಗಣನೆ ಆರಂಭವಾಗಿದೆ.ಸಾಂಸ್ಕೃತಿಕ ನಗರಿಗೆ ಇದೇ ಮೊದಲ ಬಾರಿ ವಿಸ್ತರಿಸಲಾಗಿರುವ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ ಗುರುವಾರ ಆರಂಭವಾಗಲಿದೆ. ಹೀಗಾಗಿ ನಗರದಲ್ಲಿ ಇನ್ನೊಂದು ವಾರ ಸಿನಿಮಾದ್ದೇ ಮಾತು, ಸಿನಿಮಾದ್ದೇ ಪ್ರೀತಿ.ಕನ್ನಡದ ಜೊತೆಗೆ ವಿಶ್ವದ ನಾನಾ ಭಾಷೆಯ ಕಲಾತ್ಮಕ ಹಾಗೂ ಸಾಮಾಜಿಕ ಚಿತ್ರಗಳ ಪ್ರದರ್ಶನಕ್ಕೆ ಅರಮನೆಗಳ ನಗರ ಸಜ್ಜಾಗಿದ್ದು, ಇನ್ನು ಏಳು ದಿನ ಕಾಲ ಚಲನಚಿತ್ರ ಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದೆ. 140 ಸಿನಿಮಾ ಪ್ರದರ್ಶನ ವೀಕ್ಷಿಸಲು ಈಗಾಗಲೇ 500ಕ್ಕೂ ಅಧಿಕ ಮಂದಿ ತಮ್ಮ ಹೆಸರು ನೋಂದಾಯಿಸಿದ್ದಾರೆ.ಮೊದಲ ದಿನ ಕಲಾಮಂದಿರದಲ್ಲಿ ‘ತಿಥಿ’ ಸಿನಿಮಾ ಮಾತ್ರ ಪ್ರದರ್ಶನಗೊಳ್ಳಲಿದೆ. ಶುಕ್ರವಾರದಿಂದ ನಿತ್ಯ ಮಾಲ್ ಆಫ್‌ ಮೈಸೂರ್‌ನ ಐನಾಕ್ಸ್‌ ಚಿತ್ರಮಂದಿರದಲ್ಲಿ ಉಳಿದ ಸಿನಿಮಾಗಳ ಪ್ರದರ್ಶವಿರಲಿದೆ. ವಿಶ್ವ ಸಿನಿಮಾ, ಏಷಿಯಾ ಸಿನಿಮಾ, ಭಾರತೀಯ ಸಿನಿಮಾ, ಕನ್ನಡ ಸಿನಿಮಾ ವಿಭಾಗಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.‘ಹೆಸರು ನೋಂದಾಯಿಸಿಕೊಂಡವ ರಲ್ಲಿ ಹಿರಿಯ ನಾಗರಿಕರೇ ಹೆಚ್ಚು. ಸುಮಾರು 200 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಆನ್‌ಲೈನ್‌ನಲ್ಲಿ 75 ಮಂದಿ ನೋಂದಣಿ ಮಾಡಿದ್ದಾರೆ. ಹೆಚ್ಚಿನವರು ಮೈಸೂರಿನವರು’ ಎಂದು ಮೈಸೂರಿನ ವಾರ್ತಾ ಇಲಾಖೆಯ ಉಪ ನಿರ್ದೇಶಕ ಎ.ಆರ್‌. ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಿನಿಮೋತ್ಸವದ ಸಮಾರೋಪ ಫೆ. 5ರಂದು ಸಂಜೆ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ನಡೆಯಲಿದೆ. ಸಿನಿಮಾ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.ಸಾವಿರ ಪ್ರೇಕ್ಷಕರಿಗೆ ವ್ಯವಸ್ಥೆ: ನಗರದ ಎಂ.ಜಿ. ರಸ್ತೆಯಲ್ಲಿರುವ ಮಾಲ್‌ ಆಫ್‌ ಮೈಸೂರ್‌ನ ಐನಾಕ್ಸ್‌ ಚಿತ್ರಮಂದಿರದಲ್ಲಿ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ 20 ಸಿನಿಮಾಗಳ ಪ್ರದರ್ಶನವಿರಲಿದೆ. 4 ಪರದೆಗಳಲ್ಲಿ ತಲಾ ಐದು ಸಿನಿಮಾ ಪ್ರದರ್ಶನಗೊಳ್ಳಲಿವೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಐನಾಕ್ಸ್ ಚಿತ್ರಮಂದಿರದಲ್ಲಿ ಬುಧವಾರ ಸಿದ್ಧತೆ ಪರಿಶೀಲಿಸಿದರು.‘ಐನಾಕ್ಸ್‌ನಲ್ಲಿ ಎಲ್ಲಾ ಸಿದ್ಧತೆ ಪೂರ್ಣಗೊಂಡಿವೆ. ಒಟ್ಟು 1009 ಮಂದಿ ಸಿನಿಮಾ ವೀಕ್ಷಿಸಲು ವ್ಯವಸ್ಥೆ ಇದೆ. ಪರದೆ 1 ಹಾಗೂ 2ರಲ್ಲಿ ತಲಾ 278 ಆಸನ, 3ರಲ್ಲಿ 239 ಹಾಗೂ 4ರಲ್ಲಿ 214 ಆಸನಗಳಿವೆ’ ಎಂದು ಐನಾಕ್ಸ್‌ ಚಿತ್ರಮಂದಿರದ ವ್ಯವಸ್ಥಾಪಕ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ಸಿನಿಮಾ ವೀಕ್ಷಿಸಲು ಬರುವವರಿಗೆ ಮಾಲ್‌ ಆಫ್‌ ಮೈಸೂರಿನಲ್ಲಿ ಪಾರ್ಕಿಂಗ್‌ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ದ್ವಿಚಕ್ರ ವಾಹನಕ್ಕೆ ₹ 25 ಹಾಗೂ ಕಾರಿಗೆ ₹ 50 ವಿಧಿಸಲಾಗುತ್ತದೆ. ಇಡೀ ದಿನ ವಾಹನ ನಿಲ್ಲಿಸಬಹುದು’ ಎಂದು ಅವರು ಮಾಹಿತಿ ನೀಡಿದರು.ಮೊದಲ ದಿನ ‘ತಿಥಿ’ ಪ್ರದರ್ಶನ

ಸಿನಿಮೋತ್ಸವ ಉದ್ಘಾಟನೆ ಅಂಗವಾಗಿ ಮೊದಲ ದಿನ (ಜ. 28) ಮೈಸೂರಿನ ಕಲಾಮಂದಿರದಲ್ಲಿ ರಾಮರೆಡ್ಡಿ ನಿರ್ದೇಶನದ ‘ತಿಥಿ’ ಕನ್ನಡ ಚಿತ್ರದ ಪ್ರದರ್ಶನ ನಡೆಯಲಿದೆ.

ಸಂಜೆ 6 ಗಂಟೆಗೆ ಶುರುವಾಗಲಿರುವ ಈ ಚಿತ್ರದ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ‘ಲೋಕಾರ್ನೊ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಈ ಸಿನಿಮಾ ಎರಡು ಪ್ರಶಸ್ತಿ ಪಡೆದಿದೆ.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.