ಶನಿವಾರ, ಮಾರ್ಚ್ 6, 2021
32 °C
ಗ್ರಾಮಾಯಣ

ಸಮಸ್ಯೆಗಳ ಕೊಂಪೆ `ಆಕಳಕುಂಪಿ'

ಪ್ರಜಾವಾಣಿ ವಾರ್ತೆ /- ಮೆಹಬೂಬ ಹುಸೇನ ಕನಕಗಿರಿ . Updated:

ಅಕ್ಷರ ಗಾತ್ರ : | |

ಸಮಸ್ಯೆಗಳ ಕೊಂಪೆ `ಆಕಳಕುಂಪಿ'

ಕನಕಗಿರಿ: ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ನಾಯಕ ಜನಾಂಗದವರು (870 ಮಂದಿ) ಬಿಟ್ಟರೆ ಈ ಗ್ರಾಮದಲ್ಲಿ ಬೇರೆ ಜನಾಂದವರ ಒಂದು ಮನೆ ಸಹ ಇಲ್ಲ. ಕರಡೋಣ ಗ್ರಾಪಂ ಹಾಗೂ ಹುಲಿಹೈದರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ `ಆಕಳಕುಂಪಿ' ಗ್ರಾಮ ಸಮಸ್ಯೆಗಳ ಕೊಂಪೆಯಾಗಿದೆ.ಸ್ವಾತಂತ್ರ್ಯಗೊಂಡು 64 ವರ್ಷಗಳೆ ಉರುಳಿದರೂ ಈ ಗ್ರಾಮಕ್ಕೆ ಇಲ್ಲಿ ತನಕ ಕೆಂಪು `ಬಸ್' ಬಂದಿಲ್ಲ.  ಜನರು ಹಾಗೂ ವಿದ್ಯಾರ್ಥಿಗಳು ವಡಕಿ ಕ್ರಾಸ್ (ಕನಕಗಿರಿ-ನವಲಿ ರಸ್ತೆ)ವರೆಗೆ ನಡೆದುಕೊಂಡು ಬರುವುದು ಅನಿವಾರ್ಯವಾಗಿದೆ.ನೀರಿಗೆ ಬರ: ನೀರಿನ ಸಮಸ್ಯೆ ವಿಪರೀತವಾಗಿದೆ, ಎರಡು ಕೈಪಂಪ್‌ಗಳಿದ್ದರೂ ದುರಸ್ತಿಗೊಳಿಸಿಲ್ಲ. ಮೂರು ಮಿನಿ ವಾಟರ್ ಟ್ಯಾಂಕ್‌ಗಳು ಸಹ ಸ್ಮಾರಕಗಳಾಗಿ ನಿಂತಿವೆ. ದೂರದ ಕನಕರಾಯರ ಹೊಲಕ್ಕೆ ಹೋಗಿ ಹಗಲು-ರಾತ್ರಿ ನೀರು ತರುವಂತ ಸ್ಥಿತಿ ಇಲ್ಲಿದೆ ಎಂದು ನಾಗಮ್ಮ ಡಂಕನಕಲ್, ಹನುಮಮ್ಮ ಮೇಸ್ತ್ರಿ ತಿಳಿಸುತ್ತಾರೆ.ಶಾಲೆಯ ಬಿಸಿಯೂಟಕ್ಕೆ ನೀರಿನ ಸಮಸ್ಯೆ ಇದೆ. ಮಕ್ಕಳು ಊಟ ಮಾಡಿದ ನಂತರ `ಕೈ' ನೆಕ್ಕುತ್ತಾ ಮನೆಗೆ ಬರುತ್ತಾರೆ ಎಂದು ಶಾಂತಮ್ಮ ಅವರು ವಾಸ್ತವ ಸ್ಥಿತಿ ಬಿಚ್ಚಿಟ್ಟರು.ತಿಂಗಳಾದರೂ ನೀರಿನ ಸಮಸ್ಯೆಗೆ ಗ್ರಾಪಂ, ಜಿಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ಚುನಾವಣೆಯಲ್ಲಿ ಮತ ಕೇಳಲು ಬಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತೆ ಈ ಕಡೆಗೆ ಗಮನ ಹರಿಸಿಲ್ಲ ಎಂದು ನಾಗನಗೌಡ, ನಾಗರಾಜ ನವಲಿ ದೂರಿದರು.

ಗ್ರಾಮದಲ್ಲಿ ಸಾರಾಯಿ ಸುಲಭವಾಗಿ ಸಿಗುತ್ತೆ. ನೀರು ಕಷ್ಟದಾಯಕ ಎಂದು ಗ್ರಾಮದ ವೃದ್ಧರೊಬ್ಬರು ತಿಳಿಸಿದರು.ಕಳಪೆ ಡಾಂಬರೀಕರಣ: ಗ್ರಾಮದಿಂದ ವಡಕಿ ಕ್ರಾಸ್ ವರೆಗೆ ಇರುವ 2.5 ಕಿ.ಮೀ. ದೂರದ ರಸ್ತೆಯಲ್ಲಿ ಬರೀ ಒಂದು ಕಿ.ಮೀ. ಮಾತ್ರ ಡಾಂಬರೀಕರಣ ಮಾಡಲಾಗಿದೆಯಾದರೂ ಅದು ಕಳಪೆ ಮಟ್ಟದಿಂದ ಕೂಡಿದೆ. ಅಲ್ಲಲ್ಲಿ ಡಾಂಬರು ಕಿತ್ತು ಹೋಗಿರುವುದು ಕಾಣಿಸುತ್ತದೆ.ಯಾವುದೇ ವಿದ್ಯುತ್ ಕಂಬದಲ್ಲಿಯೂ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಕತ್ತಲಲ್ಲಿ ಗ್ರಾಮ ಮುಳುಗಿದೆ ಎಂದು ಕೆಂಚಪ್ಪ ತಿಳಿಸಿದರು.ರಸ್ತೆ, ಹೊಲಗಳೆ ಮಹಿಳೆಯರ ಶೌಚಾಲಯಗಳಾಗಿವೆ. `ಸಾಕಷ್ಟು ದೈನಾಸ (ವಿನಂತಿ) ಬಿಟ್ಟರೂ ಯಾರು ಶೌಚಾಲಯ ಕಟ್ಟಿಸಿಕೊಡಲಿಲ್ಲ ರೀ' ಎಂದು ಹನುಮಮ್ಮ ಹೇಳಿದ್ದು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎತ್ತಿ ತೋರಿಸಿತು.ಉದ್ಯೋಗ ಖಾತರಿ ಕಾರ್ಯಕ್ರಮ ಎಂದರೆ ಏನು ಎಂದು ಅಲ್ಲಿನ ಜನ ಪ್ರಶ್ನಿಸಿದರು. ಮಳೆ ಬಂದರೆ ಮಾತ್ರ ಹೊಲದ ಕೆಲಸ, ಇಲ್ಲಂದ್ರ ಸಸಿ ಹಚ್ಚಕ್ಕ ಮಾಗಾಣಿ ಕಡೆಗೆ (ನೀರಾವರಿ ಪ್ರದೇಶ) ಹೋಗ್ತಿವಿ ಎಂದು ಯಂಕಪ್ಪ ಸಿರಿಗೇರಿ ತಿಳಿಸಿದರು.ಗ್ರಾಮದ ಸಮುದಾಯ ಭವನ ಅಪೂರ್ಣಗೊಂಡಿದೆ, ಸ್ವಚ್ಛತೆ ಸಮಸ್ಯೆ ಇದೆ, ತಿಪ್ಪೆಗುಂಡಿಗಳ ಮಧ್ಯೆಯೆ ಜನ ವಾಸಮಾಡುತ್ತಿದ್ದು ಸಾಂಕ್ರಾಮಿಕ ರೋಗದ ಭೀತಿ ಇದೆ ಎಂದು ಕೆಂಚಪ್ಪ ಹೇಳಿದರು.

- ಮೆಹಬೂಬ ಹುಸೇನ ಕನಕಗಿರಿ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.