ಗುರುವಾರ , ಜೂನ್ 24, 2021
27 °C

ಸಮಾನತೆಗಾಗಿ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಭಿಮಾನದ ಬದುಕಿಗಾಗಿ ಎಲ್ಲ ದೇಶಗಳಲ್ಲೂ ಮಹಿಳೆಯರು ಈಗ ಹೋರಾಟ ಮಾಡುತ್ತಿದ್ದಾರೆ. ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಬೀದಿಗಿಳಿಯಲು ಹಿಂಜರಿಯುತ್ತಿಲ್ಲ.

 

ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ವಿಷಯದಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ಪುರುಷರಿಗೆ ಸಮಾನವಾದ ಹಕ್ಕುಗಳು, ಅವಕಾಶಗಳನ್ನು ಪಡೆದುಕೊಂಡು ಗೌರವದ ಬದುಕು ರೂಪಿಸಿಕೊಳ್ಳುವ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಸಫಲರೂ ಆಗಿದ್ದಾರೆ.ಇಷ್ಟೆಲ್ಲ ಆದರೂ ಮಹಿಳೆಯರ ವಿಷಯದಲ್ಲಿ ನಮ್ಮ `ಸಮಾಜ~ದ ಧೋರಣೆ ಬದಲಾಗಿಲ್ಲ. ಆಧುನಿಕ ಶಿಕ್ಷಣ ಪಡೆದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ. ಗ್ರಾಮೀಣ ಅಶಿಕ್ಷಿತ ಮಹಿಳೆಯರ ಬದುಕಿನಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ.

 

ಈಗ ದೌರ್ಜನ್ಯದ ಸ್ವರೂಪಗಳೂ ಬದಲಾಗಿವೆ. ಬಹುಸಂಖ್ಯೆಯ ಮಹಿಳೆಯರು ಆರ್ಥಿಕ ಅಭದ್ರತೆಯಿಂದ ಹೊರಬಂದಿಲ್ಲ. ಗ್ರಾಮೀಣ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಸಿಗುತ್ತಿಲ್ಲ.ಇದರ ಜತೆಗೆ ಬಾಲ್ಯ ವಿವಾಹ, ದೈಹಿಕ ಅರ್ಹತೆ ಪಡೆಯುವ ಮೊದಲೇ ವಿವಾಹ ಮಾಡಿಕೊಳ್ಳುವ ಮತ್ತು ಬೇಗ ಮಕ್ಕಳನ್ನು ಹೆರುವ ಅನಿವಾರ್ಯತೆಗಳಿಂದ ಗ್ರಾಮೀಣ ಯುವತಿಯರು ಮುಕ್ತರಾಗಿಲ್ಲ. ಕುಟುಂಬದ ನಿರ್ವಹಣೆಯ ಜತೆಗೆ ಅವರು ದುಡಿಯುವ ಅನಿವಾರ್ಯತೆಯೂ ಇದೆ. ನಗರ ಹಾಗೂ ಪಟ್ಟಣ ಪ್ರದೇಶಗಳ ಮಹಿಳೆಯರ ಪರಿಸ್ಥಿತಿ ಇದಕ್ಕಿಂತ ಭಿನ್ನವಾದರೂ ಅವರದೂ ಇನ್ನೊಂದು ಬಗೆಯ ಅತಂತ್ರ ಸ್ಥಿತಿ.ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ರೂಢಿಗತ ತಾರತಮ್ಯಗಳಿಂದ ಮಹಿಳೆಯರು ಸಂಕೀರ್ಣ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಸಮಸ್ಯೆಗಳಿಗೆ ಕೊನೆಯೇ ಇಲ್ಲ.ದೇಶಕ್ಕೆ ಸ್ವಾತಂತ್ರ್ಯ ಬಂದನಂತರ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಕ್ಕಿದೆ. ಶಿಕ್ಷಣದಿಂದ ಸಮಾನತೆ ಮತ್ತು ಆರ್ಥಿಕ ಸ್ವಾವಲಂಬಿಗಳಾದ ಮಹಿಳೆಯರೇ ಇತರ ಮಹಿಳೆಯರಿಗೂ ಮಾದರಿ. ಈಗಂತೂ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ದುಡಿಯುವ ಅವಕಾಶಗಳು ಸಿಗುತ್ತಿವೆ. ಸಿಕ್ಕ ಅವಕಾಶಗಳನ್ನೆಲ್ಲ ಅವರು ಬಳಸಿಕೊಳ್ಳುತ್ತಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಕಡಿಮೆಯೇನಲ್ಲ. ವಿಧಾನ ಸಭೆ ಹಾಗೂ ಸಂಸತ್ತಿನಲ್ಲಿ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ. ಆದರೆ ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಪಂಚಾಯತ್‌ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಪ್ರಾತಿನಿಧ್ಯ ಸಿಕ್ಕಿದೆ.ಈ ಸಂಸ್ಥೆಗಳಿಗೆ ಆರಿಸಿ ಬಂದ ಮಹಿಳೆಯರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಪುರುಷರು ಅವಕಾಶ ಕೊಡುತ್ತಿಲ್ಲ. ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕರೆ ಸಾಲದು. ಸಿಕ್ಕ ಅವಕಾಶಗಳನ್ನು ಸ್ವತಂತ್ರವಾಗಿ, ದಕ್ಷತೆಯಿಂದ ನಿರ್ವಹಿಸುವ ಅರ್ಹತೆ ಬೆಳೆಸಿಕೊಳ್ಳಬೇಕು.ಪತಿ, ಇಲ್ಲವೇ ಕುಟುಂಬದ ಸದಸ್ಯರ ನೆರವು ಪಡೆದು ಅಧಿಕಾರದ ಸ್ಥಾನಗಳನ್ನು ನಿಭಾಯಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅದರಿಂದ ಕೆಲವರಿಗೆ ಕೆಟ್ಟ ಹೆಸರು ಬಂದಿದೆ. ರಾಜಕೀಯ ಕ್ಷೇತ್ರಕ್ಕೆ ಬರುವ ಮಹಿಳೆಯರು ದಕ್ಷತೆಯಿಂದ ಸ್ವತಂತ್ರವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ರಾಜಕೀಯ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು.ಅದು ಸಾಧ್ಯವಾದರೆ ಮಹಿಳಾ ಪ್ರಾತಿನಿಧ್ಯಕ್ಕೆ ಅರ್ಥ ಬರುತ್ತದೆ. ಅಂತಹ ನಿರಂತರ ಪ್ರಯತ್ನಗಳಿಂದಲೇ ಮಹಿಳೆಯರು ಸಮಾನತೆ ಪಡೆಯಲು ಸಾಧ್ಯವಿದೆ. ಅದೇ ಮಹಿಳಾ ದಿನಾಚರಣೆಯ ಆಶಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.