`ಒಬ್ಬ ವ್ಯಕ್ತಿಯ ಜೀವನದಲ್ಲಿ ಎಪ್ಪತ್ತೈದನೇ ವರ್ಷ ವೈಯಕ್ತಿಕ ಸಂದರ್ಭ. ಆದರೆ ಒಂದು ಸಂಸ್ಥೆಯ ವಿಷಯಕ್ಕೆ ಬಂದರೆ ಅದೊಂದು ಮಹತ್ವದ ಘಟ್ಟ~. ಮಹತ್ವದ ಘಟ್ಟದಲ್ಲಿರುವ ಸಂಸ್ಥೆ ಮೈಸೂರು ಆಕಾಶವಾಣಿ ಕೇಂದ್ರ. ಈಗ ಅದು ಅಮೃತ ಮಹೋತ್ಸವದ ಸಮಾರೋಪದ ಸಂಭ್ರಮಾಚರಣೆಯಲ್ಲಿದೆ.

1935ರಲ್ಲಿ ಅಸ್ಥಿತ್ವಕ್ಕೆ ಬಂದ ಮೈಸೂರು ಆಕಾಶವಾಣಿ ಕೇಂದ್ರ ಈ ಎಪ್ಪತ್ತೈದು ವರ್ಷಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಬಿತ್ತರಿಸುವ ಮೂಲಕ ಕನ್ನಡಿಗರ ಮನೆ ಮಾತಾಗಿದೆ. ಹಲವು ಪ್ರಥಮಗಳನ್ನು ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡಿದೆ. ಈ ಆಕಾಶವಾಣಿ ಕೇಂದ್ರದ ಸ್ಥಾಪನೆಯ ಹಿಂದೆ ರೋಚಕ ಇತಿಹಾಸವಿದೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮನಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ.ಗೋಪಾಲಸ್ವಾಮಿ ಅವರೇ ಈ ಆಕಾಶವಾಣಿ ಕೇಂದ್ರದ ಜನಕ. ಕೇವಲ ತಮ್ಮ ಆಸಕ್ತಿ, ಶ್ರದ್ಧೆ, ಪರಿಶ್ರಮದಿಂದ ಅವರು ತಮ್ಮ ಮನೆಯಲ್ಲಿಯೇ ಬಾನುಲಿ ಕೇಂದ್ರವನ್ನು ಆರಂಭಿಸಿ ಮುನ್ನಡೆಸಿದರು.

ಭಾರತದ ಮೊತ್ತಮೊದಲ ಖಾಸಗಿ ಬಾನುಲಿ ಕೇಂದ್ರ ಎಂಬ ಹೆಗ್ಗಳಿಕೆ ಮೈಸೂರು ಆಕಾಶವಾಣಿಯದು. ರೇಡಿಯೊ ಪ್ರಸಾರ ವಿಶಾಲ ಜನಸ್ತೋಮವನ್ನು ಉದ್ದೇಶಿಸುವ ಬದಲು ಒಂದು ಸಣ್ಣ ಸಮುದಾಯದ ವಾಣಿಯಾಗಬೇಕು, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು ಎಂಬ ಆಶಯದಿಂದ ನ್ಯಾರೋಕ್ಯಾಸ್ಟಿಂಗ್ ಪ್ರಯೋಗ ಮಾಡಿದ ಕೀರ್ತಿ ಗೋಪಾಲಸ್ವಾಮಿ ಅವರಿಗೆ ಸಲ್ಲುತ್ತದೆ.

ಅಂದಹಾಗೆ ಈ ಕೇಂದ್ರದ ಮೊತ್ತಮೊದಲ ಪ್ರಸಾರ ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯಿಂದ ಆರಂಭವಾಯಿತು. ಹಾಗೆಯೇ, ಮೊದಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ಮೈಸೂರು ವಾಸುದೇವಾಚಾರ್ಯರು.

ದಿನೇ ದಿನೇ ಜನಪ್ರಿಯತೆ ಗಳಿಸುತ್ತಲೇ ಸಾಗಿದ ಈ ಕೇಂದ್ರಕ್ಕೆ ಗೋಪಾಲಸ್ವಾಮಿ ಅವರ `ಗೃಹ ಬಾನುಲಿ ಕೇಂದ್ರ~ದಲ್ಲಿ ಸ್ಥಳಾವಕಾಶ ಕಡಿಮೆಯಾಯಿತು. ಹೀಗಾಗಿ 1939ರಲ್ಲಿ ಅದು ಮೈಸೂರಿನ ದಸರಾ ವಸ್ತುಪ್ರದರ್ಶನದ ಹಳೆಯ ಕಟ್ಟಡಲ್ಲಿ (ಈಗಿನ ಮೈಸೂರು ಮೆಡಿಕಲ್ ಕಾಲೇಜು)ದಲ್ಲಿ ತನ್ನ ಪ್ರಸಾರ ಕಾರ್ಯವನ್ನು ಮುಂದುವರಿಯಿತು.

ಆರು ವರ್ಷಗಳ ಕಾಲ ಸ್ವಂತ ಖರ್ಚಿನಲ್ಲಿ ಗೋಪಾಲಸ್ವಾಮಿ ಅವರೊಬ್ಬರೇ ರೇಡಿಯೊ ಕೇಂದ್ರ ನಡೆಸಿದರು. ಆನಂತರ ಎದುರಾದ ಆರ್ಥಿಕ ತೊಂದರೆಗಳಿಂದಾಗಿ ಅದರ ಆಡಳಿತ ಮತ್ತು ನಿರ್ವಹಣೆಯನ್ನು ಮೈಸೂರು ಮಹಾನಗರ ಪಾಲಿಕೆಗೆ ವಹಿಸಿಕೊಟ್ಟರು.

ತದನಂತರ 1942ರ ಜನವರಿಯಿಂದ ಮೈಸೂರು ಸಂಸ್ಥಾನ (ಮಹಾರಾಜರ)ದ ಸರ್ಕಾರ ವಹಿಸಿಕೊಂಡಿತು. ಇದೇ ಸಂದರ್ಭದಲ್ಲಿ ರೇಡಿಯೊ ಕೇಂದ್ರಕ್ಕೆ `ಆಕಾಶವಾಣಿ~ ಎಂದು ನಾಮಕರಣ ಮಾಡಲಾಯಿತು.

ಮುಂದೆ ಆಕಾಶವಾಣಿ ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ನಂತರವೂ ಭಾರತದ ಎಲ್ಲ ರೇಡಿಯೊ ಕೇಂದ್ರಗಳೂ ಆಕಾಶವಾಣಿ ಎಂಬ ಹೆಸರನ್ನೇ ಬಳಸಿಕೊಂಡವು. ರೇಡಿಯೊ ಕೇಂದ್ರಕ್ಕೆ ಆಕಾಶವಾಣಿ ಎಂಬ ಹೆಸರನ್ನು ನೀಡಿದ ಕೀರ್ತಿ ಸಹ ಮೈಸೂರು ಆಕಾಶವಾಣಿಗೆ ಸಲ್ಲುತ್ತದೆ.

ಮೈಸೂರಿನ ಯಾದವಗಿರಿಯಲ್ಲಿರುವ ಆಕಾಶವಾಣಿ ಕೇಂದ್ರಕ್ಕೆ ನಿವೇಶನ ಗುರುತಿಸಿದ್ದವರೂ ಗೋಪಾಲಸ್ವಾಮಿಯವರೇ. ಮೈಸೂರು ದಿವಾನರ ಅಪ್ಪಣೆ ಪಡೆದ ಗೋಪಾಲಸ್ವಾಮಿ ಅವರು ಮೈಸೂರು ಸರ್ಕಾರದ ಪರವಾಗಿ ಖರೀದಿಸುವ ಏರ್ಪಾಡು ಮಾಡಿದರು. ಅವರ ವಿಶೇಷ ಯೋಜನೆಯಂತೆ ಮಹಾರಾಜರ ಸೇವೆಯಲ್ಲಿದ್ದ ಜರ್ಮನಿಯ ಆರ್ಕಿಟೆಕ್ಟ್ ಎಂಜಿನಿಯರ್ ಆಟ್ಟೊ ಕೊನಿಗ್ಸ್ಬರ್ಗರ್ ಅವರ ಸಲಹೆ, ಸಹಕಾರದಿಂದ ಮೈಸೂರು ಆಕಾಶವಾಣಿ ಕೇಂದ್ರ ತಲೆಎತ್ತಿತು.

ವಿಶಾಲ ಸ್ಥಳದಲ್ಲಿ ಉತ್ಕೃಷ್ಟ ದರ್ಜೆಯ ಸ್ಟುಡಿಯೊಗಳು ರೂಪುಗೊಂಡವು. 1944ರ ಫೆಬ್ರುವರಿಯಿಂದ ನೂತನ ಕಟ್ಟಡದಲ್ಲಿ ಮೈಸೂರು ಆಕಾಶವಾಣಿ ತನ್ನ ಪ್ರಸಾರ ಚಟುವಟಿಕೆಗಳನ್ನು ಮುಂದುವರಿಸಿತು.

1950ರ ದಶಕದಲ್ಲಿ `ವಿಶಾಲ ಕರ್ನಾಟಕ~ದ ರಾಜಧಾನಿಯಾಗಿ ಬೆಂಗಳೂರು ಮೈದಳೆಯಿತು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲೊಂದು ಆಕಾಶವಾಣಿ ಕೇಂದ್ರ ಇರಬೇಕೆಂದು ರಾಜಕೀಯ ಧುರೀಣರು ಆಲೋಚಿಸಿದರು.

ಹೊಸ ಕೇಂದ್ರ ಸ್ಥಾಪಿಸುವ ಬದಲು ಆ ವೇಳೆಗಾಗಲೇ ತನ್ನ ಪ್ರಸಾರ ವ್ಯವಸ್ಥೆಯಿಂದ ಖ್ಯಾತಿ ಪಡೆದಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು 1955ರಲ್ಲಿ ಬೆಂಗಳೂರಿಗೆ ವರ್ಗಾಯಿಸಲಾಯಿತು. ಆನಂತರ ಮೈಸೂರು ಆಕಾಶವಾಣಿ ಕೇಂದ್ರಕ್ಕೆ ಹತ್ತೊಂಬತ್ತು ವರ್ಷಗಳ ಕಾಲ ಗ್ರಹಣ ಹಿಡಿಯಿತು. ಅದು ಸರಿಯಾದದ್ದು 1974ರ ನವೆಂಬರ್ 14ರಂದು. ಕೇಂದ್ರದ ಪುನರಾರಂಭಕ್ಕೆ ಎಡತೊರೆ ವೆಂಕಟರಾಮಯ್ಯ ಎಂಬ ಎಂಜಿನಿಯರ್ ಮುಖ್ಯ ಕಾರಣಕರ್ತರು.

ಬೆಳಿಗ್ಗೆ 5.55ರಿಂದ ರಾತ್ರಿ 11.05ರ ವರೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಮೈಸೂರು ಆಕಾಶವಾಣಿ ನಡೆಸುತ್ತಿದೆ. ಅಲ್ಲದೇ ಕರ್ನಾಟಕದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪ್ರಸಾರ, ರಾಷ್ಟ್ರಭಾಷೆ ಹಿಂದಿಯ ಕಲಿಕಾ ಪಾಠಗಳನ್ನು ಪ್ರಸಾರ ಮಾಡುತ್ತದೆ.

`ಗಾನ ವಿಹಾರ~ ಹೆಸರಿನ ಸಂಗೀತ ಪಾಠ, `ಸುಗಮ ಸಂಗೀತ~ ಹೆಸರಿನ ಸಂಗೀತ ಪಾಠ ಹಾಗೂ ಇಡೀ ದೇಶದಲ್ಲಿಯೇ (ದೆಹಲಿ ಕೇಂದ್ರ ಹೊರತುಪಡಿಸಿ) ನಿತ್ಯ ನಾಲ್ಕು ಸಲ ವಾರ್ತೆಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಮೈಸೂರು ಆಕಾಶವಾಣಿಯಲ್ಲಿದೆ ಎಂದು ಈಗಿನ ನಿರ್ದೇಶಕಿ ಡಾ.ಎಂ.ಎಸ್. ವಿಜಯಾ ಹರನ್ ಹೇಳುತ್ತಾರೆ.

ಆರಂಭದ ದಿನಗಳಿಂದ ಇಂದಿನವರೆಗೂ ಮೈಸೂರು ಆಕಾಶವಾಣಿ ಕೇಂದ್ರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಬಂದಿದೆ. ಸಂಗೀತ ಕಲಾವಿದರು, ನಾಟಕಕಾರರು, ಸಾಹಿತಿಗಳು, ವಿಜ್ಞಾನಿಗಳು, ಮಾದರಿ ರೈತರು ಹಾಗೂ ಎಲ್ಲಾ ಕ್ಷೇತ್ರಗಳ ಪ್ರತಿಭಾವಂತರು ಇಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಪ್ರಮುಖ ಕಾರ್ಯಕ್ರಮಗಳು ಶ್ರೋತೃಗಳ ಮನಸ್ಸಿನಲ್ಲಿ ಇಂದಿಗೂ ಹಸಿರಾಗಿವೆ.

ಮೈಸೂರು ಆಕಾಶವಾಣಿ ಕೇಂದ್ರ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ. ಖ್ಯಾತ ಕಲಾವಿದೆ ಎಚ್.ಆರ್. ಲೀಲಾವತಿ ಸೇರಿದಂತೆ ಅನೇಕ ಖ್ಯಾತನಾಮರು ಕೇಂದ್ರದ ಅಭಿವೃದ್ಧಿಗೆ ದುಡಿದಿದ್ದಾರೆ.

ಕೇಂದ್ರದ ಜತೆಯಲ್ಲಿ ಅವರೂ ಬೆಳೆದಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ದಿಗ್ಗಜರಾದ ರಾಷ್ಟ್ರಕವಿ ಕುವೆಂಪು ಅವರನ್ನು ಪ್ರೊ.ದೇಜಗೌ, ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರನ್ನು ಡಾ. ಯು.ಆರ್.ಅನಂತಮೂರ್ತಿ, ಕವಿ ಪು.ತಿ.ನ ಅವರನ್ನು ಡಾ. ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರು ಸಂದರ್ಶಿಸಿದ್ದರು. ಈ ಸಂದರ್ಶನಗಳು ಸಾಹಿತ್ಯ ಹಾಗೂ ಸಾಂಸ್ಕೃತಿಕ ಮಹತ್ವ ಪಡೆದುಕೊಂಡಿವೆ.

`ಬಹುಜನ ಹಿತಾಯ ಬಹುಜನ ಸುಖಾಯ~ ಎಂಬ ಉನ್ನತ ಧ್ಯೇಯ ಹೊಂದಿರುವ ಮೈಸೂರು ಆಕಾಶವಾಣಿ ಅನೇಕ ಪ್ರಥಮಗಳನ್ನು ಕಂಡಿದೆ. ಅನೇಕ ಮಹನೀಯರ ನೋವು-ನಲಿವು, ಪರಿಶ್ರಮದ ಕೊಡುಗೆಗಳನ್ನು ದಾಖಲಿಸಿದೆ. ನೂರಾರು ಪ್ರತಿಭಾವಂತರಿಗೆ ವೇದಿಕೆ ಒದಗಿಸಿದೆ.

`ನವ್ಯ ಸಾಹಿತ್ಯ ಪ್ರಖರವಾಗಿದ್ದ ಕಾಲಘಟ್ಟದಲ್ಲಿ ನವೋದಯ ಕವಿಗಳ ವರ್ಚಸ್ಸು ಮಂಕಾಗಿತ್ತು. ಈ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನನ್ನಂತಹ ಎಷ್ಟೋ ಕವಿಗಳ ಕವಿತೆಗಳನ್ನು ಮೈಸೂರು ಆಕಾಶವಾಣಿ ಕಲಾವಿದರು ಹಾಡುವ ಮೂಲಕ ನಮ್ಮ ಮುಂದಿನ ಕಾವ್ಯ ಜೀವನಕ್ಕೆ ರಕ್ಷಣೆ ಮತ್ತು ಪೋಷಣೆ ಒದಗಿತು~ ಎಂಬ ಕುವೆಂಪು ಅವರ ಮಾತು ಮೈಸೂರು ಆಕಾಶವಾಣಿಯ ಜನಪ್ರಿಯತೆ ಸೂಚಿಸುತ್ತದೆ.

ಸಮಾರೋಪ
ಮೈಸೂರು ಆಕಾಶವಾಣಿ (ಎಫ್ಎಂ 100.6)ಯ ಅಮೃತ ಮಹೋತ್ಸವದ ವರ್ಷಾಚರಣೆಗೆ ಶನಿವಾರ (ಸೆ.10) ತೆರೆಬೀಳಲಿದೆ. ಸಮಾರೋಪದ ಅಂಗವಾಗಿ ಕೇಂದ್ರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಈ ಸಂದರ್ಭದಲ್ಲಿ ವಿದ್ವಾಂಸ ಕೆ.ಬಿ.ಪ್ರಸಾದ್ ಅವರು `ಆಕಾಶವಾಣಿ ಸಾಹಿತ್ಯ~ ಎಂಬ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಸಂಗೀತ ಶಾಸ್ತ್ರಜ್ಞ ಡಾ. ರಾ. ಸತ್ಯನಾರಾಯಣ ಸಮಾರೋಪ ಭಾಷಣ ಮಾಡಲಿದ್ದಾರೆ.

ಮೈಸೂರು ಎಂ.ನಾಗರಾಜ್ (ವಯೊಲಿನ್), ರಫೀಕ್ ಖಾನ್ (ಸಿತಾರ್), ತುಮಕೂರು ಬಿ.ರವಿಶಂಕರ್ (ಮೃದಂಗ), ರವೀಂದ್ರ ಯಾವಗಲ್ (ತಬಲ) ಜುಗಲ್ಬಂದಿ ಇದೆ.

ನಂತರ ಡಾ. ತುಳಸಿ ರಾಮಚಂದ್ರ ಮತ್ತು ತಂಡದ ಕಲಾವಿದರು ನೃತ್ಯರೂಪಕ ನಡೆಸಿಕೊಡಲಿದ್ದಾರೆ. ಅನಂತರ ಪ್ರಭುಸ್ವಾಮಿ ಚ.ಮಳೀಮಠ ಅವರು ರಚಿಸಿ ನಿರ್ದೇಶಿಸಿರುವ `ಪೇಪರಾಯಣ~ ಕಿರುನಾಟಕದ ಪ್ರಸ್ತುತಿ ನಿಲಯದ ಕಲಾವಿದರಿಂದ.
ಸ್ಥಳ: ಜಗನ್ಮೋಹನ ಅರಮನೆ ಸಭಾಂಗಣ, ಮೈಸೂರು. ಸಂಜೆ 6.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.