ಸಮಾವೇಶ ರದ್ದುಪಡಿಸಿದ ಸ್ವಾಭಿಮಾನಿ
ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದ್ದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ `ಸ್ವಾಭಿಮಾನಿ ಸಂಕಲ್ಪಯಾತ್ರೆ~ಗೆ ನಿರೀಕ್ಷಿಸಿದಷ್ಟು ಕಾರ್ಯಕರ್ತರು ಆಗಮಿಸದ ಹಿನ್ನೆಲೆಯಲ್ಲಿ ಬಿ.ಶ್ರೀರಾಮುಲು ಸಮಾವೇಶ ರದ್ದುಗೊಳಿಸಿ ನಂಜನಗೂಡಿಗೆ ತೆರಳಿದರು.
ಸಮಾವೇಶಕ್ಕೆ ಬೃಹತ್ ವೇದಿಕೆ ಸಿದ್ಧಪಡಿಸಿ, 4 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತ ಶ್ರೀರಾಮುಲು ಅವರ ಬೃಹತ್ ಕಟೌಟ್, ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಆದರೆ, ಸಮಾವೇಶಕ್ಕೆ ಹಾಜರಾದವರು ಸುಮಾರು 300 ಕಾರ್ಯಕರ್ತರು ಮಾತ್ರ. ಇದರಿಂದ ವಿಚಲಿತರಾದ ಪಕ್ಷದ ವಕ್ತಾರ ವೈ.ಎನ್. ಗೌಡ, ಶ್ರೀರಾಮುಲು ನಂಜನಗೂಡಿಗೆ ತೆರಳುತ್ತಿರುವುದರಿಂದ ಸಮಾವೇಶ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು.
ಇದರಿಂದ ಕೆರಳಿದ ಕಾರ್ಯಕರ್ತರು, `ಶ್ರೀರಾಮುಲು ಸಮಾವೇಶದಲ್ಲಿ ಏಕೆ ಪಾಲ್ಗೊಳ್ಳುತ್ತಿಲ್ಲ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಪಟ್ಟು ಹಿಡಿದರು. ನಾವು ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರದಿಂದ ಶ್ರೀರಾಮುಲು ಅವರನ್ನು ಕಾಣಲು ಬಂದಿದ್ದೇವೆ. ನಮ್ಮಂದಿಗೆ 150 ಕ್ಕೂ ಹೆಚ್ಚು ಮಂದಿ ಅಂಗವಿಕಲರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ್ದಾರೆ. ಹಾಗಾಗಿ ಸಮಾವೇಶ ರದ್ದುಗೊಳಿಸುವುದು ಸರಿಯಲ್ಲ ಎಂದು ವೈ.ಎನ್.ಗೌಡ ಅವರಿಗೆ ಮುತ್ತಿಗೆ ಹಾಕಿದರು. ಇದರಿಂದ ಕಂಗಾಲಾದ ಗೌಡ, `ನಂಜನಗೂಡಿನಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ಶ್ರೀರಾಮುಲು ಸಭೆ ಕರೆದಿದ್ದಾರೆ. ಆದ್ದರಿಂದ ಸಮಾವೇಶಕ್ಕೆ ಹಾಜರಾಗದೆ ಅಲ್ಲಿಗೆ ತೆರಳಿದ್ದಾರೆ~ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.