ಶುಕ್ರವಾರ, ಮೇ 7, 2021
26 °C

ಸಮುದಾಯ ಅಭಿವೃದ್ಧಿಗಾಗಿ ಮಠಗಳಿಗೆ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಎಲ್ಲ ಸಮುದಾಯಗಳ ಸಾಮಾಜಿಕ, ಧಾರ್ಮಿಕ ಹಾಗು ಶೈಕ್ಷಣಿಕ ಅಭಿವೃದ್ಧಿಯ ನಿಟ್ಟಿಯಲ್ಲಿ ಸರಕಾರ ಎಲ್ಲ ಜಾತಿಯ ಮಠಗಳಿಗೆ ಸಮಾನವಾಗಿ ಅನುದಾನ ಒದಗಿಸುತ್ತಿದೆ ಎಂದು ಕ್ಷೇತ್ರದ ಶಾಸಕ ನೇಮರಾಜ್‌ನಾಯ್ಕ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕೋಗಳಿತಾಂಡಾದಲ್ಲಿ ಭಾನುವಾರ ಗುರು ಗೋಪಾಲ ಸ್ವಾಮೀಜಿ ಶಾಂತಿಧಾಮದ ನೂತನ ಮಠಾಧಿಪತಿಗಳಾಗಿ ಸರದಾರ್ ಸೇವಾಲಾಲ್ ಸ್ವಾಮೀಜಿಯವರು ಪೀಠಾರೋಹಣಗೊಂಡ ಹಿನ್ನಲೆಯಲ್ಲಿ ಆಯೋಜಿಸಿದ್ದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾರುಕಟ್ಟೆಯಲ್ಲಿ ಹಣ ನೀಡಿ ಪಡೆಯಲಾಗದ ಆಧ್ಯಾತ್ಮಿಕ ಶಾಂತಿ ಮತ್ತು ಧಾರ್ಮಿಕ ಶಿಸ್ತು ನಮಗೆ ಮಠಗಳಿಂದ ಲಭಿಸುತ್ತಿದೆ. ಈ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮಠಗಳ ಶ್ರೇಯೋಭಿವೃದ್ಧಿಗೆ ಹಣ ನೀಡುವ ಸಂಪ್ರದಾಯ ಆರಂಭಿಸಿದರು. ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಠಗಳು, ಸರಕಾರ ನೀಡುವ ಅನುದಾನವನ್ನು ಸದ್ವಿನಿಯೋಗಪಡಿಸಿಕೊಳ್ಳುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.ರಾಜಕೀಯ ಹಿತಾಸಕ್ತಿಗಳ ಕಾರಣಗಳಿಗೆ ಯಡಿಯೂರಪ್ಪನವರು ಮಠಗಳಿಗೆ ಹಣ ನೀಡುವ ಪರಂಪರೆ ಆರಂಭಿಸಿದ್ದಾರೆ ಎಂಬ ವಿರೋಧ ಪಕ್ಷಗಳ ಟೀಕೆಗಳಲ್ಲಿ ಯಾವುದೆ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಹಡಗಲಿಯ ಶಾಸಕ ಚಂದ್ರಾನಾಯ್ಕ ಮಾತನಾಡಿ, ಗ್ರಾಮದ ಗುರು ಗೋಪಾಲ ಸ್ವಾಮೀಜಿ ಶಾಂತಿಧಾಮದಅಭಿವೃದ್ಧಿಗೆ ಒಂದು ಕೋಟಿ ಅನುದಾನ ಪಡೆಯುವ ನಿಟ್ಟಿನಲ್ಲಿ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜನಾಯ್ಕ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ಒಯ್ಯುವ ಭರವಸೆ ನೀಡಿದರು.

ಸಂಸದೆ ಜೆ. ಶಾಂತ ಮಾತನಾಡಿ, ಮತೀಯ ಸಾಮರಸ್ಯ ಮೂಡಿಸಲು ಮಠಗಳು ಶ್ರಮಿಸುತ್ತಿವೆ ಎಂದು ಹೇಳಿದರು.ನೇಮರಾಜನಾಯ್ಕ ದೇಣಿಗೆಯಾಗಿ ನೀಡಿದ ಬೆಳ್ಳಿಯ ಕಿರೀಟವನ್ನು ತುಮಕೂರು ಅನ್ನಪೂರ್ಣೇಶ್ವರಿ ಕ್ಷೇತ್ರದ ಮಹಾಲಿಂಗ ಸ್ವಾಮೀಜಿ ನೂತನ ಗುರು ಸರದಾರ ಸೇವಾಲಾಲ್ ಅವರಿಗೆ ಧಾರಣೆ ಮಾಡಿದರು. ಇದಕ್ಕೂ ಮುನ್ನ ಮಠದಲ್ಲಿ ಕೊಪ್ಪಳದ ಗೋಸಾಯಿ ಗುರೂಜಿ, ಸರದಾರ ಸೇವಾಲಾಲ್ ಅವರನ್ನು ಗುರು ಗೋಪಾಲ ಸ್ವಾಮೀಜಿ ಶಾಂತಿಧಾಮದ ನೂತನ ಪೀಠಾಧಿಪತಿಯಾಗಿಸುವ ಪ್ರಕ್ರಿಯೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಮೇದಾರ್ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ, ಹಾಲ ಶಂಕರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಸಿದ್ಧಬಸವ ಕಬೀರ್ ಸ್ವಾಮೀಜಿ, ಶಂಕರಲಿಂಗ ಸ್ವಾಮೀಜಿ ಮತ್ತು ಪ್ರಕಾಶ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಬಂಜಾರ ಸಮಾಜದ ಮಾಜಿ ಅಧ್ಯಕ್ಷ ಡಿಶ್ ಪಾಂಡುರಂಗನಾಯ್ಕ, ಮಾಜಿ ಶಾಸಕ ನಂದೀಹಳ್ಳಿ ಹಾಲಪ್ಪ, ಜಿ.ಪಂ.ಸದಸ್ಯೆ ರತ್ನಮ್ಮ ಸಿದ್ಧಲಿಂಗನಗೌಡರ, ಪೋಲೀಸ್ ರಾಮಾನಾಯ್ಕ, ಕೆಪಿಸಿಸಿ ಸದಸ್ಯ ಕೃಷ್ಣಾನಾಯ್ಕ, ಎಪಿಎಂಸಿ ಅಧ್ಯಕ್ಷ ಕೆ.ರೋಹಿತ್, ತಾ.ಪಂ. ಸದಸ್ಯೆ ಮಂಜುಳ ಕೃಷ್ಣನಾಯ್ಕ, ಲೋಹಿತಾ ಸಿದ್ದಪ್ಪ, ಕೋಗಳಿ ಗ್ರಾ.ಪಂ.ಅಧ್ಯಕ್ಷ  ಕೆ.ರತ್ನಾನಾಯ್ಕ ಉಪಸ್ಥಿತರಿದ್ದರು. ತಾ.ಪಂ. ಮಾಜಿ ಉಪಾಧ್ಯಕ್ಷ ಬಿಲ್ಲಾನಾಯ್ಕ ಪ್ರಾರ್ಥಿಸಿದರು. ಡಿ.ಟಿ. ತೇನಸಿಂಗನಾಯ್ಕ ಸ್ವಾಗತಿಸಿದರು. ಶಿವಕುಮಾರನಾಯ್ಕ ಮತ್ತು ಶಾಂತಿಧಾಮ ಟ್ರಸ್ಟ ಅಧ್ಯಕ್ಷ ಟಿ. ಪೂರ‌್ಯಾನಾಯ್ಕ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.