ಗುರುವಾರ , ಮೇ 26, 2022
31 °C

ಸರೋಜಿನಿ ಮಹಿಷಿ ವರದಿ ಪರಿಷ್ಕರಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.

ಶಾ.ಮಂ.ಕೃಷ್ಣರಾಯರ ಅಭಿನಂದನಾ ಸಮಿತಿಯು ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಗ್ರಂಥ `ಪದಪಥಿಕ~ ಬಿಡುಗಡೆ ಹಾಗೂ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸರೋಜಿನಿ ಮಹಿಷಿ ವರದಿ ಸಲ್ಲಿಸಿದ ಸಂದರ್ಭಕ್ಕೂ ಇಂದಿನ ಸಂದರ್ಭಕ್ಕೂ ತುಂಬಾ ವ್ಯತ್ಯಾಸವಿದೆ. ಆ ವರದಿಯನ್ನು ಹಾಗೆಯೇ ಅನುಷ್ಠಾನಕ್ಕೆ ತರುವುದರಿಂದ ಶೇ 20 ರಷ್ಟು ಮಾತ್ರ ಅನ್ವಯವಾಗುತ್ತದೆ.  ಆದ್ದರಿಂದ ಪರಿಷ್ಕರಿಸಬೇಕಾದ ಅವಶ್ಯಕತೆಯಿದೆ~ ಎಂದರು.

`ಕೇಂದ್ರ ಸರ್ಕಾರ ರಾಜ್ಯಕ್ಕೆ ಆದ್ಯತೆ ನೀಡಬೇಕು. ಉದ್ಯೋಗದ ಎಲ್ಲ ಇಲಾಖೆಗಳಲ್ಲಿ ಸ್ಥಳೀಯರಿಗೆ ಮೊದಲು ಆದ್ಯತೆ ನೀಡಬೇಕು. ಶಿಕ್ಷಣ ರಾಷ್ಟ್ರೀಕೃತವಾಗಬೇಕು. ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಬಾರದು. ಆಗಲೇ ಶಿಕ್ಷಣ ಎಲ್ಲರಿಗೆ ದೊರೆಯಲು ಸಾಧ್ಯ~ ಎಂದು ಒತ್ತಾಯಿಸಿದರು.

`ಒಂದರಿಂದ ಐದನೇ ತರಗತಿಯವರೆಗೆ ಮಾತೃ ಭಾಷೆ ಕಡ್ಡಾಯವಾಗಿರಬೇಕು. ನಂತರ ಇಂಗ್ಲಿಷ್ ಭಾಷೆ. ಹೀಗಾದರೆ, ರಾಜ್ಯ-ರಾಜ್ಯಗಳ ನಡುವೆ ಭಾಷೆಗಳ ಕಂದಕ ನಿರ್ಮಾಣವಾಗುವುದಿಲ್ಲ~ ಎಂದು ಹೇಳಿದರು.

`ಶಾ.ಮಂ.ಕೃಷ್ಣರಾಯರು ಭಾಷಾ ಭಾವೈಕ್ಯ ಸಮಾವೇಶದಿಂದ ಭಾಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸಿದರು. ನಮ್ಮ ಮಾತೃಭಾಷೆಗೆ ನಾವು ಗೌರವ ಸಲ್ಲಿಸಬೇಕು. ಅದರ ಜತೆಗೆ ನಮ್ಮ ಬದುಕು ಮತ್ತು ಭವಿಷ್ಯಕ್ಕೆ ಅಡಿಪಾಯ ಹಾಕಿಕೊಟ್ಟಂತಹ ನಾವು ಈಗಿರುವ ಭಾಷೆಗೂ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ~ ಎಂದರು.

ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಅವರು ಮಾತನಾಡಿ, `ಸ್ನಾತಕೋತ್ತರ ಪದವಿ ಪಡೆದು ಬರುವ ಇಂದಿನ ವಿದ್ಯಾರ್ಥಿಗಳು ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಬೇಕು. ಆಗಲೇ ವಿಧಾನ ಸೌಧದಲ್ಲಿರುವ ರಾಜಕಾರಣಿಗಳು ಜನತೆಯ ಹಿತದ ಬಗ್ಗೆ ಯೋಚಿಸಲು ಸಾಧ್ಯ~ ಎಂದರು.

`ಕನ್ನಡ ಚಳವಳಿಗಾರರು ಯಾವುದೇ ಒಂದು ನಿರ್ದಿಷ್ಟ ವಿಷಯವನ್ನು ಇಟ್ಟುಕೊಂಡು ಹೋರಾಟ ನಡೆಸಬೇಕು. ಆಗಲೇ ಹೋರಾಟಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಭಾಷಾಂತರದಿಂದ ಭಾಷೆ ಬೆಳೆಯಲು ಸಾಧ್ಯ. ಬೇರೆ ಭಾಷೆಗಳ ಉತ್ತಮವಾದ ಅನೇಕ ಕೃತಿಗಳನ್ನು ಭಾಷಾಂತರ ಮಾಡುವ ಅವಶ್ಯಕತೆ ಇಂದು ಒದಗಿ ಬಂದಿದೆ~ ಎಂದು ನುಡಿದರು.

ಬಹುಮಾನ ಅಥವಾ ಯಾವುದೇ ಪ್ರಶಸ್ತಿಗಳಿಗಾಗಿ ಸರ್ಕಾರವು ಲಾಬಿ ನಡೆಸುತ್ತದೆ. ಆದರೆ, ಶಾ.ಮಂ.ಕೃಷ್ಣರಾಯರು ಯಾವುದೇ ಲಾಬಿ ನಡೆಸಿಲ್ಲ. ಅದಕ್ಕೆ ಅವರಿಗೆ ಪ್ರತಿಷ್ಠಿತ  ಪ್ರಶಸ್ತಿಗಳು ಲಭಿಸಿಲ್ಲ~ ಎಂದು ಹೇಳಿದರು.

ರಂಗ ಕಲಾವಿದ ಡಾ.ಮಾ.ಹಿರಣ್ಣಯ್ಯ ಮಾತನಾಡಿ, `ಮಾತೃ ಭಾಷೆ ಬೇರೆಯಿರುವ ಕವಿಗಳೂ ಸಹ ಕನ್ನಡಕ್ಕೆ ಉತ್ತಮವಾದ ಕೊಡುಗೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಲೆಳೆಯುವ ಜನರು ಬಹಳಷ್ಟಿದ್ದಾರೆ. ಅವರಿಗೆ ಅಂಜದೆ, ಮುನ್ನಡೆದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ~ ಎಂದು ಹೇಳಿದರು.

`ಜಾತಿ ತಕ್ಕಡಿಯಲ್ಲಿ ಪ್ರಶಸ್ತಿಯನ್ನು ತೂಗಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ ಲೋಕಾಯುಕ್ತ ನೇಮಕವಾಗಿಲ್ಲ ಇದು ನಾಚಿಕೆಗೇಡಿನ ಸಂಗತಿ~ ಎಂದರು.

ಕಾರ್ಯಕ್ರಮದಲ್ಲಿ ಶಾ.ಮಂ.ಕೃಷ್ಣರಾಯ ದಂಪತಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.