ಮಂಗಳವಾರ, ಏಪ್ರಿಲ್ 13, 2021
23 °C

ಸರ್ಕಾರದ ನಿಲುವಿನಲ್ಲಿ ಸತ್ಯವೇ ಇಲ್ಲ

ಯತೀಶ್ ಕುಮಾರ್ ಜಿ.ಡಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮ ಘಟ್ಟಗಳ ಕೆಲ ತಾಣಗಳಿಗೆ ಯುನೆಸ್ಕೊ ವಿಶ್ವ ನೈಸರ್ಗಿಕ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿ ಮಾನ್ಯತೆ ನೀಡುವಾಗ ಪರಿಸರ ಅಭಿವೃದ್ಧಿಗೆ ಪೂರಕವಾಗುವಂತಹ ಕೆಲ ಸೂಚನೆಗಳನ್ನು ನೀಡುವ ಜೊತೆಯಲ್ಲಿ ಜನಪ್ರತಿನಿಧಿಗಳನ್ನು ಒಳಗೊಂಡ `ವಿಶ್ವ ಪರಂಪರೆ ತಾಣ ನಿರ್ವಹಣಾ ಸಮಿತಿ~ ರಚಿಸುವಂತೆಯೂ ಸಲಹೆ ನೀಡಿದೆ.ಯುನೆಸ್ಕೊ ನೀಡಿರುವ ಸಲಹೆಗಳನ್ನು ಗಮನಿಸಿದರೆ ಪರಿಸರಕ್ಕೆ ಮಾರಕವಾಗುತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ ಇದರಿಂದ ನಕ್ಸಲ್ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎನ್ನುವ ಸರ್ಕಾರದ ಹೇಳಿಕೆಯಲ್ಲಿ ಒಂದು ನಯಾ ಪೈಸೆ ಸತ್ಯವೂ ಇಲ್ಲ ಎನ್ನುವುದು ವೇದ್ಯವಾಗುತ್ತದೆ.ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಸಂರಕ್ಷಣಾ ಕಾಯ್ದೆ- 1980, ಕರ್ನಾಟಕ ಅರಣ್ಯ ಕಾಯ್ದೆ, ಜೈವಿಕ ವೈವಿಧ್ಯತೆ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದೆ. ಈ ಕಾಯ್ದೆಗಳನ್ನು ಹೊರತುಪಡಿಸಿ ಯುನೆಸ್ಕೊ ರಾಜ್ಯದ ಮೇಲೆ ಯಾವುದೇ ಕಾನೂನನ್ನು ಹೇರುವುದಿಲ್ಲ ಎನ್ನುವುದು ಅದು  ನೀಡಿರುವ ಸೂಚನೆಯಿಂದಲೇ ಸ್ಪಷ್ಟವಾಗುತ್ತದೆ.
ಯುನೆಸ್ಕೊ ಮಾನ್ಯತೆಗೆ ಅರ್ಜಿ ಸಲ್ಲಿಸುವ ಮುನ್ನವೇ ಪಶ್ಚಿಮ ಘಟ್ಟಗಳಿಗೆ ಜೈವಿಕವಾಗಿ ಯಾವ ಮಹತ್ವವಿದೆ ಎನ್ನುವ ಆಳವಾದ ಅಧ್ಯಯನವನ್ನು ನಡೆಸಲಾಗಿದೆ. ಬೆಂಗಳೂರು ಮೂಲದ `ಎಟ್ರಿ~ (ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್‌ಮೆಂಟ್) ಹಾಗೂ ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ 2006ರಿಂದಲೇ ಅಧ್ಯಯನ ನಡೆಸಿ ನೀಡಿದ ವರದಿಯೇ ಯುನೆಸ್ಕೊ ಮಾನ್ಯತೆಗೆ ಆಧಾರ.ಪಶ್ಚಿಮ ಘಟ್ಟಗಳು ಗುಜರಾತ್‌ನಿಂದ ಆರಂಭವಾಗಿ ಮಹಾರಾಷ್ಟ್ರದ ಮೂಲಕ ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಮೂಲಕ ಹಾದುಹೋಗಿ ಕನ್ಯಾಕುಮಾರಿ ಬಳಿ ಮುಕ್ತಾಯವಾಗುತ್ತದೆ. ಸಹ್ಯಾದ್ರಿ ಪರ್ವತ ಶ್ರೇಣಿ ಎಂದೂ ಕರೆಯುವ ಈ ಬೆಟ್ಟಗಳ ಸಾಲು ರಾಜ್ಯದಲ್ಲೇ ಸುಮಾರು ಶೇ 60ರಷ್ಟಿದೆ. ಈ ಬೆಟ್ಟಗಳ ಸಾಲು ಪ್ರಪಂಚದ ಹತ್ತು ಪ್ರಮುಖ ಜೈವಿಕ ವೈವಿಧ್ಯ ತಾಣಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.ಈ ಘಟ್ಟ ಪ್ರದೇಶವು ಸುಮಾರು ಐದು ಸಾವಿರಕ್ಕೂ ಹೆಚ್ಚು ಹೂಬಿಡುವ ಸಸ್ಯಗಳು, 139 ಸಸ್ತನಿಗಳು, 508 ಪಕ್ಷಿಗಳು ಹಾಗೂ 179 ಉಭಯವಾಸಿಗಳ ವಾಸಸ್ಥಾನವಾಗಿದೆ. ಇವುಗಳ ಜೊತೆಯಲ್ಲಿ ಸರಿಸುಮಾರು 325 ಕಣ್ಮರೆಯಾಗುವ ಹಂತದಲ್ಲಿರುವ ಜೀವಿಗಳು ಈ ಘಟ್ಟ ಪ್ರದೇಶದಲ್ಲೇ ಇವೆ ಎಂದು ಗುರುತಿಸಲಾಗಿದೆ. ಹೀಗಾಗಿ ಪಶ್ಚಿಮಘಟ್ಟ ಹಾಗೂ ಅಲ್ಲಿಯ ಕಾಡನ್ನು ರಕ್ಷಿಸಬೇಕು ಎನ್ನುವ ಉದ್ದೇಶದಿಂದಲೇ ಯುನೆಸ್ಕೊ ಪಶ್ಚಿಮಘಟ್ಟದ ಕೆಲ ಜೀವಸೂಕ್ಷ್ಮ ಪ್ರದೇಶಗಳಿಗೆ ಮಾನ್ಯತೆ ನೀಡಿದೆ.ನಿರ್ವಹಣಾ ಸಮಿತಿ: ಇಂತಹ ಅಪರೂಪದ ಜೀವವೈವಿಧ್ಯ ತಾಣವನ್ನು ರಕ್ಷಿಸಲು ಯುನೆಸ್ಕೊ ಸೂಚಿಸಿರುವ ವಿಶ್ವ ಪರಂಪರೆ ತಾಣ ನಿರ್ವಹಣಾ ಸಮಿತಿಯಲ್ಲಿ ಜನಪ್ರತಿನಿಧಿಗಳಿಗೆ (ಶಾಸಕರು, ಸಂಸದರು) ಸಹ ಸ್ಥಾನ ದೊರಕಿದೆ. ಇವರ ಜೊತೆಯಲ್ಲಿ ರಾಜ್ಯಗಳ ಮುಖ್ಯ ವನ್ಯಜೀವಿ ವಾರ್ಡನ್ (ಪಿಸಿಸಿಎಫ್- ವನ್ಯಜೀವಿ), ಜಿಲ್ಲಾಧಿಕಾರಿ, ಸಂಬಂಧಿಸಿದ ತಾಣದ ಜ್ಞಾನವಿರುವ ವಿಜ್ಞಾನಿ ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಹ ಸದಸ್ಯರಾಗಿ ಇರುತ್ತಾರೆ.ಐದು ವರ್ಷಗಳ ಕಾಲ ಈ ಸಮಿತಿಗಳು ಕೆಲಸ ಮಾಡಲಿದೆ. ಈ ಸಮಿತಿಗಳಲ್ಲಿ ಯುನೆಸ್ಕೊ ಪ್ರತಿನಿಧಿ ಅಥವಾ ಕೇಂದ್ರದ ಪ್ರತಿನಿಧಿಗೂ ಸ್ಥಾನವಿಲ್ಲ. ಹೀಗಾಗಿ ವಿದೇಶಿ ಸಂಸ್ಥೆ ತಮ್ಮ ಮೇಲೆ ಕಾನೂನನ್ನು ಹೇರುತ್ತದೆ ಎನ್ನುವ ಭಯಕ್ಕೆ ಕಾರಣವೇ ಇಲ್ಲ ಎನ್ನಬಹುದು.ಇಂತಹ ತಾಣಗಳ ನಿರ್ವಹಣಾ ಯೋಜನೆಯಲ್ಲಿ ಸ್ಥಳೀಯ ಸಮುದಾಯ, ಅರಣ್ಯ ಇಲಾಖೆ, ಜೀವ ವಿಜ್ಞಾನಿಗಳು, ಸ್ಥಳೀಯ ಸಾಂಪ್ರದಾಯಿಕ ಜ್ಞಾನ, ಆಧುನಿಕ ವಿಜ್ಞಾನವನ್ನು ಬಳಸಿಕೊಳ್ಳಬೇಕು. ಸಮಿತಿಯ ಮೂಲಕ ತಾಣ ನಿರ್ವಹಣೆಯಲ್ಲಿ ಪಾರದರ್ಶಕತೆ, ಬಹುಕಾಲದ ಯೋಜನೆ ಒಳಗೊಂಡಿರಬೇಕು ಎನ್ನುವ ಸೂಚನೆ ನೀಡಿದೆ.ಯುನೆಸ್ಕೊ ಸೂಚನೆಗಳನ್ನು ಗಮನಿಸಿದರೆ ಅರಣ್ಯ ಇಲಾಖೆ ಈಗಾಗಲೇ ಅರಣ್ಯ ಅಭಿವೃದ್ಧಿಯಲ್ಲಿ ಅಳವಡಿಸಿಕೊಂಡಿರುವ ಕೆಲ ಯೋಜನೆಗಳನ್ನು ಸಹ ಸಲಹೆ ರೂಪದಲ್ಲಿ ನೀಡಿದೆ. ಅರಣ್ಯ ರಕ್ಷಣೆಗೆ ಕಾಯಂ ಸಂಚಾರ ದಳ, ವರ್ಷ ಪೂರ್ತಿ ಸಂಚಾರ ದಳದ ನಿರ್ವಹಣೆ, ವೈರ್‌ಲೆಸ್ ವ್ಯವಸ್ಥೆ, ನಾಲ್ಕು ಚಕ್ರ ಚಾಲಿತ ವಾಹನ, ಮಾಹಿತಿ ವಿನಿಮಯಕ್ಕೆ ಕಂಪ್ಯೂಟರ್, ಸಿಬ್ಬಂದಿಗೆ ತರಬೇತಿ, ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವುದು, ಸಿಬ್ಬಂದಿಗೆ ವಿಮೆ, ಮನೆ ನೀಡುವ ಜೊತೆಯಲ್ಲಿ ಅರಣ್ಯ ಸಿಬ್ಬಂದಿಗೆ ಯುನೆಸ್ಕೊ ಮಾನ್ಯತಾ ತಾಣದ ವಿಶೇಷ ಭತ್ಯೆ ಮತ್ತು ಉತ್ತಮ ಸಿಬ್ಬಂದಿಗೆ ಪ್ರಶಸ್ತಿ ನೀಡಬೇಕು ಎನ್ನುವ ಸೂಚನೆ ನೀಡಿದೆ.ಸಲಹೆಗಳು: ಸ್ಥಳೀಯ ಜನರ ಜೊತೆ ನಡೆಯುವ ಸಂಘರ್ಷಗಳನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು, ಕಾಡಿನ ಅಂಚಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಒತ್ತು ನೀಡುವುದು, ಚಾರಣ ನಡೆಸುವುದು ಹಾಗೂ ಒಂದು ಗ್ರಾಮಕ್ಕೆ ಎರಡು ಮನೆಗಳನ್ನು ಹೋಮ್ ಸ್ಟೇ ಆಗಿ ಪರಿವರ್ತಿಸಲು ಅನುಮತಿ ನೀಡಬಹುದು ಎನ್ನುವ ಸಲಹೆ ನೀಡಲಾಗಿದೆ. ದಟ್ಟಾರಣ್ಯದಲ್ಲಿ ಪ್ರವಾಸೋದ್ಯಮ ನಿಯಂತ್ರಿಸುವುದರಿಂದ ಆಗುವ ಪರಿಣಾಮದ ಬಗ್ಗೆ ಸಂಶೋಧನೆ ನಡೆಸಬಹುದು ಎನ್ನುವ ಸಲಹೆ ಸಹ ಇದೆ.ಕಾಡಿನ ರಕ್ಷಣೆಗೆ ಬಲ: ಯುನೆಸ್ಕೊ ನೀಡಿರುವ ಸಲಹೆಯನ್ನು ಗಮನಿಸಿದರೆ ರಾಜ್ಯ ಸರ್ಕಾರಗಳು ಕಾಡಿನ ರಕ್ಷಣೆಗೆ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಮತ್ತಷ್ಟು ಬಲ ಬರುತ್ತದೆ. ವಿಶ್ವಪರಂಪರೆಯ ತಾಣದ ಮಾನ್ಯತೆಯಿಂದ ಹೊಸ ಕಾನೂನು ಜಾರಿಗೆ ಬರುವುದಿಲ್ಲ. ಈಗಿರುವ ಕಾನೂನು ಅಸ್ತಿತ್ವ ಕಳೆದುಕೊಳ್ಳುವುದೂ ಇಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.