ಸರ್ಕಾರದ ಬೊಕ್ಕಸ ಖಾಲಿ: ಶಿವಲಿಂಗೇಗೌಡ
ಅರಸೀಕೆರೆ: ಆರ್ಥಿಕವಾಗಿ ದುರ್ಬಲರಾದವರಿಗೆ ಸರ್ಕಾರ ನೀಡುತ್ತಿದ್ದ ಸಂಧ್ಯಾಸುರಕ್ಷಾ, ವಿಧವಾ ಹಾಗೂ ಅಂಗವಿಕಲರ ಮಾಸಿಕ ವೇತನವನ್ನು ಕಳೆದ ನಾಲ್ಕು ತಿಂಗಳಿನಿಂದ ಸ್ಥಗಿತಗೊಳಿಸಿರುವುದರಿಂದ ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಇಂದು ಬೀದಿಪಾಲಾಗಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಮಂಗಳವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಖಜಾನೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿ ಈ ಯೋಜನೆಗಳ ಹಣವನ್ನು ಬಿಡುಗಡೆ ಮಾಡದಂತೆ ಆದೇಶ ನೀಡಿರುವುದನ್ನು ನೋಡಿದರೆ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬುದು ಸಾಬೀತಾದಂತಾಗಿದ್ದು, ಜನ ಸಾಮಾನ್ಯರಿಗೆ ಕನಿಷ್ಠ ಹಣ ಒದಗಿಸಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಸ್ಥಿತಿ ದಿವಾಳಿ ಅಂಚಿಗೆ ತಲುಪಿರುವುದು ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.
ಸರ್ಕಾರದವರೇ ಕಳೆದ ಮೂರು ವರ್ಷಗಳಿಂದ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಮಾಸಿಕ ವೇತನ ಮಂಜೂರಾತಿ ನೀಡುತ್ತಿದ್ದಾರೆ. ಈಗ ಅನರ್ಹ ಫಲಾನುಭವಿಗಳಿದ್ದಾರೆ, ಅವರನ್ನು ಪರಿಶೀಲಿಸಬೇಕು ಎಂದು ಕುಂಟುನೆಪವೊಡ್ಡಿ ಅರ್ಹ ಫಲಾನುಭವಿಗಳಿಗೂ ತೊಂದರೆ ನೀಡುತ್ತಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ ಶೇಕಡ 40ರಷ್ಟು ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ಗಳನ್ನು ಫಲಾನುಭವಿಗಳಿಗೆ ವಿತರಿಸಿಲ್ಲ. ಆದರೆ ಈಗ ಅವರ ಮೇಲೂ ಸರ್ಕಾರ ಕೆಂಗ ಣ್ಣು ಬೀರಿದೆ. ಈ ಹಿಂದೆ ವಾರ್ಷಿಕ ಆದಾಯ ಧೃಢೀಕರಣ ಪತ್ರದ ಮೇಲೆ ಈ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಈಗ ವಾರ್ಷಿಕ ಆಧಾಯ ಧೃಢೀಕರಣ ಪತ್ರದ ಜತೆಗೆ ಬಿಪಿಎಲ್ ಕಾರ್ಡು ಹೊಂದಿದ್ದು ಅದರಲ್ಲಿ ಫಲಾನುಭವಿಯ ಭಾವಚಿತ್ರ ಕಡ್ಡಾಯವಾಗಿ ಇರಲೇಬೇಕು ಎಂಬ ನಿಯಮ ಹೇರಿ ಜನರಲ್ಲಿ ಗೊಂದಲ ನಿರ್ಮಿಸಿ ಜನಸಾಮಾನ್ಯರ ಆಶಾಭಾವನೆಗೆ ತಣ್ಣೀರು ಎರೆಚಿರುವ ಕ್ರಮ ಮಾತ್ರ ಸರಿಯಲ್ಲ ಎಂದು ಸರ್ಕಾರದ ದ್ವಿಮುಖ ನೀತಿಯನ್ನು ಅವರು ಖಂಡಿಸಿದರು.
ಪ್ರತಿಭಟನೆ ಎಚ್ಚರಿಕೆ: ತಾಲ್ಲೂಕಿನಲ್ಲಿ ಪ್ರತಿನಿತ್ಯ ವಿದ್ಯುತ್ ಸಮಸ್ಯೆ ಬಿಗಡಾಯಿಸುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ರೈತರಿಗೆ ದಿನಕ್ಕೆ ಎರಡು ಗಂಟೆಯೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಇದರಿಂದಾಗಿ ಬಡ ರೈತನ ಬದುಕು ದುಸ್ತರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಈ ಎಲ್ಲಾ ರೀತಿಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ಇನ್ನೊಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. ತಾ.ಪಂ ಅಧ್ಯಕ್ಷ ನಂಜುಂಡಪ್ಪ, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.