ಬುಧವಾರ, ಮೇ 25, 2022
23 °C

ಸರ್ಕಾರದ ವಿರುದ್ಧ ಕೆಜೆಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಬೆಲೆ ಏರಿಕೆ ಕೇಂದ್ರ ಸರ್ಕಾರದ ಕೊಡುಗೆಯಾಗಿದ್ದು, ತೈಲ ಬೆಲೆ ಏರಿಕೆ ಜತೆಗೆ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೆ ಏರಿದೆ. ಇದರಿಂದಾಗಿ ಜನ ಸಾಮಾನ್ಯರ ಜೀವನ ದುಸ್ತರವಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಸುಳ್ಳು  ಭರವಸೆಗಳನ್ನು ನೀಡುತ್ತಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುತ್ತ ಜನರನ್ನು ದಾರಿತಪ್ಪಿಸು ತ್ತಿದ್ದಾರೆ ಎಂದು ದೂರಿದರು.ರಾಜ್ಯ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 1 ರೂ. ದರಲ್ಲಿ 30 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿತ್ತು. ಜೂನ್‌ನಿಂದಲೇ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಘೋಷಿಸಿತ್ತು. ಆದರೆ, ಇದೀಗ 30 ಕೆ.ಜಿ. ಅಕ್ಕಿಗೆ ಬದಲಾಗಿ ಯೂನಿಟ್ ಪದ್ಧತಿ ಜಾರಿಗೆ ತಂದಿದೆ. ಹಾಗೆಯೇ ಎಪಿಎಲ್ ಪಡಿತರ ಚೀಟಿದಾರರಿಗೆ ಪಡಿತರ ಅಕ್ಕಿ ನೀಡದಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಿಲ್ಲೆಯಲ್ಲಿ ಮಹಿಳೆಯರ ಕಳ್ಳಸಾಗಾಣೆ, ಸರ ಕಳವು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.ನಗರಸಭೆ ಜಾರಿಗೆ ತಂದ ಕಸ ಸಂಗ್ರಹ ವ್ಯವಸ್ಥೆಗೆ ನಿಗದಿ ಮಾಡಿರುವ ಶುಲ್ಕ ದುಬಾರಿಯಾಗಿದೆ. ನೂತನ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲೇ ಜಿಲ್ಲಾಧಿಕಾರಿ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೂಡಲೇ ಇದನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ರಾಜ್ಯ ಸಮಿತಿ ಸದಸ್ಯ ಎಸ್.ರುದ್ರೇಗೌಡ, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ನಾಗರಾಜ್, ಐಡಿಯಲ್ ಗೋಪಿ, ಬಳ್ಳೆಕೆರೆ ಸಂತೋಷ್, ಅರ್ಚನಾ ಬಳ್ಳೆಕೆರೆ, ಮಾಲತಿ ರಾಜಶೇಖರ್ ಮತ್ತಿತರರು ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.