ಮಂಗಳವಾರ, ಜೂನ್ 15, 2021
27 °C

ಸರ್ಕಾರಿ ಕೆಲಸಕ್ಕೆ ವೈದ್ಯರ ಹಿಂದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಕೊರತೆ ಇರುವ ಕಡೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಸಿದ್ಧವಿದೆ. ಆದರೆ, ಖಾಸಗಿ ಆಸ್ಪತ್ರೆಗಳ ಭರಾಟೆಯಿಂದಾಗಿ ವೈದ್ಯರು ಸರ್ಕಾರಿ ಕೆಲಸಕ್ಕೆ ಬರುತ್ತ್ಲ್ಲಿಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಲೇಗೌಡ ಬೇಸರ ವ್ಯಕ್ತಪಡಿಸಿದರು.ಇಲ್ಲಿನ ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೈಸೂರು ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, ಅವರನ್ನು ನೇಮಕ ಮಾಡಿಕೊಳ್ಳಲು ಹೊಸ ನೀತಿ ರೂಪಿಸುವ ಅಗತ್ಯವಿದೆ. ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಸೇರಿದಂತೆ ಇನ್ನಿತರ ಹುದ್ದೆಗಳು ಖಾಲಿ ಇದ್ದು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.ತಾಲ್ಲೂಕಿನ ಸರಗೂರಿನಲ್ಲಿ ರೂ. 3.20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ಇಷ್ಟರಲ್ಲಿಯೇ ನಿರ್ಮಾಣವಾಗಲಿದೆ. ಡಿ.ಬಿ. ಕುಪ್ಪೆ ವ್ಯಾಪ್ತಿಯ ಸೇವೆಗಾಗಿ ತುರ್ತು ವಾಹನವೊಂದನ್ನು ಸಂಸದ ಆರ್.ಧ್ರುವನಾರಾಯಣ  ಕೊಡಿಸಲಿದ್ದಾರೆ ಎಂದು ತಿಳಿಸಿದರು.ಜನರ ದನಿ: ಇದಕ್ಕೂ ಮುನ್ನ ಸುಮಾರು 19 ಜನ ಕರೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಂಡರು.`ನಮ್ಮೂರಿನ ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ವಸತಿಗೃಹ ಇದ್ದರೂ ಇಲ್ಲಿ ವೈದ್ಯರು ವಾಸಿಸುತ್ತಿಲ್ಲ~ ಎಂದು ಗಂಡತ್ತೂರು ಗ್ರಾಮದ  ಮಂಜು ದೂರಿದರು.`ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಇನ್ನಿತರ ಕೊರತೆಯಿಂದಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ಬಡವರೂ ಖಾಸಗಿ ಆಸ್ಪತ್ರೆಗೆ ಹಣ ಸುರಿಯಬೇಕಾಗಿದೆ~ ಎಂದು ಕೆ.ಯಡತೊರೆ ಮಹೇಶ್ ಅಳಲು ತೋಡಿಕೊಂಡರು.`ರಾತ್ರಿ ಹೆರಿಗೆಗಾಗಿ ಮಹಿಳೆಯರನ್ನು ಆಸ್ಪತ್ರೆಗೆ ಕರೆತರುವ ಆಶಾ ಕಾರ್ಯಕರ್ತೆಯರಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ಕಲ್ಪಿಸಬೇಕು~ ಎಂದು ಹ್ಯಾಂಡ್‌ಪೋಸ್ಟ್‌ನ ಶೈಲಾ ಸುಧಾಮಣಿ ಮನವಿ ಮಾಡಿದರು.`ಈಚೆಗೆ ಸರಗೂರಿನಲ್ಲಿ ಆಸ್ಪತ್ರೆಯ ಮುಂಭಾಗದಲ್ಲೇ ಹೆರಿಗೆಯಾದ ಸುದ್ದಿ ಕಳವಳಕಾರಿಯಾದುದು. ವೈದ್ಯರ ನಿರ್ಲಕ್ಷ್ಯಕ್ಕೆ ಇದು ಕೈಗನ್ನಡಿ~ ಎಂದು ಮಹೇಶ್ ಮತ್ತು ಎಚ್.ಕೆ. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.ಗುರುಸ್ವಾಮಿ, ಮೇಟಿಕುಪ್ಪೆ, ಇಟ್ನರಾಜಣ್ಣ, ಗಾಯತ್ರಿ, ಮಟಕೆರೆ, ಈಶ್ವರ್,ಕೆ.ಯಡತೊರೆ, ಪುಟ್ಟಯ್ಯ, ಹೆಬ್ಬಲಗುಪ್ಪೆ, ರಾಜು, ಕೆ.ಜಿ.ಹಳ್ಳಿ, ರವಿ, ತುಂಬಸೋಗೆ, ಶಿವಕುಮಾರ್, ನಂಜೀಪುರ ಮತ್ತಿತರರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಇದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಉತ್ತರ ನೀಡಿದರು.

 

ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಎಲ್.ರವಿ, ಮಂಜುಕೋಟೆ, ಕನ್ನಡ ಪ್ರಮೋದ್, ಅಂಕಪ್ಪ, ಎಂ.ಎಲ್.ರವಿಕುಮಾರ್, ಶ್ರೀನಿಧಿ, ರಘು, ಬಸವರಾಜು, ಸತೀಶ್ ಆರಾಧ್ಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.