ಮಂಗಳವಾರ, ಮಾರ್ಚ್ 2, 2021
23 °C
ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅಭಿಮತ

ಸರ್ಕಾರಿ ವಲಯದಲ್ಲಿ ಶಿಸ್ತು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ವಲಯದಲ್ಲಿ ಶಿಸ್ತು ಅಗತ್ಯ

ಬೆಂಗಳೂರು: ‘ಮೀಸಲಾತಿ ನೀಡಿದರೆ ತಮ್ಮ ಉದ್ಯಮ ಸಹ ಸರ್ಕಾರಿ ವ್ಯವಸ್ಥೆಯಂತೆ ಹಾಳಾಗುತ್ತದೆ ಎನ್ನುವ ಭಯ ಖಾಸಗಿಯವರಲ್ಲಿ ಮನೆ ಮಾಡಿದೆ. ಅದನ್ನು ಹೊಗಲಾಡಿಸಬೇಕಾದರೆ ನಾವು ಮೊದಲು ಸರ್ಕಾರಿ ವಲಯದಲ್ಲಿ ಶಿಸ್ತು ತರಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅಭಿಪ್ರಾಯಪಟ್ಟರು.ಬಹುಜನ ವಿದ್ಯಾರ್ಥಿ ಸಂಘದ (ಬಿವಿಎಸ್‌) ರಾಜ್ಯ ಘಟಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ’ ವಿಷಯ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.‘ಖಾಸಗಿ ರಂಗದಲ್ಲಿ ಮೀಸಲಾತಿ ನೀಡಬೇಕಾದ ವಿಚಾರದಲ್ಲಿ ಎರಡು ಮಾತಿಲ್ಲ. ಎಲ್ಲರಿಗೂ ಪ್ರಾತಿನಿಧ್ಯ ಸಿಗಬೇಕು. ಅಭಿವೃದ್ಧಿಯ ಫಲ ಎಲ್ಲರಿಗೂ ಸಮಾನವಾಗಿ ದೊರೆಯಬೇಕು. ಆದರೆ, ಅರ್ಹರನ್ನು ಮಾತ್ರ ಮೀಸಲಾತಿ ಅಡಿ ಆಯ್ಕೆ ಮಾಡಬೇಕು. ಉಳಿದೆಲ್ಲ ವಿಚಾರಗಳನ್ನು ಮೀಸಲಾತಿ ವಿಚಾರದಲ್ಲಿ ಪರಿಗಣನೆಗೆ ತೆಗೆದುಕೊಳ್ಳಬಾರದು’ ಎಂದು ತಿಳಿಸಿದರು.‘ನಮ್ಮ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಪದವೀಧರರು ಸಹ ಎಷ್ಟರ ಮಟ್ಟಿಗೆ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ. ಜತೆಗೆ, ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾವು ಅವರಿಗೆ ಎಷ್ಟು ತರಬೇತಿ ನೀಡುತ್ತಿದ್ದೇವೆ  ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಹೀಗಾಗಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ವೃತ್ತಿಪರ ಕೋರ್ಸ್‌ಗಳನ್ನು ಜಾರಿಗೆ ತರುತ್ತಿದ್ದೇವೆ’ ಎಂದು ಹೇಳಿದರು.ಪತ್ರಕರ್ತ ಪಾರ್ವತೀಶ್‌ ಮಾತನಾಡಿ, ‘ಮೀಸಲಾತಿಗೆ ಸಂಬಂಧಪಟ್ಟ ಸಂವಿಧಾನದ ಆಶಯಗಳ ಅನುಷ್ಠಾನ ಮತ್ತು ಹಿಂದುಳಿದವರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದ ಬಳಕೆ ಬಗ್ಗೆ ಮೇಲ್ವಿಚಾರಣೆ ನಡೆಸುವಂತಹ ವ್ಯವಸ್ಥೆ ನಮ್ಮಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ’ ಎಂದರು.‘ರಾಜ್ಯದಲ್ಲಿ 8 ಲಕ್ಷದಷ್ಟು ಸರ್ಕಾರಿ ನೌಕರರಿದ್ದಾರೆ. ಸಂವಿಧಾನದ ಆಶಯದಂತೆ ಒಂದೊಮ್ಮೆ ಮೀಸಲಾತಿ ನೀಡಿದ್ದಾದರೆ ಈ ನೌಕರರ ಪೈಕಿ 3.45 ಲಕ್ಷದಷ್ಟು ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು ಇರಬೇಕಿತ್ತು. ಆದರೆ ವಾಸ್ತವದ ಚಿತ್ರಣ ಹಾಗಿಲ್ಲ’ ಎಂದು ತಿಳಿಸಿದರು.‘ಈಗಾಗಲೇ ಇರುವ ಮೀಸಲು ಸಂಬಂಧಪಟ್ಟವರಿಗೆ ತಲುಪುತ್ತಿದೆಯೇ ಎಂದು ಮೇಲ್ವಿಚಾರಣೆ ನಡೆಸುವ, ಲೋಪಗಳನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನು ನಾವೆಲ್ಲರೂ ರೂಪಿಸಿಕೊಳ್ಳಬೇಕಿದೆ. ಎಲ್ಲೆಡೆಯಿಂದ ಮಾಹಿತಿ ತರಿಸಿಕೊಂಡು ಅಂಕಿಸಂಖ್ಯೆಗಳನ್ನು ಸಮಾಜದ ಎಂದು ತೆರೆದಿಡುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.ವಕೀಲ ಶ್ರೀಧರ್ ಪ್ರಭು ಮಾತನಾಡಿ, ‘2005 ರಿಂದ 2013ರ ವರೆಗೆ ಸುಮಾರ ₹36.5 ಲಕ್ಷ ಕೋಟಿ ಸಬ್ಸಿಡಿ ಹಣ ಖಾಸಗಿ ಕಂಪೆನಿಗಳಿಗೆ ಸಂದಿದೆ. ಇಷ್ಟೆಲ್ಲ ಪಡೆದವರಿಗೆ ನ್ಯಾಯಬದ್ಧವಾದ ಮೀಸಲಾತಿ ನೀಡಬೇಕೆಂಬ ಪ್ರಜ್ಞೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘ಸರ್ಕಾರದ ಲಾಭ ಪಡೆಯುತ್ತಿರುವ ಕಾರ್ಪೊರೇಟ್‌ ಕಂಪೆನಿಗಳು ಪಡೆಯುತ್ತಿರುವ ಸಬ್ಸಿಡಿ ಹಣ ನಮ್ಮದಾದ್ದರಿಂದ ಆ ಕಂಪೆನಿಗಳಿಗೆ ನಾವು ಕೂಡ ಬಂಡವಾಳದಾರರು ಇದ್ದಂತೆ. ಹೀಗಾಗಿ, ಖಾಸಗಿ ವಲಯದಲ್ಲಿ ನಾವು ಮೀಸಲಾತಿಯನ್ನು ದೈನ್ಯದಿಂದ ಬೇಡುವ ಬದಲು ಧೈರ್ಯದಿಂದ ಕೇಳಿ ಪಡೆಯುವಂತಾಗಬೇಕು’ ಎಂದು ಹೇಳಿದರು.ಸಂವಿಧಾನದಲ್ಲಿರುವ ಮೀಸಲಾತಿ ಆಶಯಗಳನ್ನು ವಿಫಲಗೊಳಿಸಿದವರನ್ನು ಶಿಕ್ಷಿಸಲು ಸರ್ಕಾರ ಏನು ಮಾಡಿದೆ? ಇದನ್ನು ಪತ್ತೆ ಹಚ್ಚುವ ಕೆಲಸವನ್ನು ನಾವು ಮಾಡಬೇಕಿದೆ.

- ಪಾರ್ವತೀಶ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.