ಶುಕ್ರವಾರ, ಏಪ್ರಿಲ್ 16, 2021
31 °C

ಸರ್ಕಾರಿ ಶಾಲೆಗೆ ಶತಮಾನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಮೆದಕಿನಾಳದ ಸರ್ಕಾರಿ ಪ್ರಾಥಮಿಕ ಶಾಲೆ ಇದೇ 2013 ಕ್ಕೆ ನೂರು ವರ್ಷ ಪೂರ್ಣಗೊಳಿಸುತ್ತಿದೆ.  ನೂರು ವರ್ಷ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಶಾಲೆಯ ಶತಮಾನೋತ್ಸವ ಆಚರಿಸಲು ಸಿದ್ದತೆ ನಡೆದಿದೆ.1913 ರಲ್ಲಿ ಗುಡಿಯೊಂದರಲ್ಲಿ ಆರಂಭಗೊಂಡ ಈ ಸರ್ಕಾರಿ ಪ್ರಾಥಮಿಕ ಶಾಲೆ ನಂತರ ಗುಡಿಸಲು ಒಂದರಲ್ಲಿ ತನ್ನ ತರಗತಿಗಳನ್ನು ನಡೆಸಿತು. ಆಗ ಮೆದಕಿನಾಳ ಗ್ರಾಮದಲ್ಲಿ ಮಾತ್ರ ಸರ್ಕಾರಿ ಶಾಲೆ ಇತ್ತು. ಈ ಗ್ರಾಮದ ಸುತ್ತಮುತ್ತ ಬರುವ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು ನಡೆದುಕೊಂಡೇ ಬಂದು ಗುಡಿಸಲಿನಲ್ಲಿ ನಡೆಯುತ್ತಿದ್ದ ಶಾಲೆಯಲ್ಲಿಯೇ ಪಾಠ ಕಲಿಯುತ್ತಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.ಶತಮಾನದ ಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಕಲೆತ ಅನೇಕ ವಿದ್ಯಾರ್ಥಿಗಳು ಶಿಕ್ಷಕರು, ಎಂಜನಿಯರ್ ಸೇರಿದಂತೆ ಇನ್ನೀತರ ಉನ್ನತ ಸ್ಥಾನದ್ಲ್ಲಲಿ ಇದ್ದಾರೆಂದು ಗ್ರಾಮದ ಮುಖಂಡ ಮಲ್ಲಿಕಾರ್ಜುನ ಪರಡ್ಡಿ ಹೇಳುತ್ತಾರೆ.1973 ರಲ್ಲಿ ಎರಡು ಶಾಲಾ ಕೊಠಡಿಗಳನ್ನು ಸರ್ಕಾರ ನೀಡಿತ್ತು. ಗುಡಿಸಲು ಶಾಲೆಯಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಈ ಸರ್ಕಾರಿ ಶಾಲೆ ಇಂದು  ಹೆಮ್ಮರವಾಗಿ ಬೆಳೆದು ನಿಂತಿದೆ. 1ನೇ ತರಗತಿಯಿಂದ 8ನೇ ತರಗತಿವರೆಗೆ ನಡೆಯುತ್ತಿರುವ ಈ ಶಾಲೆಯಲ್ಲಿ ಇಂದು ಸುಮಾರು 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆಂದು ಶಾಲೆಯ ಮುಖ್ಯೋಪಾಧ್ಯಾಯ ಜಮೀರ್ ಅಹ್ಮದ್ ತಿಳಿಸುತ್ತಾರೆ.2013ನೇ ಈ ಶಾಲೆಗೆ ನೂರುವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಅರ್ಥಪೂರ್ಣ ಸಮಾರಂಭ ಏರ್ಪಡಿಸಲು ಶಾಸಕ ಪ್ರತಾಪಗೌಡ ಪಾಟೀಲ ಮುಂದಾಗಿದ್ದಾರೆ. ಈಗಾಗಲೇ ಶಾಲಾ ಉಸ್ತುವಾರಿ ಸಮಿತಿ ಸದಸ್ಯರಿಗೆ ಹಾಗೂ ಗ್ರಾಮದ ಮುಖಂಡರಿಗೆ ಸಭೆ ಕರೆದು ಶತಮಾನೋತ್ಸವ ಸಂಬಂಧ ಚರ್ಚಿಸುವಂತೆ ಸಲಹೆ ನೀಡಿದ್ದಾರೆ.ಶತಮಾನೋತ್ಸವ ಸವಿನೆನಪಿಗಾಗಿ ಶತಮಾನೋತ್ಸವ ಭವನದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕ ಪ್ರತಾಪಗೌಡ ಪಾಟೀಲ ನೀಡಿದ್ದಾರೆ. ಗ್ರಾಮೀಣ ಪ್ರದೇಶ ಸರ್ಕಾರಿ ಶಾಲೆಯೊಂದು ನೂರು ವರ್ಷ ಪೂರೈಸಿರುವುದು  ಹೆಮ್ಮೆಯ ಸಂಗತಿ ಎಂದು ತಿಳಿಸಿದ ಅವರು ಶತಮಾನೋತ್ಸವ ಸಮಾರಂಭಕ್ಕೆ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರನ್ನು ಕರೆಯಿಸಿ ಅರ್ಥಪೂರ್ಣ ಸಮಾರಂಭವನ್ನಾಗಿ ಮಾಡಲಾಗುವುದು ಎಂದು ಪಾಟೀಲ ಈಗಾಗಲೇ ಭರವಸೆ ನೀಡಿದ್ದಾರೆ.2013 ಒಳಗಾಗಿ ಶತಮಾನೋತ್ಸವ ಸಮಾರಂಭ ನಡೆಸಬೇಕಾಗಿದೆ. ಇದಕ್ಕೆ ಗ್ರಾಮದ ಮುಖಂಡರು, ಸಂಘ, ಸಂಸ್ಥೆಗಳು ಪ್ರತಿನಿಧಿಗಳು ಶಾಲಾ ಆಡಳಿತ ಮಂಡಳಿಯೊಂದಿಗೆ ಸಹಕರಿಸಿ ಅರ್ಥಪೂರ್ಣ ಸಮಾರಂಭಕ್ಕೆ ಸಾಕ್ಷಿಯಾಗಬೇಕು ಎಂಬುದು ಗ್ರಾಮದ ಶಿಕ್ಷಣ ಪ್ರೇಮಿಗಳ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.