ಬುಧವಾರ, ಜೂನ್ 16, 2021
23 °C
ಶೈಕ್ಷಣಿಕ ಅಂಗಳ

ಸರ್ಕಾರಿ ಶಾಲೆಗೆ ‘ಹಸಿರು ’ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ/ ಎಂ. ಖಾಸಿಂ ಅಲಿ Updated:

ಅಕ್ಷರ ಗಾತ್ರ : | |

ಲಿಂಗಸುಗೂರು: ತಾಲ್ಲೂಕಿನ ಪೈದೊಡ್ಡಿ ಕ್ಲಸ್ಟರ್‌ಗೆ ಒಳಪಡುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿಕ್ಕದಾದ ಆವರಣದಲ್ಲಿ ಹಸಿರಿನಿಂದ ಕಂಗೊಳಿಸುವ ಸುಂದರ ತೋಟ ಎಲ್ಲರ ಆಕರ್ಷಣೆ. ಆವರಣದಲ್ಲಿ ಕಾಲಿಡುವ ಮಕ್ಕಳಿಗೆ ಉತ್ತಮ ಪರಿಸರ ವಾಸನೆ. ಕಲಿಕೆಗೆ ಪೂರಕವಾಗುವ ಒಳ್ಳೆಯ ವಾತಾವರಣವನ್ನು ಶಾಲಾ ಆವರಣವು  ಮಕ್ಕಳಗೆ ಕಲ್ಪಿಸಿಕೊಟ್ಟಿದೆ.ಶಾಲೆಯ ಕಿರಿದಾದ ಆವರಣದಲ್ಲಿ ವಿವಿಧ ಬಗೆಯ ಗಿಡ ಮರಗಳನ್ನು ಬೆಳೆಸಿ ಪರಿಸರ ಕಾಳಜಿ ಮೆರೆದಿದೆ. ಶಾಲೆಯ ಪರಿಸರ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ‘ಹಸಿರು ಶಾಲೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಶಾಲೆಗೆ ಮತ್ತಷ್ಟು ಉತ್ತಮವಾದ ಪೂರಕ ವಾತಾವರಣ ಕಲ್ಪಿಸಿದೆ. ಅವ್ಯವಸ್ಥೆ ಹಾಗೂ ಜಾಗದ ಅಭಾವವಿದ್ದರೂ ಸಾಧನೆಗೆ ಮೆಟ್ಟಿಲು ಮಾಡಿಕೊಂಡಿರುವ ಶಾಲೆಯ ಸಾಧನೆ ತಾಲ್ಲೂಕಿನ ಎಲ್ಲ ಶಾಲೆಗೆ ಮಾದರಿಯಾಗಿದೆ ಎಂದು ಹೇಳಬಹುದು.ಈ ಶಾಲೆ ಆರಂಭಗೊಂಡಿದ್ದು 2008ರಲ್ಲಿ.  ಆರಂಭದಲ್ಲಿ ಮಕ್ಕಳಿಗೆ ಪಾಠ ಮಾಡಲು ಸ್ಥಳ ಇಲ್ಲದೇ ಮರದ ಕೆಳಗೆ, ಗುಡಿಯಲ್ಲಿ ಪಾಠ ಮಾಡಲಾಗುತ್ತಿತ್ತು. ಹಳೆ ಗೋಲಪಲ್ಲಿಯ ಆದಪ್ಪ ಛಲವಾದಿ ತಮ್ಮ 1ಎಕರೆ 15 ಗುಂಟೆ ಜಮೀನಿನಲ್ಲಿ ಶಾಲೆ ನಿರ್ಮಾಣಕ್ಕೆ 75x75 ಅಡಿಗಳಷ್ಟು ಜಮೀನು ದಾನ ನೀಡಿದರು.  ಶಾಲೆಯ ಏಕೋಪಾಧ್ಯಾಯ ಅನಂತ ಅವರು ಕೇವಲ  5 ವರ್ಷಗಳಲ್ಲಿ ಗಿಡಮರಗಳನ್ನು ಬೆಳಸಿ ಶಾಲೆಯ ಆವರಣ  ಹಸಿರುಮಯ ಮಾಡಿದ್ದಾರೆ.  ಜೊತೆಯಲ್ಲಿ ಮಕ್ಕಳ ಕಲಿಕೆಗೆ ಕೊರತೆಯಾಗದ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಶಾಲೆಯ ಮುಂಭಾಗದಲ್ಲಿ ಮಾವು, ಬಾದಾಮಿ, ಅಶೋಕ, ತೆಂಗು, ಲಿಂಬೆ, ಸಪೋಟಾ, ಬಾಳೆ, ಪಪ್ಪಾಯಿ, ಪೇರಲ, ನುಗ್ಗಿ ಗಿಡಗಳನ್ನು ಹಾಕಲಾಗಿದೆ. ಶಾಲೆ ಬಿಸಿಯೂಟಕ್ಕೆ ಅನುಕೂಲಕ್ಕೆಂದು ಟೊಮೆಟೊ ಬದನೆಕಾಯಿ, ಹೀರೆಕಾಯಿ, ಕೋಸುಗಡ್ಡೆ ತರಕಾರಿಗಳು ಬೆಳೆಯಲಾಗಿದೆ. ಮಲ್ಲಿಗೆ ಹಾಗೂ ಮೂರು ಬಗೆಯ ದಾಸವಾಳ ಹೂ ಗಿಡಗಳು ಸೇರಿ ಒಟ್ಟು 56 ಬಗೆಯ ಗಿಡ,ಮರಗಳು ಬೆಳಸಲಾಗಿದೆ.ಜಿಲ್ಲಾ ಪಂಚಾಯಿತಿ ಇಲಾಖೆ ಹಾಕಿದ ಸಾರ್ವಜನಿಕ ಕೊಳವೆ ಬಾವಿಗೆ 1 ಅಶ್ವಶಕ್ತಿಯ ಪಂಪ್ ಅಳವಡಿಸಲಾಗಿದೆ. ಇಲ್ಲಿಯ ನೀರನ್ನೇ ಕುಡಿಯಲು ಮತ್ತು ತೋಟಕ್ಕೆ ಬಳಸಲಾಗುತ್ತಿದೆ. ಪ್ರಾಯೋಗಿಕವಾಗಿ ಹಾಕಿದ ಕೋಸುಗಡ್ಡೆ  ಹುಲುಸಾಗಿ ಬೆಳದಿದೆ. ಬೇಸಿಗೆ ರಜೆಯಲ್ಲಿ ತೋಟ ನೋಡಿಕೊಳ್ಳುವ ಜವಾಬ್ದಾರಿ ಎಸ್‌ಡಿಎಂಸಿ ಅಧ್ಯಕ್ಷ ಆದಪ್ಪ ವಹಿಸಿಕೊಳ್ಳುತ್ತಾರೆ. ಈ ತೋಟದ ಅಭಿವೃದ್ಧಿಗೆ ಎಸ್‌ಡಿಎಂಸಿ ಅಧ್ಯಕ್ಷ  ಸೇರಿದಂತೆ ಸಿಆರ್‌ಸಿ ಹುಲಗಪ್ಪ  ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ಅನಂತ ಹೇಳುತ್ತಾರೆ.‘ಅಭಿವೃದ್ಧಿಗೆ ಒತ್ತು’

ಐದು ವರ್ಷದಿಂದ ಶಾಲೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ಶಾಲೆಯ ಮುಖ್ಯಶಿಕ್ಷಕರು ಮಕ್ಕಳ ಕಲಿಕೆ  ಮತ್ತು ಶಾಲೆಯ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ಶಾಲೆಯ ಕಾಂಪೌಂಡ್ ಗೋಡೆ ಅರ್ಧ ಕಟ್ಟಲಾಗಿದೆ. ಇನ್ನೂ ಅರ್ಧ ಕಾಂಪೌಂಡ್ ನಿರ್ಮಿಸಲು ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿದೆ.

-ಆದಪ್ಪ ಛಲವಾದಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.