ಬುಧವಾರ, ಮೇ 12, 2021
24 °C

ಸರ್ಕಾರಿ ಸ್ವತ್ತಿನ ಮೇಲೆ ಕಾಕದೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಗೋಮಾಳ, ಕೆರೆ-ಕಟ್ಟೆಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆ. ಸುಪ್ರೀಂ ಕೋರ್ಟ್ ಕೂಡ ಇವುಗಳ ಒತ್ತುವರಿ ತಡೆಗಟ್ಟಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ. ಈ ನಡುವೆಯೂ ನಗರಸಭೆ ವ್ಯಾಪ್ತಿ ಸಾರ್ವಜನಿಕ ಸ್ವತ್ತುಗಳ ಒತ್ತುವರಿಗೆ ಕಡಿವಾಣ ಹಾಕಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಿಲ್ಲ.ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಕಂಚಗಾರನಕಟ್ಟೆ ಇದಕ್ಕೆ ಸೂಕ್ತ ಉದಾಹರಣೆ. ಕರಿವರದರಾಜನಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಈ ಕಟ್ಟೆ ಸಿಗುತ್ತದೆ. ಸುಮಾರು ಒಂದು ಕಾಲು ಎಕರೆಗೂ ಹೆಚ್ಚು ವಿಸ್ತೀರ್ಣವಿದೆ. ಈ ಹಿಂದೆ ಸೋಮವಾರಪೇಟೆ, ಮಲ್ಲಯ್ಯಪುರ, ಗಾಳಿಪುರದ ಜಾನುವಾರುಗಳಿಗೆ ಕುಡಿಯುವ ನೀರಿಗೆ ಈ ಕಟ್ಟೆ ಆಸರೆಯಾಗಿತ್ತು. ಹಲವು ದಶಕದ ಹಿಂದೆ ಕಂಚಗಾರನಕಟ್ಟೆಯಿಂದಲೇ ಕುಡಿಯುವ ನೀರು ಸಂಗ್ರಹಿಸಲಾಗುತ್ತಿತ್ತು ಎಂದು ಸೋಮವಾರಪೇಟೆಯ ಜನರು ಇಂದಿಗೂ ಸ್ಮರಿಸುತ್ತಾರೆ.ಆದರೆ, ಈ ಸಾರ್ವಜನಿಕ ಸ್ವತ್ತಿನ ಮೇಲೆ ಕೆಲವು ಪಟ್ಟಭದ್ರರ ಕಣ್ಣುಬಿದ್ದಿದೆ. ಕರಿಕಲ್ಲುಗಳನ್ನು ಗ್ರಾನೈಟ್ ಆಗಿ ಪರಿವರ್ತಿಸಿದ ನಂತರ ಉಳಿಯುವ ಕಲ್ಲಿನ ಚೂರುಗಳನ್ನು ಹಾಕಲು ಈ ಕಟ್ಟೆಯ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ನಗರಸಭೆ ಆಡಳಿತ ಮಾತ್ರ ಕ್ರಮಕೈಗೊಂಡಿಲ್ಲ ಎನ್ನುವುದು ಈ ಭಾಗದ ಜನರ ಆರೋಪ.ಈ ಕಟ್ಟೆಯ ಪುನರುಜ್ಜೀವನಕ್ಕೂ ನಗರ ಸ್ಥಳೀಯ ಆಡಳಿತ ಮುಂದಾಗಿಲ್ಲ. ಕಟ್ಟೆಯಲ್ಲಿ ಸಂಗ್ರಹಗೊಂಡಿರುವ ಹೂಳು ತೆಗೆಸಬೇಕು. ಮಳೆನೀರು ಸಂಗ್ರಹಗೊಂಡರೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂಬ ಜನರ ಒತ್ತಾಯಕ್ಕೆ ಇಂದಿಗೂ ಬೆಲೆ ಸಿಕ್ಕಿಲ್ಲ.

ನಗರಸಭೆಯ ವಾರ್ಡ್ 28 ಮತ್ತು 29ರ ವ್ಯಾಪ್ತಿಯಲ್ಲಿ ಸುಬೇದಾರ್ ಕಟ್ಟೆ ಇದೆ. 27ನೇ ವಾರ್ಡ್‌ನಲ್ಲಿ ತಿಬ್ಬಳ್ಳಿ ಕಟ್ಟೆ ಇದೆ. ಇವುಗಳನ್ನು ಅಭಿವೃದ್ಧಪಡಿಸಿದರೆ ಅಂತರ್ಜಲಮಟ್ಟ ಹೆಚ್ಚಲಿದೆ. ಬೇಸಿಗೆ ವೇಳೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎನ್ನುವುದು ಈ ಭಾಗದ

ಜನರ ಒತ್ತಾಯ.ಆದರೆ, ಈ ಎರಡು ಕಟ್ಟೆಗಳ ಅಭಿವೃದ್ಧಿಗೆ ನಗರಸಭೆಯಿಂದ ಈ ಹಿಂದೆ ರೂ 1 ಕೋಟಿ ಮೊತ್ತದ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದಿಂದ ಅನುದಾನ ಮಾತ್ರ ಲಭಿಸಲಿಲ್ಲ. ಹೀಗಾಗಿ, ಈ ಕಟ್ಟೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ.`ಕೆರೆ-ಕಟ್ಟೆ ಅಭಿವೃದ್ಧಿಪಡಿಸುವುದು ಸರ್ಕಾರದ ಹೊಣೆ. ಜತೆಗೆ, ನಗರ ಸ್ಥಳೀಯ ಆಡಳಿತ ಕೂಡ ಇವುಗಳ ಸಂರಕ್ಷಣೆಗೆ ಮುಂದಾಗಬೇಕು. ಕಂಚಗಾರನಕಟ್ಟೆಯು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿ ಮಾರ್ಪಾಡಾಗುತ್ತಿದೆ. ಚೂರಾದ ಕರಿಕಲ್ಲುಗಳನ್ನು ಕಟ್ಟೆಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸಿ ತೆರವುಗೊಳಿಸಬೇಕು. ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ಒತ್ತಾಯಿಸುತ್ತಾರೆ ಸೋಮವಾರಪೇಟೆಯ ಎಸ್. ಮಹದೇವ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.