ಶನಿವಾರ, ಏಪ್ರಿಲ್ 17, 2021
32 °C

ಸರ್ಕಾರ ಕೈಮಗ್ಗ ಉತ್ಪನ್ನ ಖರೀದಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆ, ಶಾಲಾ- ಕಾಲೇಜುಗಳು ಮತ್ತು ಹಾಸ್ಟೆಲ್‌ಗಳಲ್ಲಿ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಕೆ. ಬಸವರಾಜನ್ ಸಲಹೆ ನೀಡಿದರು.ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ಆಶ್ರಯದಲ್ಲಿ ಗುರುಭವನದಲ್ಲಿ ಆಯೋಜಿಸಿರುವ ಕೈಮಗ್ಗ ಕ್ಲಸ್ಟರ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಸಂಸ್ಥೆಗಳಿಗೆ ಅಗತ್ಯವಿರುವ ಬಟ್ಟೆಗಳನ್ನು ಖಾಸಗಿ ಸಂಸ್ಥೆಗಳಿಂದ ಖರೀದಿಸಬಾರದು. ಸರ್ಕಾರ ಮತ್ತು ಕೈಮಗ್ಗ ಹಾಗೂ ಜವಳಿ ಇಲಾಖೆ ನೇಕಾರಿಕೆ ಉದ್ಯಮವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದರು.

ದೇಶದ ಜನತೆ ವಿದೇಶಿ ವ್ಯಾಮೋಹಕ್ಕೆ ಒಳಗಾಗಿ ದೇಸಿ ವಸ್ತುಗಳನ್ನು ನಿರ್ಲಕ್ಷ್ಯಿಸುತ್ತಿರುವುದು ವಿಷಾದಕರ.ಆದ್ದರಿಂದ ದೇಸಿ ವಸ್ತುಗಳ ಗುಣಮಟ್ಟ ಹೆಚ್ಚಿಸಬೇಕು. ದೇಸಿ ವಸ್ತುಗಳಿಗೆ ಮಾರುಕಟ್ಟೆ ಒದಗಿಸಬೇಕು. ಚೀನಾ ವಸ್ತುಗಳು ದೇಶದಲ್ಲಿ ಮಾರಾಟವಾಗುತ್ತಿದೆ. ಇದೇ ರೀತಿ ವಿದೇಶಿ ವಸ್ತುಗಳ ಹಾವಳಿ ಮುಂದುವರಿದರೆ ಗುಲಾಮಗಿರಿ ಅನುಭವಿಸಬೇಕಾಗುತ್ತದೆ ಎಂದರು.ಮೊಳಕಾಲ್ಮುರು ಸೀರೆಗೆ ಬೇಡಿಕೆ ಇದ್ದರೂ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಸೀರೆ ಉತ್ಪಾದನೆ ಮಾಡಲು ಇರುವ ಸಮಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹರಿಸಬೇಕು. ಜಿಲ್ಲೆಯಲ್ಲಿ ತಯಾರಾಗುವ ಹತ್ತಿ ಬಟ್ಟೆ ಹಾಗೂ ಮೊಳಕಾಲ್ಮೂರಿನ ಸೀರೆಗಳು ನಗರಕ್ಕೂ ಬರಲಾರದ ಸಂಕುಚಿತ ಪರಿಸ್ಥಿತಿಯಿದೆ. ಇದಕ್ಕೆ ಸ್ಥಳೀಯ ಸಮಸ್ಯೆ ಸೇರಿದಂತೆ ಬಂಡವಾಳ ಮತ್ತು ಕೆಲಸಗಾರರ ಕೊರತೆ ಕೂಡ ಕಾರಣವಾಗಿದೆ. ಉತ್ತಮ ರೇಷ್ಮೆ ಸೀರೆಗಳ ಬಗ್ಗೆ ಪ್ರಚಾರ ಸಿಗದಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು. ಜಿ.ಪಂ. ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನೇಕಾರರ ಅಭಿವೃದ್ಧಿಗಾಗಿ ತರಬೇತಿ ನೀಡಲು ಜಿಲ್ಲಾ ಪಂಚಾಯ್ತಿ ವತಿಯಿಂದ 2012-13ನೇ ಸಾಲಿನಲ್ಲಿ ್ಙ 40 ಲಕ್ಷ ಮೀಸಲಿಟ್ಟಿರುವುದಾಗಿ ತಿಳಿಸಿದರು.ನೇಕಾರ ಉದ್ಯಮಿಗಳಲ್ಲಿ ರೇಷ್ಮೆ ಸೀರೆಗಳ ಮಾರುಕಟ್ಟೆ ಜ್ಞಾನದ ಕೊರತೆ ಇದೆ. ್ಙ 8ರಿಂದ ್ಙ10 ಸಾವಿರ ಬೆಲೆ ಬಾಳುವ ರೇಷ್ಮೆ ಸೀರೆಯನ್ನು 10ರಿಂದ 12 ಜನ ಸೇರಿ ಒಂದೇ ದಿನದಲ್ಲಿ ತಯಾರು ಮಾಡುತ್ತಾರೆ. ಆದರೆ, ಶ್ರಮವಹಿಸಿ ಕೆಲಸ ಮಾಡುವವರಿಗೆ ಉತ್ತಮ ಬೆಲೆ ಸಿಗದಿರುವುದು ವಿಷಾದದ ಸಂಗತಿ. ನೇಯ್ಗೆ ಕಸುಬು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ. ಯಾರು ಬೇಕಾದರೂ ಈ ವೃತ್ತಿಯನ್ನು ಕೈಗೊಳ್ಳಬಹುದು ಎಂದರು.

ದೇಶಿಯ ಕಸುಬನ್ನು ಉಳಿಸುವ ಪ್ರಯತ್ನ ಮಾಡುತ್ತಿರುವ ಇಲಾಖೆಗೆ ಜಿಪಂ ವತಿಯಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.~`ಗೋಕೋಪ್~ ಮಾರುಕಟ್ಟೆ ನಿರ್ದೇಶಕ ಡಾ.ಚಂದ್ರಶೇಖರ್ ಮಾತನಾಡಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆಯ ರೇಷ್ಮೆ ಸೀರೆಗಳು ದೇಶದಲ್ಲಿಯೆ ಅತ್ಯಂತ ಉತ್ತಮ ಗುಣಮಟ್ಟದಾಗಿದ್ದು, ವ್ಯಾಪಾರ ವಹಿವಾಟಿನಲ್ಲಿ ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಕಾಂಕ್ಷೆ ಹೊಂದಲಾಗಿದ್ದು, ಒಂದು ವರ್ಷದಲ್ಲಿ ಈ ಗುರಿ ತಲುಪುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು. ನೇಕಾರರ ಕೊರತೆಗಳನ್ನು ನಿವಾರಿಸುವ ಹಾಗೂ ಉತ್ಪಾದನಾ ತಂತ್ರಗಾರಿಕೆ ತಿಳಿಸುವ ದೃಷ್ಟಿಯಿಂದ ಮೂರು ತಿಂಗಳಿನಿಂದ ಸತತ ಪ್ರಯತ್ನ ನಡೆಸಲಾಗುತ್ತಿದೆ. ಬೆಂಗಳೂರಿನ 30ಕ್ಕೂ ಹೆಚ್ಚು ಚಿಲ್ಲರೆ ಮಾರಾಟಗಾರರಿಂದ ಮೊಳಕಾಲ್ಮುರಿನ ರುದ್ರಾಕ್ಷಿ ಬಾರ್ಡರ್ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ ಪೂರೈಸಲಾಗುತ್ತಿಲ್ಲ. ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿದು ಮುಂದಿನ ದಿನಗಳಲ್ಲಿ ನೇಕಾರರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ರಾಜ್ಯ ಕೈಮಗ್ಗ ಸಹಕಾರ ಸಂಘಗಳ ಮಹಾಮಂಡಳಿ ಅಧ್ಯಕ್ಷ ಆರ್. ಮಲ್ಲೇಶಪ್ಪ, ಎನ್‌ಎಚ್‌ಡಿಸಿ ವ್ಯವಸ್ಥಾಪಕ ರಾಘವನ್, ಕ್ಲಸ್ಟರ್ ಅನುಷ್ಠಾನಾಧಿಕಾರಿ ಜಿ.ಟಿ. ಕುಮಾರ್ ಹಾಗೂ ತಾ.ಪಂ. ಅಧ್ಯಕ್ಷ ಆರ್. ಪರಮೇಶ್ವರ್ ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.