ಗುರುವಾರ , ಏಪ್ರಿಲ್ 22, 2021
30 °C

ಸರ್ವೆಯಲ್ಲಿ ಬಹಿರಂಗ: ಸರ್ಕಾರ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿಯವರ ಪುತ್ರರು ಟ್ರಸ್ಟಿಗಳಾಗಿರುವ ಪ್ರೇರಣಾ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್‌ಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿರುವ ಆದರ್ಶ ಡೆವಲಪರ್ಸ್ ಸಂಸ್ಥೆ, ಬೆಂಗಳೂರಿನ ಕೆರೆ ಏರಿಯೊಂದನ್ನು ಕಬಳಿಸಿರುವ ವಿಷಯ ಸರ್ವೆಯಲ್ಲಿ ತಿಳಿದು ಬಂದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.ನಗರದ ದೇವರಬೀಸನಹಳ್ಳಿಯ ಕೆರೆಯ ಏರಿಯೊಂದನ್ನು ಆದರ್ಶ ಡೆವಲಪರ್ಸ್ ಅಕ್ರಮವಾಗಿ ಕಬಳಿಸಿದೆ ಎಂದು ರಾಜ್ಯ ಸಾರ್ವಜನಿಕ ಜಮೀನುಗಳ ನಿಗಮ ಮುಖ್ಯಮಂತ್ರಿಗಳ ಕಚೇರಿಗೆ ಎರಡು ಬಾರಿ ವರದಿ ಮಾಡಿತ್ತು. ಆದರೆ ಭೂಮಿ ಕಬಳಿಸಿದವರ ವಿರುದ್ಧ ಕ್ರಮ ಜರುಗಿಸುವ ಬದಲು, ವರದಿ ಕಳುಹಿಸಿದ ಅಧಿಕಾರಿಯನ್ನೇ ಅಲ್ಲಿಂದ ಎತ್ತಂಗಡಿ ಮಾಡಲಾಗಿತ್ತು ಎಂಬುದನ್ನು ವಿರೋಧಪಕ್ಷಗಳು ಬಯಲು ಮಾಡಿವೆ.ವಿರೋಧ ಪಕ್ಷಗಳ ಪ್ರಕಾರ ಮುಖ್ಯಮಂತ್ರಿಗಳ ಪುತ್ರರ ಪ್ರೇರಣಾ ಶೈಕ್ಷಣಿಕ ಟ್ರಸ್ಟ್‌ಗೆ ಇದೇ ಆದರ್ಶ ಡೆವಲಪರ್ಸ್ ಸಂಸ್ಥೆ 5.4 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಸಾರ್ವಜನಿಕ ಭೂಮಿಯನ್ನು ಕಬಳಿಸಿರುವ ರಿಯಲ್ ಎಸ್ಟೇಟ್ ಸಂಸ್ಥೆಯಿಂದ ದೇಣಿಗೆ ಪಡೆದಿರುವ ಬಗ್ಗೆಯೇ ವಿರೋಧ ಪಕ್ಷಗಳು ಪ್ರಶ್ನೆ ಎತ್ತಿವೆ.ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ವಿ. ಮಂಜುಳಾ ಅವರು ಮುಖ್ಯಮಂತ್ರಿಗಳ ಕಚೇರಿಗೆ ಬರೆದ ಪತ್ರದಲ್ಲಿ, ‘ಅಕ್ರಮ ಭೂ ಕಬಳಿಕೆದಾರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿಗಳ ಕಚೇರಿ ಮಧ್ಯಪ್ರವೇಶ ಮಾಡಿ ಅಡಚಣೆ ಉಂಟುಮಾಡಿದರೆ, ಮುಂದೆ ಕಬಳಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನೈತಿಕ ಸ್ಥೈರ್ಯ ಅಧಿಕಾರಿಗಳಿಗೆ ಇರುವುದಿಲ್ಲ’ ಎಂದು ಬರೆದಿದ್ದರು.ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಅವರಿಗೆ 2010ರ ಜೂನ್ 7ರಂದು ಬರೆದ ಪತ್ರದಲ್ಲಿ ಮಂಜುಳಾ ಅವರು, ‘ದೇವರಬೀಸನಹಳ್ಳಿಯ ಸರ್ವೇ ಸಂಖ್ಯೆ 18ರ ಜಮೀನು 13 ಎಕರೆ 35 ಗುಂಟೆಯ ಕೆರೆ ಏರಿ ಇದೆ. ಇಲ್ಲಿ ಅಕ್ರಮ ಭೂಕಬಳಿಕೆ ನಡೆದಿದೆ’ ಎಂದು ತಿಳಿಸಿದ್ದರು.ಭೂಕಬಳಿಕೆ ದೂರಿನ ಬಗ್ಗೆ ಮೂರು ಬಾರಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ತಹಸೀಲ್ದಾರ್ ಅವರಿಗೆ ದೂರಿನ ಪ್ರತಿಯನ್ನು ಕಳುಹಿಸಿದ್ದರು. ಬೆಂಗಳೂರು ಪೂರ್ವದ ತಹಸೀಲ್ದಾರ್ ಅವರ ವ್ಯಾಪ್ತಿಯಲ್ಲಿ ಸರ್ವೆ ಸಂಖ್ಯೆ 18 ಬರುತ್ತದೆ.‘ಈ ಕೆರೆಯ ನಿರ್ವಹಣೆ ಬಿಬಿಎಂಪಿಯ ಜವಾಬ್ದಾರಿಯಾಗಿದೆ. ಇಲ್ಲಿ 10 ಗುಂಟೆ ಜಮೀನು ಆದರ್ಶ ಡೆವಲಪರ್ಸ್ ಅವರಿಂದ ಅತಿಕ್ರಮಣವಾಗಿರುವುದನ್ನು ಮೊದಲ ಸರ್ವೆಯಲ್ಲಿ ಹೇಳಲಾಗಿತ್ತು. ಆದರೆ ಈ ಅತಿಕ್ರಮಣ ಇನ್ನೂ ಹೆಚ್ಚಿರಬಹುದು ಎಂಬುದು ಬಿಬಿಎಂಪಿಯವರ ಅಭಿಪ್ರಾಯ ಆಗಿತ್ತು’ ಎಂದು ಮಂಜುಳಾ ಅವರು ಪತ್ರದಲ್ಲಿ ಹೇಳಿದ್ದಾರೆ.ಅಲ್ಲದೆ, ‘ಎರಡನೆ ಬಾರಿ ಸರ್ವೆ ನಡೆಸಲು ತಂಡವೊಂದನ್ನು ನೇಮಿಸಲಾಯಿತು. ಮೊದಲ ಸರ್ವೆ ನಡೆಸಿದವರಿಗೆ ಆದರ್ಶ ಡೆವಲಪರ್ಸ್ ಜೊತೆ ಒಪ್ಪಂದ ಮಾಡಿಕೊಂಡ ಆಪಾದನೆಯಡಿ ನೋಟಿಸ್ ನೀಡಲಾಯಿತು’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.ಆದರ್ಶ ಡೆವಲಪರ್ಸ್ ಮತ್ತು ಇನ್ನಿಬ್ಬರಿಂದ ಒಟ್ಟು 19.69 ಗುಂಟೆ ಭೂಮಿ ಕಬಳಿಕೆಯಾಗಿದೆ ಎಂದು ಎರಡನೆ ಸರ್ವೆಯಲ್ಲಿ ಕಂಡುಬಂದಿತು. ಈ ವರದಿಯನ್ನು 2010ರ ಏಪ್ರಿಲ್ 6ರಂದು ಬಿಬಿಎಂಪಿ ಆಯುಕ್ತರಿಗೆ ಕಳುಹಿಸಿ ಕೆರೆ ಸುತ್ತ ಬೇಲಿ ನಿರ್ಮಿಸುವಂತೆ ಸೂಚಿಸಲಾಯಿತು. ಆದರೆ ಬಿಬಿಎಂಪಿಯ ಸ್ಥಳೀಯ ಅಧಿಕಾರಗಳು ಆದರ್ಶ ಡೆವಲಪರ್ಸ್ ಜೊತೆ ಒಪ್ಪಂದ ಮಾಡಿಕೊಂಡು ಅತಿಕ್ರಮಣವಾದ 13.21 ಗುಂಟೆ ಜಮೀನ್ನು ಹೊರಗಿಟ್ಟು ಬೇಲಿ ಹಾಕಿರುವುದು ಕಾರ್ಯಪಡೆ ಆ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಅತಿಕ್ರಮಣವಾದ ಭೂಮಿಯಲ್ಲಿ ರಸ್ತೆ ನಿರ್ಮಾಣವಾಗಿದ್ದು, ಆ ರಸ್ತೆಯನ್ನು ಆದರ್ಶ ಡೆವಲಪರ್ಸ್ ನಿಯಂತ್ರಿಸುತ್ತಿರುವುದೂ ಕಾರ್ಯಪಡೆಯ ಗಮನಕ್ಕೆ ಬಂದಿತು. ‘ಈ ರಸ್ತೆ ಸಾರ್ವಜನಿಕ ಆಸ್ತಿಯಲ್ಲ. ಇದು ಕಬಳಿಕೆ ಮಾಡಿದ ಭೂಮಿಯಲ್ಲಿ ಆದರ್ಶ ಡೆವಲಪರ್ಸ್ ನಿರ್ಮಿಸಿದ್ದು. ಹೈಕೋರ್ಟ್ ಆದೇಶದನ್ವಯ ಕೆರೆಯ ಜಮೀನನ್ನು ಯಾವುದೇ ಇತರ ಉದ್ದೇಶಕ್ಕೆ ಬಳಸುವಂತಿಲ್ಲ. ಹಾಗೊಂದು ವೇಳೆ ಬೇರೆ ಉದ್ದೇಶಕ್ಕೆ ಈ ಜಮೀನನ್ನು ನೀಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ಮಂಜುಳಾ ಪತ್ರದಲ್ಲಿ ವಿವರಿಸಿದ್ದಾರೆ.ಆದರ್ಶ ಡೆವಲಪರ್ಸ್ ಪರವಾಗಿ ಕೆಐಎಡಿಬಿ ಸಾಕಷ್ಟು ಜಮೀನು ವಶಪಡಿಸಿಕೊಂಡಿದ್ದರೂ, ಆ ಸಂಸ್ಥೆಯವರು ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ ಎಂದೂ ಅವರು ಮುಖ್ಯಮಂತ್ರಿ ಕಚೇರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.ಮಂಜುಳಾ ಅವರು ಮುಖ್ಯಮಂತ್ರಿಗಳ ಕಚೇರಿಗೆ ಬರೆದಿರುವ ಪತ್ರವನ್ನು ಜೆಡಿಎಸ್‌ನ ವೈ.ಎಸ್.ವಿ. ದತ್ತ ಅವರು ಬುಧವಾರ ಮಾಧ್ಯಮಗಳಿಗೆ ನೀಡಿದ್ದಾರೆ. ‘13.21 ಗುಂಟೆ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ಇದೆ. ಹಾಗಾಗಿ ಅದಕ್ಕೆ ಬೇಲಿ ಹಾಕಲಾಗಿಲ್ಲ. ಅಲ್ಲಿ ಯಾವುದೇ ಭೂಕಬಳಿಕೆ ನಡೆದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ವಾದಿಸಿದ್ದರು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.