ಗುರುವಾರ , ಮೇ 6, 2021
21 °C

ಸಸ್ಯಾಗಾರಕ್ಕೆ ಸುಸ್ವಾಗತ

ಮನೋಜ್‌ಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಟಿಷ್ಯೂ ಕಲ್ಚರ್ ಅಥವಾ ಅಂಗಾಂಶ ಕೃಷಿ ಎಲ್ಲೆಡೆ ಜನಪ್ರಿಯ. ಕಾಂಡದ ಒಂದು ತೃಣ ಭಾಗವನ್ನು ತೆಗೆದು ಅದರಿಂದ ಸಾವಿರ, ಲಕ್ಷಗಳ ಲೆಕ್ಕದಲ್ಲಿ ಸಸ್ಯ ಉತ್ಪಾದನೆಯ ಈ ಪದ್ಧತಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗವೂ ಅಳವಡಿಸಿಕೊಂಡಿದೆ, ಅದರಲ್ಲಿ ಅನೇಕ ಸಂಶೋಧನೆ ನಡೆಸುತ್ತಿದೆ.ಈ ಪದ್ಧತಿ ಬೆಳೆದು ಬಂದ ಬಗೆ, ಸಂಶೋಧಕರು ಯಾರು ಎಂಬುದನ್ನು ವಿವರಿಸಲು  ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಕ್ಯಾಂಪಸ್‌ನಲ್ಲಿ `ಥೀಮ್ ಪಾರ್ಕ್~ ನಿರ್ಮಿಸಿದೆ.ಸಸ್ಯ ಅಂಗಾಂಶ ಕೃಷಿ ಪದ್ಧತಿ ಹಾಗೂ ಡಿಎನ್‌ಎ ಸಂಶೋಧಕರು ಈ ಪಾರ್ಕ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ! ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಅಪರಿಚಿತವಲ್ಲದ `ಸಸ್ಯ ಅಂಗಾಂಶ ಕೃಷಿ ಪದ್ಧತಿ~ ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆ ಕ್ರಾಂತಿಗೆ ಕಾರಣರಾದ ವಿಜ್ಞಾನಿಗಳನ್ನು ಸ್ಮರಿಸುವ ಉದ್ದೇಶದಿಂದ ಕುಲಪತಿ ಡಾ.ಕೆ.ನಾರಾಯಣಗೌಡ ಅವರ ಮಾರ್ಗದರ್ಶನದಲ್ಲಿ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಹಾಗೂ ಸಸ್ಯ ಅಂಗಾಂಶ ಕೃಷಿ ಪದ್ಧತಿ ಪ್ರಯೋಗಾಲಯದ ಮುಖ್ಯಸ್ಥ ಡಾ.ಬಿ.ಎನ್.ಸತ್ಯನಾರಾಯಣ ಅವರು 2009ರಲ್ಲಿ ಈ ಥೀಮ್ ಪಾರ್ಕ್ ರಚನೆ ಕಾರ್ಯ ಆರಂಭಿಸಿದರು.ಸಸ್ಯ ಅಂಗಾಂಶ ಕೃಷಿ ಪದ್ಧತಿಯಲ್ಲಿ ಸಸ್ಯಗಳನ್ನು ಸಂರಕ್ಷಿಸಿ ಬೆಳೆಸಲು ಅಗತ್ಯವಾದ ಆಹಾರ, ಕಾಂಡವನ್ನು ಬಾಟಲಿಯಲ್ಲಿ ಜೋಪಾನವಾಗಿಡುವ ಕುರಿತು ಸಂಶೋಧನೆ (ಎಂಎಸ್ ಮಿಡಿಯಾ) ನಡೆಸಿದ ಜಪಾನಿನ ಪ್ರೊಫೆಸರ್ ಸ್ಕೂಗ್ ಮತ್ತು ಡಾ.ಮುರಾಶಿಗೆ ಅವರ ಶಿಲ್ಪಗಳು ಈ ಪಾರ್ಕ್‌ನ ವೈಶಿಷ್ಟ್ಯ. ಒಂದು ಬೆಂಚಿನಲ್ಲಿ ಅಳವಡಿಸಲಾದ ಶಿಲ್ಪಗಳು ಗುರು-ಶಿಷ್ಯರ ಸಂಬಂಧವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತವೆ.ಸಾಕಷ್ಟು ಪಾಂಡಿತ್ಯ ಹೊಂದಿರುವಂತೆ ಕಾಣುವ ಪ್ರೊ.ಸ್ಕೂಗ್ ಅವರು ತಮ್ಮ ವಿದ್ಯೆಯನ್ನೆಲ್ಲ ಶಿಷ್ಯ ಮುರಾಶಿಗೆ ಅವರಿಗೆ ನೀಡಲು ಕುಳಿತಂತಿದೆ. ಹಲವಾರು ಪ್ರಶ್ನೆಗಳನ್ನು, ಅಚ್ಚರಿಗಳನ್ನು ಮನದಲ್ಲಿಟ್ಟುಕೊಂಡಂತೆ ಕಾಣುವ ಮುರಾಶಿಗೆ ಶಿಲ್ಪವೂ ಗಮನ ಸೆಳೆಯುತ್ತವೆ.ವಂಶವಾಹಿ ಕಣ (ಡಿಎನ್‌ಎ)ಗಳ ಕಾರ್ಯವೈಖರಿಯನ್ನು ಪತ್ತೆಹಚ್ಚಿದ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರಾಗಿದ್ದ ಡಾ.ವ್ಯಾಟ್ಸನ್ ಮತ್ತು ಡಾ.ಕ್ರಿಕ್ ಡಿಎನ್‌ಎ ಪ್ರತಿಕೃತಿಯನ್ನು ಹೆಮ್ಮೆಯಿಂದ ನೋಡುತ್ತಿರುವ ಶಿಲ್ಪ ಕಲಾಕೃತಿಗಳು ಈ ಪಾರ್ಕ್‌ನಲ್ಲಿವೆ. ಡಿಎನ್‌ಎಯ ಮಹತ್ವ ತಮಗಿಂತಲೂ ಎತ್ತರದಲ್ಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಲು ಪ್ರತಿಕೃತಿಯನ್ನು ತಲೆ ಎತ್ತರಿಸಿ ನೋಡುತ್ತಿದ್ದಾರೆ.ಸಸ್ಯ ಅಂಗಾಂಶ ಕೃಷಿ ಪದ್ಧತಿಯ ಪಿತಾಮಹ ಎಂದೇ ಕರೆಯಲಾಗುವ ಜರ್ಮನಿಯ ಡಾ.ಗಾಟ್ಲೀಬ್ ಹೇಬರ್‌ಲ್ಯಾಂಡ್ತ್ ಅವರ ಶಿಲ್ಪ ಜರ್ಮನಿ ಬಿಟ್ಟರೆ ಇಲ್ಲಿಯೇ ಇರುವುದು. `ಸಸ್ಯ ಅಂಗಾಂಶ ಕೃಷಿ ಪದ್ಧತಿ ಕುರಿತು ವಿಶ್ವದಲ್ಲಿ ಇರುವ ಏಕೈಕ ಥೀಮ್ ಪಾರ್ಕ್ ಇದು. ನಮ್ಮ ವಿಶ್ವವಿದ್ಯಾಲಯದ ಹೆಮ್ಮೆ~ ಎನ್ನುತ್ತಾರೆ ಡಾ.ಸತ್ಯನಾರಾಯಣ.ಎಲ್ಲ ಸಸ್ಯ ಕೋಶಗಳಿಗೆ ಸಂಪೂರ್ಣ ಗಿಡವಾಗಿ ಬೆಳೆಯುವ ಸಾಮರ್ಥ್ಯವನ್ನು ಇಲ್ಲಿರುವ ಶಿಲ್ಪವೊಂದು ಬಿಂಬಿಸುತ್ತದೆ. ರಾಜ್ಯದ ಅತ್ಯುತ್ತಮ ಶಿಲ್ಪಕಲಾಕೃತಿ ಎಂದು ಇದನ್ನು ಪರಿಗಣಿಸಲಾಗಿದ್ದು, ಕಲಾವಿದ ಜಗನ್ನಾಥ ಜಕ್ಕೇಪಲ್ಲಿ ಅವರು ಇದರ ನಿರ್ಮಾತೃ.ಅಪರೂಪದ ಶಿಲ್ಪಗಳನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳುವ ಮೂಲಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಬರೀ ಕೃಷಿ ಸಂಶೋಧನೆ ಹಾಗೂ ಬೋಧನೆಗಷ್ಟೇ ಅಲ್ಲದೇ ಇಂಥ ಪಾರ್ಕ್‌ನಿಂದಾಗಿಯೂ ಗಮನ ಸೆಳೆಯುತ್ತದೆ.  ಬಿಡುವಾಗಿದ್ದಾಗ ನೀವೂ ಈ ಪಾರ್ಕ್‌ಗೆ ಭೇಟಿ ನೀಡಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.