ಶನಿವಾರ, ಮೇ 21, 2022
23 °C

ಸಾಂಸ್ಕೃತಿಕ ರಾಜಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಧಾರವಾಡ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಸಂಗೀತ, ಸಾಹಿತ್ಯ ಹಾಗೂ ಶಿಕ್ಷಣಕ್ಕೆ ಜಿಲ್ಲೆ ಬಹಳ ಹಿಂದಿನಿಂದ ಹೆಸರಾಗಿದೆ. ಮಠ, ಮಾನ್ಯಗಳು, ಕ್ರೈಸ್ತ ಮಿಷನರಿಗಳು ಶಿಕ್ಷಣಕ್ಕೆ ಒತ್ತುನೀಡಿವೆ. ಜಾನಪದಗಳ ಕಲೆಗಳಿಗೂ ಜಿಲ್ಲೆಯಲ್ಲಿ ಉತ್ತೇಜನ ಸಿಕ್ಕಿತ್ತು. ಕನ್ನಡದ ಮಹಾಕವಿ ಪಂಪ ಹುಟ್ಟಿದ್ದು ಜಿಲ್ಲೆಯ ಅಣ್ಣಿಗೇರಿಯಲ್ಲಿ. ಕುಮಾರವ್ಯಾಸ, ಕನಕದಾಸ, ಸರ್ವಜ್ಞರಿಂದ ಮೊದಲುಗೊಂಡು ಶಿಶುನಾಳ ಶರೀಫ, ಬೇಂದ್ರೆವರೆಗಿನ ಕಾವ್ಯ ಪರಂಪರೆ ಇಲ್ಲಿ ಹರಿದು ಬಂದಿದೆ.ಬ್ರಿಟಿಷರ ಆಡಳಿತದಲ್ಲಿ ಕ್ರೈಸ್ತ ಮಿಷನರಿಗಳು ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಿದರು. ಅದರ ಫಲವೇ ಬಾಸೆಲ್ ಮಿಷನ್ ಶಾಲೆ. ಶಿಕ್ಷಕರ ತರಬೇತಿ (ಟ್ರೈನಿಂಗ್) ಕಾಲೇಜು ಇಡೀ ಉತ್ತರ ಕರ್ನಾಟಕದ ಸಾವಿರಾರು ಶಿಕ್ಷಕರನ್ನು ರೂಪಿಸಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ ಕೇಂದ್ರ ಇತ್ಯಾದಿಗಳು ಸಾಹಿತ್ಯ, ಕಲೆ, ಸಂಸ್ಕೃತಿ, ಶಿಕ್ಷಣ ಹಾಗೂ ವಿದ್ವತ್ತು, ಸೃಜನಶೀಲತೆ ಬೆಳೆಯಲು ಉತ್ತೇಜನ ನೀಡಿವೆ. ಕರ್ನಾಟಕದ ಮೊದಲ ಗ್ರಂಥಕರ್ತರ ಸಮ್ಮೇಳನ ನಡೆದದ್ದು ಧಾರವಾಡದಲ್ಲಿ.

 

ಹಿಂದೂಸ್ತಾನಿ ಸಂಗೀತದ ಕೇಂದ್ರವಾಗಿಯೂ ಧಾರವಾಡ ಹೆಸರು ಪಡೆದಿದೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದ ಪಂಡಿತ ಮಲ್ಲಿಕಾರ್ಜುನ ಮನಸೂರ, ಡಾ. ಗಂಗೂಬಾಯಿ ಹಾನಗಲ್, ಪಂ. ಬಸವರಾಜ ರಾಜಗುರು, ಪಂ. ಭೀಮಸೇನ ಜೋಶಿ, ಪಂ. ಮಾಧವ ಗುಡಿ ಸೇರಿದಂತೆ ಸಂಗೀತ ಕ್ಷೇತ್ರದ ಅನೇಕ ದಿಗ್ಗಜರು ಧಾರವಾಡದ ಸಂಗೀತದ ಸೊಗಡನ್ನು ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುವ ಮೂಲಕ ಬಿತ್ತರಿಸಿದ್ದಾರೆ. ಹಿಂದೂಸ್ತಾನಿ ಸಂಗೀತಕ್ಕೆ ಕುಂದಗೋಳದ ಸವಾಯಿ ಗಂಧರ್ವರ ಕೊಡುಗೆ ಅಪಾರ.ಕನ್ನಡ ರಂಗಭೂಮಿಗೆ ಜಿಲ್ಲೆ ನೀಡಿದ ಕೊಡುಗೆ ಗಣನೀಯ. ಶ್ರೀರಂಗರ ಹವ್ಯಾಸಿ ಪ್ರಯೋಗಗಳು, ಶಿರಹಟ್ಟಿ ವೆಂಕೋಬರಾವ್, ವಾಮನರಾವ್ ಮಾಸ್ತರ್, ಗರೂಡ ಸದಾಶಿವರಾವ್ ಮುಂತಾದವರ ನೇತೃತ್ವದಲ್ಲಿ ನಡೆದ ರಂಗ ಚಟುವಟಿಕೆಗಳನ್ನು ಮರೆಯಲಾಗದು. ವೃತ್ತಿಪರ ರಂಗಭೂಮಿಗೆ ಹುಬ್ಬಳ್ಳಿ ನಗರ ಸತತವಾಗಿ ಆಶ್ರಯ ನೀಡುತ್ತ ಬಂದಿದೆ.ಹುಬ್ಬಳ್ಳಿ, ಧಾರವಾಡ ಅವಳಿ ನಗರಗಳು ಚಿತ್ರಕಲೆಯ ಕೇಂದ್ರಗಳೆನಿಸಿವೆ. ದಕ್ಷಿಣ ಕರ್ನಾಟಕದಲ್ಲಿ  ಮೈಸೂರು ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಹೊರ ಹೊಮ್ಮಲು ಮೈಸೂರು ಅರಸರ ಉತ್ತೇಜನ ಕಾರಣವಾಯಿತು. ಆದರೆ ಧಾರವಾಡಕ್ಕೆ ಅಂತಹ ರಾಜಾಶ್ರಯ ಸಿಕ್ಕಲಿಲ್ಲ. ಆದರೂ ಧಾರವಾಡ ಉತ್ತರ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಿತು. ಧಾರವಾಡ ಕನ್ನಡ, ಮರಾಠಿ ಹಾಗೂ ಸಂಸ್ಕೃತ ವಿದ್ವಾಂಸರಿಗೆ ನೆಲೆ ನೀಡಿತ್ತು.ಕನ್ನಡಕ್ಕೆ ಸಿಕ್ಕಿರುವ ಏಳು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಮೂರು ಪ್ರಶಸ್ತಿಗಳು ಅವಿಭಜಿತ ಧಾರವಾಡ ಜಿಲ್ಲೆಯವರಿಗೆ ದೊರೆತಿರುವುದು ಹೆಮ್ಮೆಯ ಸಂಗತಿ. ಡಾ. ದ.ರಾ.ಬೇಂದ್ರೆ, ಡಾ. ವಿನಾಯಕ ಗೋಕಾಕ ಹಾಗೂ ಡಾ. ಗಿರೀಶ ಕಾರ್ನಾಡರು ಜ್ಞಾನಪೀಠ ಪುರಸ್ಕಾರಕ್ಕೆ ಭಾಜನರಾದವರು. ಧಾರವಾಡ ಜಿಲ್ಲೆಯ ಸಾಹಿತ್ಯ, ಸಾಮಾಜಿಕ, ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ ಹಲವಾರು ಮಹನೀಯರಿದ್ದಾರೆ. ಅವರ ಹೆಸರುಗಳನ್ನಷ್ಟೇ ದಾಖಲಿಸಿದರೆ ಅದೇ ದೊಡ್ಡ ಲೇಖನವಾದೀತು. ಅವರಲ್ಲಿ ಕೆಲವರ ಹೆಸರುಗಳನ್ನು ಇಲ್ಲಿ ಸ್ಮರಿಸಲು ಸಾಧ್ಯ.ಶಂ.ಭಾ.ಜೋಶಿ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಕಟ್ಟೀಮನಿ, ಆರ್.ಸಿ.ಹಿರೇಮಠ, ರೆ. ಎಫ್. ಕಿಟೆಲ್, ರೆ. ಉತ್ತಂಗಿ ಚೆನ್ನಪ್ಪ, ಸರ್. ಸಿದ್ದಪ್ಪ ಕಂಬಳಿ, ಡೆಪ್ಯೂಟಿ ಚನ್ನಬಸಪ್ಪ, ರೊದ್ದ ಶ್ರೀನಿವಾಸರಾಯರು, ರಾ.ಹ. ದೇಶಪಾಂಡೆ, ಪ್ರೊ. ಶಿ.ಶಿ.ಬಸವನಾಳ, ಪ್ರೊ. ಸ.ಸ. ಮಾಳವಾಡ, ವರದರಾಜ ಹುಯಿಲಗೋಳ, ಡಿ.ಎಸ್. ಕರ್ಕಿ, ಎನ್.ಕೆ. ಕುಲಕರ್ಣಿ, ಜಿ.ಬಿ.ಜೋಶಿ, ಬಸವರಾಜ ಮನಸೂರ, ಸಿತಾರತ್ನ ರಹಿಮತ್‌ಖಾನ್, ಅಬ್ದುಲ್ ಕರೀಂಖಾನ, ಉಸ್ತಾದ ಬಾಲೇಖಾನ, ಪತ್ರಕರ್ತ ಪಾಟೀಲ ಪುಟ್ಟಪ್ಪ, ಚೆನ್ನವೀರ ಕಣವಿ, ಗುರುಲಿಂಗ ಕಾಪಸೆ, ಗಿರಡ್ಡಿ ಗೋವಿಂದರಾಜ, ಜಿ.ಎಸ್.ಆಮೂರ ಮತ್ತಿತರ ಅನೇಕ ಮಹನೀಯರು ಜಿಲ್ಲೆಯ ಸಾಂಸ್ಕೃತಿಕ ಬದುಕನ್ನು ಸಂಪನ್ನಗೊಳಿಸಿದ್ದಾರೆ. 1949ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿತು. ಮುಂಬೈಯಲ್ಲಿ ಮೊದಲ ಕಚೇರಿ ಹೊಂದಿದ್ದ ವಿಶ್ವವಿದ್ಯಾಲಯ ನಂತರ ಇಲ್ಲಿನ ಟ್ರೈನಿಂಗ್ ಕಾಲೇಜಿಗೆ ಸ್ಥಳಾಂತರಗೊಂಡಿತು. ಡಾ. ಡಿ.ಸಿ.ಪಾವಟೆ ಅವರು ಕುಲಪತಿಗಳಾಗಿದ್ದಾಗ ವಿಶ್ವವಿದ್ಯಾಲಯದ ಹೊಸ ಕಟ್ಟಡ ತಲೆ ಎತ್ತಿತು.ಏಳು ಗುಡ್ಡಗಳ ನಡುವೆ ಹರಡಿಕೊಂಡಿರುವ, ಹಸಿರಿನಿಂದ ಕಂಗೊಳಿಸುವ ತಂಪಾದ ವಾತಾವರಣ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯ ಇರುವ ಪ್ರದೇಶಕ್ಕೆ ಛೋಟಾ ಮಹಾಬಲೇಶ್ವರ ಎಂಬ ಹೆಸರೂ ಇದೆ.1957ರಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಆರಂಭಗೊಂಡಿತು. ನಂತರದ ದಿನಗಳಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು. ಕಳೆದ ಎರಡು ವರ್ಷಗಳ ಹಿಂದೆ ಕಾನೂನು ವಿಶ್ವವಿದ್ಯಾಲಯ ಸಹ ಆರಂಭಗೊಂಡು, ಜಿಲ್ಲೆಯ ಶಿಕ್ಷಣದ ಮುಕುಟಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.ಹೀಗೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಕಲೆ, ರಂಗಭೂಮಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಧಾರವಾಡ ಜಿಲ್ಲೆ, ವೈವಿಧ್ಯಮಯ ಪರಂಪರೆ ಹೊಂದಿದೆ. ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಈ ಮಣ್ಣಿನ ಗುಣ ಎನ್ನಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.