ಭಾನುವಾರ, ಏಪ್ರಿಲ್ 18, 2021
24 °C

ಸಾಗರದ ನಡುವೆ ಕನ್ನಡದ ಬಾಯಾರಿಕೆ

ಎನ್.ಎ.ಎಂ.ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಭಾರತೀಯ ಭಾಷೆಗಳಲ್ಲಿ ಕಂಪ್ಯೂಟರ್ ಬಳಸುವುದಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಬಹಳ ಕಾಳಜಿ ವಹಿಸಿ ‘ಟಿಡಿಐಲ್’ ಎಂಬ ಯೋಜನೆಯನ್ನು ಆರಂಭಿಸಿ ಹತ್ತು ವರ್ಷವೇ ಕಳೆದುಹೋಯಿತು. ಕನ್ನಡದ ಕಂಪ್ಯೂಟಿಂಗ್‌ನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲೂ ಒಂದು ಕೇಂದ್ರವಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ‘ಟಿಡಿಐಲ್-ಕನ್ನಡ’ ಈಗೇನು ಮಾಡುತ್ತಿದೆ ಎಂಬ ವಿವರವಂತೂ ಲಭ್ಯವಿಲ್ಲ. ಹಾಗೆಯೇ ಅದು ಇಲ್ಲಿಯ ತನಕ ಮಾಡಿರುವ ಕೆಲಸದಲ್ಲಿ ಜನಸಾಮಾನ್ಯರಿಗೆ ದೊರೆತದ್ದು ಕೇವಲ ‘ಸಂಪಿಗೆ’ ಮತ್ತು ‘ಕೇದಗೆ’ ಎಂಬ ಎರಡು ಯೂನಿಕೋಡ್ ಫಾಂಟ್‌ಗಳು.ಇದರ ಹೊರತಾಗಿ ಟಿಡಿಐಲ್- ಕನ್ನಡ http;//kannudi.prg  ಎಂಬ ವೆಬ್‌ಸೈಟ್ ಮಾಡಿ ಅದರಲ್ಲಿ ಕನ್ನಡದ ಅಭಿಜಾತ ಕೃತಿಗಳೂ ಸೇರಿದಂತೆ ಹಲವು ವಿವರಗಳನ್ನು ಪ್ರಕಟಿಸಿದೆ ಎಂದು 2002ರಲ್ಲಿ ಟಿಡಿಐಲ್ ಪ್ರಕಟಿಸಿದ ‘ಸಾಧನೆಗಳ ಪಟ್ಟಿ’ ಹೇಳುತ್ತದೆ. ನಾವು ಈಗ ಇದೇ ವೆಬ್‌ಸೈಟ್‌ಗಾಗಿ ಹುಡುಕಿದರೆ ಈ ಡೊಮೈನ್ ಮಾರಾಟಕ್ಕಿದೆ ಎಂಬ ಮಾಹಿತಿ ದೊರೆಯುತ್ತದೆ ಅಷ್ಟೇ. ‘ಸಾಧನೆಗಳ ಪಟ್ಟಿ’ಯಲ್ಲಿರುವಂತೆ ಈ ವೆಬ್‌ಸೈಟ್ ಎರಡು ಸಾವಿರ ಪುಟಗಳ ಮಾಹಿತಿಯನ್ನು ಹೊಂದಿದೆಯಂತೆ! ‘ಸಾಧನಾ ಮಾಹಿತಿ’ಯಲ್ಲಿರುವಂತೆ ಭಾಷೆ, ಶಾಸನಗಳು, ಸಾಹಿತ್ಯ, ಜಾನಪದ, ಭೂಗೋಳ, ವ್ಯಕ್ತಿಗಳು, ದೇವಾಲಯಗಳ ಬಗ್ಗೆಯೆಲ್ಲಾ ಈ ವೆಬ್‌ಸೈಟ್‌ನಲ್ಲಿ ಮಾಹಿತಿ ಇರಬೇಕು. ವೆಬ್‌ಸೈಟೇ ಇಲ್ಲದಿರುವುದರಿಂದ ಮಾಹಿತಿ ಎಲ್ಲಿಂದ ಸಿಗಬೇಕು?ಇದು ಕೇಂದ್ರ ಸರ್ಕಾರದ ಅನುದಾನದಿಂದ ನಡೆದ ‘ಟಿಡಿಐಎಲ್’ ಯೋಜನೆಯ ಒಂದು ಮಾದರಿ ಮಾತ್ರ. ಇಂಥ ಇನ್ನೂ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ. ಭಾಷೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಕ್ಕಾಗಿ www.ltiisc.org ಎಂಬ ಮತ್ತೊಂದು ಸೈಟ್ ಇದೆ- ಅಥವಾ ಈಗಿನ ಸಂದರ್ಭದಲ್ಲಿ ಇತ್ತು ಎಂದು ಓದಿಕೊಳ್ಳಬಹುದಾದ ತಾಣದ ಕಥೆಯೂ ಇಷ್ಟೆ. ಏಳರಿಂದ ಹತ್ತನೇ ತರಗತಿಯ ತನಕದ ಮಕ್ಕಳಿಗಾಗಿ ರೂಪಿಸಲಾದ ಬೋಧನಾ ಭಾರತಿಯ ಕೆಲವು ಸಾಫ್ಟ್‌ವೇರ್‌ಗಳು ಈಗ ಲಭ್ಯ. ಆದರೆ ತಂತ್ರಜ್ಞಾನ ಇದನ್ನು ದಾಟಿ ಮುಂದೆ ಹೋಗಿರುವುದು ತಯಾರಿಸಿದವರ ತಪ್ಪಲ್ಲವಲ್ಲ!ಅಂದಹಾಗೆ, ಈ ತಂತ್ರಾಂಶಗಳಿರುವುದು ಯಾರಿಗೆ ಗೊತ್ತಿತ್ತು? ಮತ್ತು ಇವುಗಳನ್ನು ಯಾರು ಬಳಸುತ್ತಿದ್ದರು ಎಂಬುದನ್ನು ಯಾರಲ್ಲಿ ಕೇಳುವುದು ಎಂಬ ಪ್ರಶ್ನೆ ಈಗಲೂ ಉಳಿದುಕೊಂಡಿದೆ. ಹಿಂದೆ ಈ ಯೋಜನೆಗೆ ಮುಖ್ಯಸ್ಥರಾಗಿದ್ದವರು ಈಗ ಇಲ್ಲ. ಅಲ್ಲಿದ್ದವರು ಮತ್ತೆಲ್ಲೋ ಹೋಗಿದ್ದಾರೆ ಎಂಬ ಉತ್ತರಗಳಷ್ಟೇ ಭಾರತೀಯ ವಿಜ್ಞಾನ ಸಂಸ್ಥೆಯಿಂದ ದೊರೆಯುತ್ತದೆ.ಸಹಜ ಭಾಷಾ ಸಂಸ್ಕರಣೆಗೆ ಅಗತ್ಯವಿರುವ ವರ್ಡ್‌ನೆಟ್ ಕೂಡಾ ರೂಪಿಸಿದ್ದೇವೆ ಎಂದು ಹೇಳಿಕೊಳ್ಳುವ ಟಿಡಿಐಎಲ್ ಅದೆಲ್ಲಿದೆ ಎಂಬುದನ್ನು ಮಾತ್ರ ಈ ತನಕ ಹೇಳಿಲ್ಲ.ಈ ಎಲ್ಲದಕ್ಕಿಂತ ದೊಡ್ಡ ತಮಾಷೆಯೆಂದರೆ ಕನ್ನಡಿಗರು ಬಹುಕಾಲದಿಂದ ಬಯಸುತ್ತಿದ್ದ ‘ಓಸಿಆರ್’ ಅಥವಾ ‘ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್’ ವ್ಯವಸ್ಥೆಯದ್ದು. ಈ ತಂತ್ರಜ್ಞಾನ ಲಭ್ಯವಿದ್ದರೆ ಕನ್ನಡದ ಮುದ್ರಿತ ಪಠ್ಯವನ್ನು ಸ್ಕ್ಯಾನ್ ಮಾಡಿ ಅದನ್ನು ಪಠ್ಯವಾಗಿಯೇ ಕಂಪ್ಯೂಟರ್‌ನಲ್ಲಿ ಉಳಿಸಿಕೊಳ್ಳಲು ಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ಒಂದು ಯೋಜನೆಯನ್ನು ಹಲವಾರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಟಿಡಿಐಎಲ್ ರೂಪಿಸಿದೆ.ಇದೇ ಸಂಸ್ಥೆಯಿಂದ ರೂಪುಗೊಂಡಿದ್ದ ತಮಿಳು ‘ಓಸಿಆರ್’ ಬಹುತೇಕ ಬಳಕೆಗೆ ಬಂದಿದೆ. ಆದರೆ ಕನ್ನಡದ ಸ್ಥಿತಿ ಎಂದಿನಂತೆ ಭಿನ್ನ. ‘ಟಿಡಿಐಎಲ್’ನ ಮಾಹಿತಿ ಪತ್ರಿಕೆ ಹೇಳುವಂತೆ ಈ ಯೋಜನೆ 2002ರಲ್ಲಿ ಬಹುತೇಕ ಪೂರ್ಣಗೊಂಡಿದೆ. ಲೇಟೆಕ್‌ನಂಥ ಮುಕ್ತ ತಂತ್ರಾಂಶದಲ್ಲಿ ಓದಲು ಸಾಧ್ಯವಾಗುವಂತೆ ರೂಪಿಸಿರುವ ಈ ತಂತ್ರಾಂಶದ ಆಕರ ಸಂಕೇತಗಳು ಎಲ್ಲಿವೆ ಎಂಬುದನ್ನು ಯಾರಲ್ಲಿ ಕೇಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.