ಬುಧವಾರ, ಜುಲೈ 15, 2020
22 °C

ಸಾಧ್ಯವಿಲ್ಲ ಎಂಬುವವರಿಂದ ದೂರವಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಧ್ಯವಿಲ್ಲ ಎಂಬುವವರಿಂದ ದೂರವಿರಿ

ಬೆಂಗಳೂರು: “ಜೀವನದಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ. ‘ಸಾಧ್ಯವಿಲ್ಲ’ ಎಂಬುವವರಿಂದ ಆದಷ್ಟೂ ದೂರವಿರಿ. ಹಾಗೆ ಹೇಳಿದವರು ನಿಮ್ಮ ಶಿಕ್ಷಕರಾಗಿದ್ದರೂ ಸಹ...”!-ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ನಗರದಲ್ಲಿ ಗುರುವಾರ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನವು ಏರ್ಪಡಿಸಿದ್ದ ‘ಅಗಸ್ತ್ಯ ಕ್ರಿಯೇಟಿವ್ ಕನ್‌ಕ್ಲೇವ್ 2011’ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡುವಾಗ ಮಕ್ಕಳಿಗೆ ಕಕ್ಕುಲಾತಿಯಿಂದ ನೀಡಿದ ಎಚ್ಚರಿಕೆ ಇದು.ನಿಗದಿತ ಸಮಯಕ್ಕಿಂತ ಒಂದು ಗಂಟೆ 45 ನಿಮಿಷ ತಡವಾಗಿ ಬಂದ ಕಲಾಂ ಅವರನ್ನು ಗಂಟೆಗಳಷ್ಟು ಸಮಯದಿಂದ ಸಂಯಮದಿಂದ ಕಾಯುತ್ತಿದ್ದ ಮಕ್ಕಳು ‘ಹೋ..’ ಎಂದು ಕೂಗುತ್ತಾ ಸ್ವಾಗತಿಸಿದರು.ಕೆಲ ಹೊತ್ತಿನ ನಂತರ ತಮ್ಮ ಆಶಯ ಭಾಷಣ ಆರಂಭಿಸಿದ ಅವರು, ಜ್ಞಾನದ ಮಹತ್ವ, ಅದರಿಂದ ದಕ್ಕುವ ಲಾಭಗಳು ಮತ್ತು ಅದರಿಂದಾಗುವ ವ್ಯಕ್ತಿತ್ವ ಹಾಗೂ ದೇಶದ ಔನ್ನತ್ಯವನ್ನು ಪದ್ಯದ ಶೈಲಿಯಲ್ಲಿ ಮಕ್ಕಳಿಗೆ ಕಲಿಸಿದರು. ಭಾಗವಹಿಸಿದ್ದ ಎಲ್ಲರನ್ನೂ ಖಗೋಳಶಾಸ್ತ್ರದಲ್ಲಿ ಒಂದು ಸುತ್ತು ಹಾಕಿಸಿದ ಅವರು, ಭೂಮಿ ತನ್ನ ಅಕ್ಷದ ಸುತ್ತುವ ಅವಧಿ, ತನ್ನ ಉಪಗ್ರಹದ ಸುತ್ತ ಸುತ್ತುವ ಅವಧಿ, ಸೂರ್ಯನು ತನ್ನನ್ನೇ ಸುತ್ತುವ ಅವಧಿಯನ್ನು ಪ್ರಶ್ನಿಸಿ ತಿಳಿದುಕೊಂಡರು. ಸೂರ್ಯ, ನಕ್ಷತ್ರಗಳಷ್ಟೇ ಅಲ್ಲದೇ, ಎಷ್ಟೋ ಗೆಲಾಕ್ಷಿಗಳು ಖಗೋಳದಲ್ಲಿವೆ. ನಾವಿರುವುದು ಕ್ಷೀರಪಥ (ಮಿಲ್ಕಿ ವೇ) ಎಂಬುದನ್ನೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.ಜೀವನದ ನಾಲ್ಕು ಅಂಶಗಳು: ಜೀವನದಲ್ಲಿ ಗುರಿ ಇರಲಿ. ಜ್ಞಾನವನ್ನು ಗಳಿಸಿಕೊಳ್ಳಿ. ಕಠಿಣ ಪರಿಶ್ರಮ ಇರಲಿ ಮತ್ತು ನಿರಂತರ ಯತ್ನವನ್ನು ಮಾಡುತ್ತಿರಿ ಎಂದು ಜೀವನದ ನಾಲ್ಕು ಮುಖ್ಯ ಅಂಶಗಳನ್ನು ಹೇಳುತ್ತಿರುವ ಸಂದರ್ಭದಲ್ಲಿ ‘ಮೂರನೇ ಅಂಶ’ವನ್ನು ಹೇಳಲು ವಿದ್ಯಾರ್ಥಿಗಳು ತಡ ಮಾಡಿದಾಗ ಏಕೆ ಪರಿಶ್ರಮ ಪಡಲು ಹಿಂಜರಿಕೆಯೇ ಎಂದು ಛೇಡಿಸುವ ಶೈಲಿಯಲ್ಲಿ ಚಟಾಕಿ ಹಾರಿಸಿದರು.ಆಲ್ಬರ್ಟ್ ಐನ್‌ಸ್ಟೀನ್, ಈಸ್ಟಮನ್, ಅಲೆಕ್ಸಾಂಡರ್ ಗ್ರಹಾಂಬೆಲ್, ಎಸ್.ರಾಮಾನುಜನ್ ಮತ್ತಿತರ ವಿಜ್ಞಾನಿಗಳ ಸಂಶೋಧನೆಗಳನ್ನು ಅವರು ಪ್ರಸ್ತಾಪಿಸಿದರು.

ಒಬ್ಬ ಮನುಷ್ಯ ವಿಜ್ಞಾನಿಯಾಗಲು ಆತನ ಶೈಕ್ಷಣಿಕ ಹಿನ್ನೆಲೆಯೂ ಕಾರಣವಾಗುತ್ತದೆ ಎಂದರು.‘ನನ್ನ 13ನೇ ವಯಸ್ಸಿನಲ್ಲಿ 8ನೇ ತರಗತಿ ಓದುತ್ತಿದ್ದಾಗ ನನ್ನ ಶಿಕ್ಷಕರಾಗಿದ್ದ ಶಿವಸುಬ್ರಹ್ಮಣ್ಯ ಅಯ್ಯರ್ ಅವರು ಒಂದು ದಿನ ಕಪ್ಪು ಹಲಗೆಯ ಮೇಲೆ ಹಕ್ಕಿಯ ರೆಕ್ಕೆಗಳನ್ನು ಚಿತ್ರಿಸಿದರು. ನಂತರ ನಮ್ಮನ್ನು ರಾಮೇಶ್ವರದ ಸಮುದ್ರ ತೀರಕ್ಕೆ ಕರೆದೊಯ್ದು ಕಡಲ ಹಕ್ಕಿಗಳನ್ನು ತೋರಿಸಿದರು. ಇದು ಪರೋಕ್ಷವಾಗಿ ನನಗೆ ವಿಮಾನಗಳು. ರಾಕೆಟ್‌ಗಳ ಕುರಿತು ಆಸಕ್ತಿ ಮೂಡಿತು. ನಂತರ ಏರೋನಾಟಿಕಲ್ ಎಂಜಿನಿಯರಿಂಗ್ ಪೂರೈಸಿ ಕ್ಷಿಪಣಿ ತಯಾರಿಕೆಯ ಕೆಲಸದಲ್ಲಿ ತೊಡಗಲು ಪ್ರೇರಣೆ ನೀಡಿತು’ ಸ್ಮರಿಸಿದರು.ಪ್ರತಿಷ್ಠಾನವು ಬಿಹಾರದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಕೈಗೊಂಡ ಕಾರ್ಯಗಳನ್ನು ಶ್ಲಾಘಿಸಿದ ಡಾ.ಕಲಾಂ, ‘ಈ ಚಟುವಟಿಕೆಯಿಂದ ಆ ರಾಜ್ಯದ 15,000ಕ್ಕೂ ಅಧಿಕ ಮಕ್ಕಳಿಗೆ ಅನುಕೂಲವಾಯಿತು. ಕುತೂಹಲ ತಾಳದ ಎಷ್ಟೋ ವಿದ್ಯಾರ್ಥಿಗಳು ಅಪಾಯಕಾರಿ ಕೋಸಿ ನದಿಯನ್ನು ದಾಟಿಕೊಂಡು ಬಂದು ಈ ಪ್ರಯೋಗಾಲಯ ವೀಕ್ಷಿಸಿದ್ದನ್ನು ಕೇಳಿದ್ದೇನೆ’ ಎಂದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ, ‘ಸರ್ಕಾರವು ಅಗಸ್ತ್ಯ ಪ್ರತಿಷ್ಠಾನದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, 15 ಹಿಂದುಳಿದ ಜಿಲ್ಲೆಗಳಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯದ ಸೌಕರ್ಯವೂ ಸೇರಿದಂತೆ ಇತರೆ ಸಹಕಾರವು ಲಭ್ಯವಾಗಲಿದೆ’ ಎಂದರು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್.ರಾಮಮೂರ್ತಿ ಮಾತನಾಡಿದರು.

ಪರಮಾಣು ಪರಾಮರ್ಶೆ ನಡೆಯಲಿ

“ನಮ್ಮ ಪರಮಾಣು ವ್ಯವಸ್ಥೆ ಅತ್ಯಂತ ಸ್ವಚ್ಛವಾಗಿದೆ. ಆದರೂ ಕೂಡ ದೇಶದ ವಿವಿಧೆಡೆ ಅಳವಡಿಸಲಾದ ಸ್ಥಾವರಗಳು ಅಪಾಯಕಾರಿಯೇ ಎಂಬುದನ್ನು ತಿಳಿಯಲು ಅವುಗಳ ‘ಸಮಗ್ರ ಪರಿಶೀಲನೆ’ ನಡೆಸಬೇಕು” ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಲಹೆ ನೀಡಿದರು.ಈಚೆಗೆ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಫುಕುಶಿಮಾ ಅಣು ಸ್ಥಾವರಗಳಿಂದ ಹರಡಿದ ಅಣು ವಿಕಿರಣಗಳು ಭಾರತಕ್ಕೂ ವ್ಯಾಪಿಸುತ್ತವೆಯೇ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ‘ಇದು ನಿನ್ನ ಸ್ವಂತ ಪ್ರಶ್ನೆಯೇ. ಹಾಗಿದ್ದರೆ ನೀನು ಬಹಳ ಬುದ್ಧಿವಂತೆ’ ಎನ್ನುತ್ತಲೇ ಉತ್ತರ ನೀಡಿದ ಅವರು, ಜಪಾನ್‌ನಲ್ಲಿ ಭೂಕಂಪ ಮತ್ತು ಸುನಾಮಿ ಎರಡೂ ಏಕಕಾಲಕ್ಕೆ ಸಂಭವಿಸಿದ್ದರಿಂದ ವಿಕಿರಣ ಸೋರಿಕೆಯಾಗುತ್ತಿದೆ. ಇದೊಂದು ಅಪರೂಪದ ದುರದೃಷ್ಟಕರ ಘಟನೆ ಎಂದು ಬಣ್ಣಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.