ಮಂಗಳವಾರ, ಜೂನ್ 22, 2021
21 °C

ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬುಡಕಟ್ಟು ಸಮುದಾಯಗಳನ್ನು ನಾಗರಿಕ ಜಗತ್ತಿಗೆ ಪ್ರವೇಶ ಮಾಡದಂತೆ ತಡೆಯೊಡ್ಡುವ ಕೆಲಸ ಅತ್ಯಂತ ವ್ಯವಸ್ಥಿತವಾಗಿಯೇ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ~ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಶನಿವಾರ ಇಲ್ಲಿ ವಿಷಾದಿಸಿದರು.ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಮತ್ತು ಅಲೆಮಾರಿ ಬುಡಕಟ್ಟು ಮಹಾಸಭಾ ಆಯೋಜಿಸಿದ್ದ `ಅಲೆಮಾರಿ ಬುಡಕಟ್ಟುಗಳಿಗೆ ಸಾಮಾಜಿಕ ನ್ಯಾಯ: ಒಂದು ಚರ್ಚೆ~ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ನಮ್ಮ ದೇಶದಲ್ಲಿ ವಿವಿಧ ಪ್ರದೇಶಗಳಿಂದ ವಲಸೆ ಬಂದ ಆರು ಸಾವಿರಕ್ಕೂ ಹೆಚ್ಚಿನ ಅಲೆಮಾರಿ ಮತ್ತು ಅರೆ ಅಲೆಮಾರಿ ಪಂಗಡಗಳು ವಾಸಿಸುತ್ತಿವೆ. ಜಗತ್ತಿನಲ್ಲಿಯೇ ಅತಿಹೆಚ್ಚು ಬುಡಕಟ್ಟುಗಳನ್ನು ಹೊಂದಿರುವ ದೇಶ ಭಾರತ. ಕೆಲವು ಪಂಗಡಗಳನ್ನು ಜಾತಿ, ಧರ್ಮ, ದೇವರು ಮತ್ತು ದುಡಿಮೆಯ ಕಾರಣಗಳಿಂದ ವಿಭಜಿಸಿ ದೂರವಿಡಲಾಗಿದೆ~ ಎಂದು ನೊಂದು ನುಡಿದರು.`ನಮ್ಮಲ್ಲಿ ವನ್ಯ ಜೀವಿ ಸಂರಕ್ಷಣಾ ಅಧಿನಿಯಮ ಎನ್ನುವ ಕಾಯ್ದೆಯೊಂದು ಜಾರಿಯಲ್ಲಿದೆ. ಈ ಅಧಿನಿಯಮದ ಜಾರಿ ಬಗ್ಗೆ ನನಗೆ ವಿರೋಧವಿಲ್ಲ. ಆದರೆ ಬುಡಕಟ್ಟು ಸಮುದಾಯಗಳ ಬದುಕಿಗೆ ಮಾರಕವಾಗುವ ಯಾವುದೇ ಕಾಯ್ದೆಗಳು ಜಾರಿಗೆ ಬಂದಾಗ ಅದರ ಸಾಮಾಜಿಕ ಉತ್ತರದಾಯಿತ್ವದ ಬಗ್ಗೆ ಎಲ್ಲರೂ ಪ್ರಶ್ನಿಸಬೇಕಾಗುತ್ತದೆ.ಆಫ್ರಿಕಾದ ಕಪ್ಪು ಜನತೆ ತಮ್ಮ ಹಕ್ಕೊತ್ತಾಯಗಳನ್ನು ಕಾನೂನಿನ ಮೂಲಕವೇ ಪ್ರಭುತ್ವದ ಮುಂದಿಟ್ಟಂತೆ ಭಾರತದ ಎಲ್ಲ ಅಲೆಮಾರಿ ಸಮುದಾಯಗಳು ಕೂಡ ಕಾನೂನಿನ ಮೂಲಕವೇ ಹೋರಾಟ ಮಾಡಬೇಕಾದ ಅನಿವಾರ್ಯವಿದೆ~ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಅಲೆಮಾರಿ ಬುಡಕಟ್ಟು ಆಯೋಗದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೇಣಕೆ ಮಾತನಾಡಿ, `ಗಾಂಧೀಜಿ ತಮ್ಮ ಹಿಂದ್ ಸ್ವರಾಜ್ ಕೃತಿಯಲ್ಲಿ ಪ್ರಾತಿನಿಧ್ಯ ಪ್ರಜಾಪ್ರಭುತ್ವವೆಂಬುದು ಒಮ್ಮಮ್ಮೆ ಹಣ, ಶಕ್ತಿ ಇರುವವರಿಗೆ ಮಾತ್ರ ಹೆಚ್ಚು ಲಾಭ ತಂದು ಕೊಡುತ್ತದೆ.ಅಸಂಘಟಿತರಿಗೆ ಅಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. ಈ ದೇಶ ಸ್ವಾತಂತ್ರ್ಯ ಪಡೆದು 63 ವರ್ಷಗಳ ನಂತರವೂ ಈ ಅಲೆಮಾರಿ ಸಮುದಾಯಗಳ ಅಳಲನ್ನು ನಿತ್ಯವೂ ಅರಣ್ಯರೋದನದಂತೆ ಈ ದೇಶ ಕೇಳಿಸಿಕೊಳ್ಳುತ್ತಲೇ ಇದೆ. ಈ ಸಮುದಾಯಗಳನ್ನು ಶಾಶ್ವತವಾಗಿ ಕತ್ತಲಲ್ಲಿಡುವುದೇ ಆಳುವ ವರ್ಗಗಳ ಧೋರಣೆಯಾಗಿದೆ~ ಎಂದು ಆರೋಪಿಸಿದರು.ಚಿಂತಕ ಪ್ರೊ.ಹಿ.ಚಿ.ಬೋರಲಿಂಗಯ್ಯ, `ಭಾರತದ ಪ್ರಾಚೀನ ಸ್ಥಿತಿಯಲ್ಲಿ ಎಲ್ಲರೂ ಅಲೆಮಾರಿಗಳಾಗಿದ್ದವರೇ. ಆಗ ಆಧ್ಯಾತ್ಮ, ಸಮಾಜವಾದ ಎಂಬುದು ವ್ಯಾಪಕವಾಗಿತ್ತು. ನಂತರ ಅದು ನಶಿಸಿ ಎಲ್ಲದರಲ್ಲೂ ಮನುಷ್ಯನ ಸ್ವಾರ್ಥ ವಿಜೃಂಭಿಸಲು ಶುರುವಾಯಿತು. ಇವತ್ತು ಅಲೆಮಾರಿ ಸಮುದಾಯಗಳಲ್ಲಿ ಮಾತ್ರ ವಿಶ್ವ ಮಾನವತ್ವ ಉಳಿದಿದೆ. ಇದನ್ನು ಉಳಿಸುವ ಕೆಲಸವನ್ನಾದರೂ ನಾವು ಮಾಡಬೇಕಿದೆ~ ಎಂದರು.ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಡಾ.ಆರ್.ವೆಂಕಟರಾವ್, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ಜಾಫೆಟ್, ಚಿಂತಕ ಡಾ.ಬಾಲಗುರುಮೂರ್ತಿ, ಡಾ.ಎಂ.ವಿ. ವಸು, ಡಾ.ಎ.ಆರ್.ಗೋವಿಂದಸ್ವಾಮಿ, ವೈ.ರಾಜೇಂದ್ರ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.