ಗುರುವಾರ , ಏಪ್ರಿಲ್ 15, 2021
31 °C

ಸಾಮಾಜಿಕ ಭೇದ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಮಾಜದಲ್ಲಿ ಹೆಣ್ಣು- ಗಂಡೆಂಬ ಭೇದವು ಕುಟುಂಬದಿಂದಲೇ ಆರಂಭವಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ಟ ತಂದೆ- ತಾಯಿ ಆಕೆಯನ್ನು ಹೊರಗಟ್ಟುತ್ತಿದ್ದಾರೆ’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕಳವಳ ವ್ಯಕ್ತಪಡಿಸಿದರು.ನಗರದಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳು ಮತ್ತು ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಸ್ತ್ರೀ ಭ್ರೂಣ ಹತ್ಯೆ ತಡೆ ಕಾಯ್ದೆ (ಪಿಸಿ ಪಿಎನ್‌ಡಿಟಿ) ಬಗ್ಗೆ ಸ್ತ್ರೀರೋಗ, ಮತ್ತು ಪ್ರಸೂತಿ ತಜ್ಞರಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಸಮ್ಮೇಳನ ‘ಬಾಲಿಕ-2011’ ಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸ್ತ್ರೀ ಭೂಮಿ ಇದ್ದಂತೆ. ತಾಯಿಯಾಗಿ, ಪತ್ನಿಯಾಗಿ ನಮ್ಮ ಜೀವನದುದ್ದಕ್ಕೂ ನಮಗೆ ಜೊತೆಯಾಗಿರುತ್ತಾಳೆ.ಆದರೂ ಲಿಂಗ ತಾರತಮ್ಯ ಇರುವುದು ಶೋಚನೀಯ. ಹೆಣ್ಣು ಮಗು ಜನಿಸಿದರೆ ಅದನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಡುವಲ್ಲಿಯೂ ಕುಟುಂಬ ಸದಸ್ಯರಲ್ಲಿ ಸಹಮತ ಇರುವುದಿಲ್ಲ.ಸ್ತ್ರೀಭ್ರೂಣ ಹತ್ಯೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಹಲವು ಕಾನೂನುಗಳನ್ನು ಭಾರತ ಸರ್ಕಾರ ಜಾರಿಗೆ ತಂದಿದೆ. ಆದರೆ ಈ ಇದಕ್ಕೆ ಪರಿಹಾರವೆಂದರೆ ಸಾಮಾಜಿಕ ದೃಷ್ಟಿಕೋನ ಬದಲಾಗಬೇಕು. ಪ್ರಜ್ಞಾವಂತರಾದ ವೈದ್ಯರು, ಶಿಕ್ಷಕರು, ಪ್ರಾಧ್ಯಾಪಕರು ಜಾಗೃತಿ ಮೂಡಿಸಬೇಕು’ ಎಂದರು. ‘ಸ್ತ್ರೀಯರು ತಮ್ಮ ಹಕ್ಕುಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಅವರು ಸಲಹೆ ನೀಡಿದರು.ವಿಧಾನಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ‘ರಾಜ್ಯ ಸರ್ಕಾರ ಸ್ತ್ರೀಯರಿಗೆ ಸಹಾಯ ಮಾಡುವ ನೆಪದಲ್ಲಿ ಸೀರೆ ಹಂಚುವ ಮೂಲಕ ಅವರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ’ ಎಂದು ಹರಿಹಾಯ್ದರು. ‘ಸ್ತ್ರೀಯರು ಸ್ವಾವಲಂಬಿಯಾಗಿ ಬದುಕಲು ಅವರಿಗೆ ಹಣಕಾಸು ನೆರವು ನೀಡಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಅನುವು ಮಾಡಿಕೊಡಬೇಕು. ಎಸ್.ಎಂ.ಕೃಷ್ಣ ಸರ್ಕಾರ ಸ್ವಸಹಾಯ ಗುಂಪುಗಳಿಗೆ ಉತ್ತೇಜನ ನೀಡಲು ರೂ 200 ಕೋಟಿ ಮೀಸಲಿಟ್ಟಿತ್ತು. ಆ ಯೋಜನೆಯಡಿ ಇದೀಗ 1,73,000 ಗುಂಪುಗಳಿದ್ದು,33 ಲಕ್ಷ ಸದಸ್ಯರಿದ್ದಾರೆ. ಅವರ ಹಣಕಾಸು ವಹಿವಾಟು ರೂ 800 ಕೋಟಿಗೆ ತಲುಪಿದೆ. ಆದರೆ ಪ್ರಸ್ತುತ ಸರ್ಕಾರ ಆ ಹಣವನ್ನು ನಿರ್ವಹಣೆ ಮಾಡುವ ಬಗ್ಗೆ ತರಬೇತಿ ನೀಡಬೇಕು’ ಎಂದು ಒತ್ತಾಯಿಸಿದರು. ಬೆಳಿಗ್ಗೆ ಆರಂಭವಾದ ಸಮ್ಮೇಳನವನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರಗೌಡ ಉದ್ಘಾಟಿಸಿದರು. ಮಾಜಿ ಸಚಿವೆ ರಾಣಿ ಸತೀಶ್ ಸ್ಮರಣ ಸಂಚಿಕೆ ‘ಕಿನ್ನರಿ’ ಬಿಡುಗಡೆ ಮಾಡಿದರು. ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಡಿಡಿಡಿ.ಇಘೆಈ.ಚಿಚ್ಞಜಚ್ಝಟ್ಟಛಿ.ಜ್ಞಿ ವೆಬ್‌ಸೈಟ್ ಬಿಡುಗಡೆ ಮಾಡಿದರು.ಶಾಸಕ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ದಯಾನಂದ ರೆಡ್ಡಿ, ಬೆಂಗಳೂರು ವಿವಿ ಕುಲಪತಿ ಡಾ.ಎನ್.ಪ್ರಭುದೇವ್, ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು. ನಂತರ ಸ್ತ್ರೀ ಭ್ರೂಣ ಹತ್ಯೆ ತಡೆ ಕಾಯ್ದೆಯ ಕುರಿತು ವಿವಿಧ ವಿಷಯ ತಜ್ಞರು ಉಪನ್ಯಾಸ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.