ಶುಕ್ರವಾರ, ಮೇ 14, 2021
21 °C

ಸಾರಿಗೆ ಸೌಲಭ್ಯ ಕಾಣದ ಯಲಗಲದಿನ್ನಿ

ಪ್ರಜಾವಾಣಿ ವಾರ್ತೆ, ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ತಾಲ್ಲೂಕು ಕೇಂದ್ರದಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ಈ ಗ್ರಾಮ ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಬೀದತ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಿಂದ ಅನತಿ ದೂರದಲ್ಲಿದೆ. ತಗ್ಗು ಪ್ರದೇಶದ ಸಂದಿಗೊಂದಿಗಳ ಮಧ್ಯೆ ತಲೆ ಎತ್ತಿ ನಿಂತಿರುವ ಅಂದಾಜು 250ಕ್ಕೂ ಹೆಚ್ಚು ಮನೆಗಳು ಕಾಣಸಿಗುತ್ತವೆ. ಗುಂಪು ಮನೆಗಳ ಆಶ್ರಯ ಕಾಲೋನಿ ಬಿಟ್ಟರೆ ಈ ಗ್ರಾಮಕ್ಕೆ ಇತರೆ ಸೌಲಭ್ಯಗಳು ಮರೀಚಿಕೆಯಾಗಿವೆ.ಈ ಗ್ರಾಮದಲ್ಲಿ ಅಂದಾಜು 1100 ಜನಸಂಖ್ಯೆ ಇದ್ದು ಇಲ್ಲಿ 400 ಮತದಾರರಿದ್ದಾರೆ. ಯಲಗಲದಿನ್ನಿ, ಐದನಾಳ, ಕರಡಕಲ್ಲ ತಾಂಡಾ ಒಳಗೊಂಡ ಕ್ಷೇತ್ರದಿಂದ 5 ಸದಸ್ಯರನ್ನು ಗ್ರಾಮ ಪಂಚಾಯಿತಿಗೆ ಆಯ್ಕೆ ಮಾಡಲಾಗುತ್ತದೆ.ಪ್ರಸಕ್ತ ಸಾಲಿಗೆ ಬಾಲಪ್ಪ ತೊರಲಬೆಂಚಿ ಎಂಬುವವರು ಸದಸ್ಯರಾಗಿದ್ದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ ಸಂಗಮ್ಮ ಗಿರಿಯಪ್ಪನವರ ಎಂಬ ಮಹಿಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಿರ್ದೇಶಕರಾಗಿ ಆಯ್ಕೆಗೊಂಡಿರುವುದು.ಗುಂಪು ಮನೆಗಳ ಹಂಚಿಕೆ ಹೊರತುಪಡಿಸಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ  ಸೌಲಭ್ಯಗಳು ತಲುಪಿಲ್ಲ. ರಸ್ತೆಗಳ ಅಭಿವೃದ್ಧಿ ಇಲ್ಲದೆ, ಮುಳ್ಳುಕಂಟಿ, ಕಲ್ಲುಗುಂಡುಗಳ ಮಧ್ಯೆ ನಡೆದಾಡುತ್ತೇವೆ.ಚರಂಡಿ ವ್ಯವಸ್ಥೆ ಇಲ್ಲದೆ ಹೋಗಿದ್ದರಿಂದ ಚರಂಡಿ ನೀರು ರಸ್ತೆಗುಂಟ ಹರಿದು ಗಬ್ಬೆದ್ದು ನಾರುವ ವಾತಾವರಣ. ತೆರೆದ ಬಾವಿ ಕಲುಷಿತ ನೀರು ಬಳಕೆ ಅನಿವಾರ್ಯ. ವೈದ್ಯರು ನೀರು ಬಳಸದಂತೆ ಸೂಚಿಸಿದ್ದಾರೆ. ಕುಡಿಯುವ ನೀರಿಗೆ ಸಮೀಪದ ಲಿಂಗಸಗೂರಿಗೆ ತೆರಳಬೇಕು ಎಂದು ವೀರಭದ್ರಪ್ಪ ಕಟಾಲಿ ಬೇಸರ ವ್ಯಕ್ತಪಡಿಸಿದರು.ಬಹುತೇಕ ಪುರುಷರು ಪಟ್ಟಣದಲ್ಲಿ ಹಮಾಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ಮಾತ್ರ ಬಂಗಾರದ ಬೆಲೆ ಬಂದಿದ್ದು ಕೆಲ ಕುಟುಂಬಗಳಿಗೆ ಸಹಕಾರಿ ಆಗಿದೆ ಎಂದು ಬಸವರಾಜ ಗಿರಿಯಪ್ಪನವರ ವಾಸ್ತವ ಚಿತ್ರಣ ಬಿಡಿಸಿಟ್ಟರು.ಆಶ್ರಯ ಮನೆ, ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರದ ಸೌಲಭ್ಯ ಕಲ್ಪಿಸಿದ್ದು ಬಿಟ್ಟರೆ ಉಳಿದ ಸೌಲಭ್ಯಗಳು ಈ ಗ್ರಾಮದತ್ತ ಸುಳಿದಿಲ್ಲ. ಕೂಲಿಕಾರರೇ ಹೆಚ್ಚಾಗಿರುವ ಈ ಗ್ರಾಮಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಗೊಳ್ಳದಿರುವುದು ದುರುದೃಷ್ಟಕರ.ಇಂದಿಗೂ ಯಲಗಲದಿನ್ನಿ ಸಾರಿಗೆ ಸಂಪರ್ಕ ಕಂಡಿಲ್ಲ. ತಮ್ಮ ಗ್ರಾಮದ ಪಾಲಿಗೆ ಸರ್ಕಾರಗಳು ಸತ್ತಿವೆ ಎಂದು ಅಮರೆಗೌಡ ಮಾಲಿಪಾಟೀಲ, ಬಸಯ್ಯ ಹಿರೇಮಠ ನೋವಿನಿಂದ ಹೇಳಿಕೊಂಡರು.ಅವಿದ್ಯಾವಂತರ ಸಂಖ್ಯೆ ಹೆಚ್ಚಾಗಿರುವ ಈ ಗ್ರಾಮದಲ್ಲಿ ಹಿಂದುಳಿದ ವರ್ಗದವರೆ ಹೆಚ್ಚಾಗಿ ವಾಸಿಸುತ್ತಿದ್ದಾರೆ.ಸರ್ಕಾರದ ಯಾವೊಂದು ಸೌಲಭ್ಯಗಳು ದೊರೆಯದಿದ್ದರೂ ತಮ್ಮ ಗ್ರಾಮದ ಆರಾಧ್ಯ ದೈವ ಯಲಗೂರೇಶ (ಹನುಮಂತ ದೇವರು) ತಮ್ಮನ್ನು ಕಾಪಾಡಿಕೊಂಡು ಬಂದಿದ್ದಾನೆ. ತಮಗೆ ಯಾರ ಹಂಗೂ ಇಲ್ಲ ಎಂದು ಹನುಮಮ್ಮ, ದೇವಮ್ಮ, ಹುಲಗಮ್ಮ ಅವರಿಂದ ಆಡಳಿತ ವ್ಯವಸ್ಥೆಯ ಬಗ್ಗೆ ಆಕ್ರೋಶದ ಮಾತುಗಳು ಕೇಳಿಬಂದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.