ಶುಕ್ರವಾರ, ಮೇ 14, 2021
35 °C

ಸಾರ್ವಜನಿಕರ ಮೇಲೇಕೆ ಹೊರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 88 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಬೇಕು ಎಂಬ ರಾಜ್ಯ ವಿದ್ಯುತ್ ಪ್ರಸರಣ ಕಂಪೆನಿಗಳ ಪ್ರಸ್ತಾವಕ್ಕೆ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ(ಕೆಇಆರ್‌ಸಿ) ಸಭೆಯಲ್ಲಿ ಸಾರ್ವಜನಿಕರು ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.ಸಾರ್ವಜನಿಕರೂ ಸೇರಿದಂತೆ ವಿವಿಧ ಉದ್ದಿಮೆಗಳಿಂದ ವಿದ್ಯುತ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಮತ್ತು ಖರೀದಿ ವೆಚ್ಚ ಸರಿದೂಗಿಸಲು ವಿದ್ಯುತ್ ದರ ಹೆಚ್ಚಳ ಅನಿವಾರ್ಯ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ವಾದಿಸಿದರೆ, `ಕೈಗಾರಿಕೆಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಸುವ ನೆಪದಲ್ಲಿ ದರ ಹೆಚ್ಚಳ ಬೇಡ~ ಎಂದು ಸಾರ್ವಜನಿಕರು ಒತ್ತಾಯಿಸಿದರು.ಆಯೋಗದ ಕಚೇರಿಯಲ್ಲಿ ಸೋಮವಾರ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಬೆಸ್ಕಾಂ, ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ನೈಋತ್ಯ ರೈಲ್ವೆ, ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ, ಸದಸ್ಯರಾದ ವಿ. ಹಿರೇಮಠ ಮತ್ತು ಕೆ. ಶ್ರೀನಿವಾಸ ರಾವ್ ಅವರ ಎದುರು ವಾದ ಮಂಡಿಸಿದರು.2010ರಲ್ಲಿ 6,032 ಕೋಟಿ ರೂಪಾಯಿ ಇದ್ದ ವಿದ್ಯುತ್ ಖರೀದಿ ದರ 2011ರಲ್ಲಿ 7,492 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಮುಂದಿನ ವರ್ಷ ಇದು 10,552 ಕೋಟಿ ರೂಪಾಯಿಗೆ ಏರುವ ಸಾಧ್ಯತೆ ಇದೆ. ವಿದ್ಯುತ್ ಬಳಕೆ ಹೆಚ್ಚಿರುವ ಅವಧಿಯಲ್ಲಿ ಬೇಡಿಕೆ ಶೇಕಡ 48ರಷ್ಟು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಮಣಿವಣ್ಣನ್ ವಿವರಿಸಿದರು.ಮಣಿವಣ್ಣನ್ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, `ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ಪಡೆಯುತ್ತಿರುವ ಕೆಲವು ಕುಟುಂಬಗಳು ನಿಗದಿತ 18 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುತ್ತಿವೆ. ಇಂಥ ವಿದ್ಯುತ್ ಕಳ್ಳತನಗಳನ್ನು ತಡೆಗಟ್ಟಿದರೆ ಪದೇಪದೇ ದರ ಹೆಚ್ಚಿಸುವ ಅಗತ್ಯ ಬಾರದು~ ಎಂದರು.ಕಾಸಿಯಾದ ಅಧ್ಯಕ್ಷ ರಾಜಾರಾಮ ಶೆಟ್ಟಿ ಮಾತನಾಡಿ, `ರಾಷ್ಟ್ರೀಯ ವಿದ್ಯುತ್ ದರ ನಿಗದಿ ನೀತಿಯ ಅನ್ವಯ ಚಾಲ್ತಿಯಲ್ಲಿರುವ ದರದ ಶೇಕಡ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಕೆ ಮಾಡಲು ಸಾಧ್ಯವಿಲ್ಲ. ಆದರೆ ವಿದ್ಯುತ್ ಸರಬರಾಜು ಕಂಪೆನಿಗಳ ಈಗಿನ ಪ್ರಸ್ತಾವ ರಾಷ್ಟ್ರೀಯ ನೀತಿಗೆ ಅನುಗುಣವಾಗಿಲ್ಲ~ ಎಂದರು.ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಪ್ರತ್ಯೇಕ ವಿದ್ಯುತ್ ದರ ನಿಗದಿ ಮಾಡಿರುವ ರೀತಿಯಲ್ಲೇ ತನಗೂ ಮಾಡಬೇಕು ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಪ್ರತಿನಿಧಿಗಳು ಕೋರಿದರು. ಇದೇ ವಾದವನ್ನು ನೈಋತ್ಯ ರೈಲ್ವೆಯ ಪ್ರತಿನಿಧಿಗಳು ಮುಂದಿಟ್ಟರು.ಮುಂದೂಡಿಕೆ: ಅಹವಾಲು ಸ್ವೀಕಾರ ಸಭೆಯನ್ನು ಆಯೋಗ ಇದೇ 22ಕ್ಕೆ ಮುಂದೂಡಿತು. ವಿದ್ಯುತ್ ದರ ಹೆಚ್ಚಳ ಪ್ರಸ್ತಾವಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸುವ ಕಡೆಯ ದಿನಾಂಕವನ್ನು ಇದೇ 19ರವರೆಗೆ ವಿಸ್ತರಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

`ಅಹವಾಲು ಆಲಿಸಬಾರದು...~

ಬೆಂಗಳೂರು: ಅಹವಾಲು ಸ್ವೀಕಾರ ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಪರವಾಗಿ ಆಯೋಗದ ಎದುರು ವಾದ ಮಂಡಿಸಿದ ವಕೀಲ ಶ್ರೀಧರ ಪ್ರಭು ಅವರು, `ವಿದ್ಯುತ್ ದರ ಹೆಚ್ಚಳ ಪ್ರಸ್ತಾವಕ್ಕೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು ಇದೇ 14 ಕಡೆಯ ದಿನ. ಅಲ್ಲಿಯವರೆಗೆ ಅಹವಾಲು ಸ್ವೀಕರಿಸಬಾರದು~ ಎಂದು ಕೋರಿದರು.`ಇಂದು (ಸೆ. 12) ಅಹವಾಲು ಸ್ವೀಕರಿಸಬಾರದು ಎಂದು ಕೋರಿ ಎಫ್‌ಕೆಸಿಸಿಐ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ. ಅಲ್ಲಿಯವರೆಗೂ ಅಹವಾಲು ಸ್ವೀಕಾರ ಸಭೆಯನ್ನು ಮುಂದೂಡಬೇಕು~ ಎಂದು ಕೋರಿದರು. ಆದರೆ ಅವರ ಮನವಿಯನ್ನು ಆಯೋಗ ಪುರಸ್ಕರಿಸಲಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.