ಶನಿವಾರ, ಏಪ್ರಿಲ್ 17, 2021
27 °C

ಸಾಲ ಮನ್ನಾ: ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು

ಪ್ರಜಾವಾಣಿ ವಾರ್ತೆ ಬಿ.ಎನ್.ಶ್ರೀಧರ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈತರ ಸಾಲ ಮತ್ತು ಬಡ್ಡಿ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 3,600 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದ್ದು, ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜ್ಯ ಸರ್ಕಾರ ಕರಸತ್ತು ನಡೆಸಿದೆ.

ಸಾಲ ಮನ್ನಾ ಯೋಜನೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಲ್ಲ. ಹೀಗಾಗಿ ಅದಕ್ಕೆ ಹಣಕಾಸು ಕೂಡ ಹೊಂದಿಸಿಲ್ಲ.ಬೇರೆ ಬೇರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹ ಅನಿವಾರ್ಯವಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಸಾಲ ಮರುಪಾವತಿ ಕಷ್ಟ ಎನ್ನುವ ಕಾರಣಕ್ಕೆ 25 ಸಾವಿರ ರೂಪಾಯಿವರೆಗಿನ ಬೆಳೆ ಸಾಲ ಮನ್ನಾ ಯೋಜನೆ ಜಾರಿ ಮಾಡಲಾಯಿತು. ಇದರಿಂದ ಸುಮಾರು 16 ಲಕ್ಷ ರೈತರಿಗೆ ಪ್ರಯೋಜನ ಆಗಲಿದೆ ಎಂದು ಸಹಕಾರ ಇಲಾಖೆ ಲೆಕ್ಕಾಚಾರ ಮಾಡಿದೆ.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಾಲ ಮನ್ನಾ ಯೋಜನೆಯನ್ನು ಜುಲೈನಲ್ಲಿ ಪ್ರಕಟಿಸಿದ ಸಂದರ್ಭದಲ್ಲೇ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಶೇ 0.5ರಷ್ಟು ಹೆಚ್ಚಿಸುವ ತೀರ್ಮಾನವನ್ನೂ ತೆಗೆದುಕೊಂಡಿದ್ದರು. ಆ ಪ್ರಕಾರ ಆಗಸ್ಟ್ 1ರಿಂದ ವ್ಯಾಟ್ ದರ ಹೆಚ್ಚಾಗಿದೆ. ಸಾಲ ಮನ್ನಾ ಯೋಜನೆಗೆ ಹಣ ಹೊಂದಿಸುವ ಕಾರ್ಯಕ್ರಮದ ಒಂದು ಭಾಗವಾಗಿ ವ್ಯಾಟ್ ಪ್ರಮಾಣ ಹೆಚ್ಚಿಸಿದ್ದು, ಇದರಿಂದ  1,000 ಕೋಟಿ ರೂಪಾಯಿ ಹೆಚ್ಚುವರಿ ವರಮಾನ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.ಇದರ ಹೊರತಾಗಿಯೂ ಇನ್ನೂ ಸುಮಾರು 2,600 ಕೋಟಿ ರೂಪಾಯಿ ಹಣ ಸಾಲ ಮನ್ನಾ ಯೋಜನೆಗೆ ಕಡಿಮೆ ಬೀಳಲಿದ್ದು, ಅದನ್ನು ಹೊಂದಿಸುವ ಮಾರ್ಗೋಪಾಯಗಳ ಚಿಂತನೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ತೊಡಗಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ತೆರಿಗೆ ಸಂಗ್ರಹದಲ್ಲಿ ಖೋತಾ ಆಗಿಲ್ಲ. ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹ ಆಗುವ ಸಾಧ್ಯತೆ ಇದೆ. ಈ ವರಮಾನದ ನಿರೀಕ್ಷೆಯಲ್ಲೇ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳಿಗೂ ಹಣಕಾಸಿನ ನೆರವು ಒದಗಿಸಬೇಕಾಗಿದೆ. ವರಮಾನದ ಹೊಸ ಮೂಲಗಳು ಇಲ್ಲ. ಇಂತಹ ಸನ್ನಿವೇಶದಲ್ಲಿ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಹೇಗೆ?ಈ ಪ್ರಶ್ನೆಗೆ ಹಣಕಾಸು ಇಲಾಖೆ ಸುಲಭ ಉತ್ತರ ಶೋಧಿಸಿದೆ. ವಿವಿಧ ಯೋಜನೆಗಳಿಗೆ ಸರ್ಕಾರ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿ ಹಂಚಿಕೆ ಮಾಡಿದ್ದು, ಅಷ್ಟೂ ಹಣವನ್ನು ನಿಗದಿತ ಅವಧಿಯಲ್ಲಿ ಉಪಯೋಗಿಸಿದ ನಿದರ್ಶನಗಳು ಕಡಿಮೆ. ಬಳಕೆ ಮಾಡದ ಹಣವನ್ನು ಸಾಲ ಮನ್ನಾ ಯೋಜನೆಗೆ ವರ್ಗಾಯಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.ಬರ ಇರುವ ಕಾರಣ ಯೋಜನೆಗಳ ಅನುಷ್ಠಾನ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಬರ ಪರಿಹಾರ ಕಾರ್ಯಕ್ರಮಗಳತ್ತ ಆಡಳಿತ ಯಂತ್ರ ತೊಡಗಿಸಿಕೊಂಡಿರುವ ಕಾರಣ ಅಭಿವೃದ್ಧಿ ಯೋಜನೆಗಳು ಕುಂಟುತ್ತಾ ಸಾಗಿವೆ. ಈ ಕಾರಣದಿಂದ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಪೂರ್ಣ ಬಳಕೆ ಆಗುವುದು ಅನುಮಾನ ಎನ್ನಲಾಗಿದೆ.`ಯಾವ ಯೋಜನೆಗೆ ಎಷ್ಟು ಹಣ ಬಳಕೆಯಾಗಿದೆ. ಬಳಕೆ ಆಗದೇ ಇರುವುದೆಷ್ಟು ಎಂಬುದನ್ನು ನವೆಂಬರ್‌ನಲ್ಲಿ ಪರಿಶೀಲಿಸಲಾಗುವುದು. ಪರಿಶೀಲನೆಯ ಬಳಿಕ ಬಳಸದ ಹಣವನ್ನು ವಾಪಸ್ ಪಡೆದು, ಸಾಲ ಮನ್ನಾ ಯೋಜನೆಗೆ ನೀಡುವ ಬಗ್ಗೆ ಚಿಂತನೆ ನಡೆದಿದೆ~ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ವಿ.ನಾಗರಾಜನ್ `ಪ್ರಜಾವಾಣಿ~ಗೆ ತಿಳಿಸಿದರು.`ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗಿದೆ. ಸಾಲ ಮನ್ನಾ ಯೋಜನೆಗೆ ಪೂರ್ಣ ಪ್ರಮಾಣದ ಹಣ ಒಮ್ಮೆಗೇ ಬೇಕಿಲ್ಲ. ಅಗತ್ಯ ಇರುವಷ್ಟು ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಹಣವನ್ನು ಮುಂದಿನ ಹಣಕಾಸು ವರ್ಷದವರೆಗೂ ಬಿಡುಗಡೆ ಮಾಡಬಹುದು.ಹೀಗಾಗಿ ಸಮಸ್ಯೆ ಇಲ್ಲ. ಆದರೆ, ಹಣ ಹೊಂದಿಸುವ ಕಸರತ್ತು ಮಾತ್ರ ಕಾಲಕಾಲಕ್ಕೆ ಮಾಡಬೇಕಾಗುತ್ತದೆ. ಹಣದ ಲಭ್ಯತೆ ನೋಡಿಕೊಂಡು ಆದ್ಯತೆ ಮೇಲೆ ಸಹಕಾರ ಸಂಸ್ಥೆಗಳಿಗೆ ಹಣ ನೀಡಲಾಗುವುದು~ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.