ಗುರುವಾರ , ಜೂಲೈ 9, 2020
25 °C

ಸಾವಯವ ಕೃಷಿಗೆ ಉತ್ತೇಜನ; ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವಯವ ಕೃಷಿಗೆ ಉತ್ತೇಜನ; ತರಬೇತಿ

ಚಿಂತಾಮಣಿ: ಚೆನ್ನೈ ಮೂಲದ ಸ್ವಯಂ ಸೇವಾ ಸಂಸ್ಥೆ ಡೆವಲಪ್‌ಮೆಂಟ್ ಪ್ರಮೋಷನ್ ಗ್ರೂಪ್ (ಡಿಪಿಜಿ) ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಸುಮಾರು 80 ಸಾವಿರ ಕುಟುಂಬಗಳೊಂದಿಗೆ ಮಹಿಳಾ ಸಬಲೀಕರಣ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮತ್ತು ಗುಡಿಬಂಡೆ ತಾಲ್ಲೂಕು ಹಾಗೂ ದಾವಣಗೆರೆ ಜಿಲ್ಲೆ ಜಗಳೂರು ಮತ್ತು ಹರಪನಹಳ್ಳಿ ತಾಲ್ಲೂಕುಗಳ 128 ಹಳ್ಳಿಗಳ 6964 ಕುಟುಂಬಗಳು ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಯೋಜನಾಧಿಕಾರಿ ಬಸವರಾಜ್ ತಿಳಿಸಿದರು.ಯೋಜನೆ ವ್ಯಾಪ್ತಿಗೆ ಒಳಪಡುವ ಆಯ್ದ 8 ಗ್ರಾಮಗಳಲ್ಲಿ ಕೃಷಿಗೆ ಉತ್ತೇಜನ ನೀಡುತ್ತಿದೆ. ಎಲ್ಲ ರೈತರ ಜಮೀನುಗಳ ಮಣ್ಣು ಪರೀಕ್ಷೆ ಮಾಡಿಸಿದ್ದು, ಸಾವಯವ ಕೃಷಿಗೆ ಉತ್ತೇಜನ ನೀಡಲು ವಿವಿಧ ಹಂತದ ತರಬೇತಿ ನೀಡಲಾಗಿದೆ. ಈ ಗ್ರಾಮಗಳ ರೈತರನ್ನು ಶ್ರೀರಾಮಚಂದ್ರಪುರ ಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಾವಯವ ಕೃಷಿ ಪ್ರತಿಷ್ಠಾನ ಕುರುವಳ್ಳಿಗೆ ಕ್ಷೇತ್ರ ಪ್ರವಾಸ ಕೈಗೊಳ್ಳಲಾಗಿದೆ.ರೈತರು ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಾವಯವ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಎರೆಹುಳ ಗೊಬ್ಬರ, ಬಯೋಡೈಜೆಸ್ಟರ್, ಸ್ಥಳೀಯ ತಳಿಯ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ, ತೋಟಗಾರಿಕೆ, ಅಜೋಲಾ, ಬೀಜೋಪಚಾರ, ಜೀವಾಮೃತ ತಯಾರಿಕೆ ಮುಂತಾದ ಚಟುವಟಿಕೆ ಅನುಷ್ಠಾನಗೊಳಿಸುತ್ತಿದ್ದಾರೆ. ಜರ್ಮನಿಯ ಇಇಡಿ ಸಂಸ್ಥೆ ಯೋಜನೆ ಅನುಷ್ಠಾನಕ್ಕೆ ಆರ್ಥಿಕ ನೆರವು ನೀಡುತ್ತಿದೆ. ಡಿಪಿಜಿ ಮತ್ತು ಇಇಡಿ ಸಂಸ್ಥೆಗಳು ಯೋಜನೆಯ ಉಸ್ತುವಾರಿ ನಡೆಸುತ್ತಿವೆ.

 

ಇತ್ತೀಚೆಗೆ ಜರ್ಮನಿ ಇಇಡಿ ಸಂಸ್ಥೆಯ ಗೆರ್ಲ್ಯಾಂಡ್ ಸ್ಕಿನೇಡರ್, ಹರಿಕೃಷ್ಣ, ಡಿಪಿಡಿ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಕ್ತರ್ ಸಾಲೋಮನ್ ತಾಲ್ಲೂಕಿನ ದ್ವಾರಪ್ಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. ದ್ವಾರಪ್ಪಲ್ಲಿ ಗ್ರಾಮದಲ್ಲಿ 50 ಕುಟುಂಬಗಳು ಸಾವಯವ ಕೃಷಿಯನ್ನು ಅಳವಡಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. 15 ಎರೆಹುಳಗೊಬ್ಬರ ಘಟಕ, 15 ಹಸುಗಂಜಲ ಸಂಗ್ರಹಣಾ ತೊಟ್ಟಿಗಳು, 15 ಅಜೋಲಾ ಬೆಳೆಯುವ ಘಟಕ, 12 ರೈತರಿಗೆ ಸ್ಥಳೀಯ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.