ಭಾನುವಾರ, ಜನವರಿ 19, 2020
23 °C

ಸಾವಯವ ಕೃಷಿ: ರೈತನಿಗೆ ಖುಷಿ

ಬಿ.ಸಿ. ಅರವಿಂದ್, ಭೂತನಕಾಡು Updated:

ಅಕ್ಷರ ಗಾತ್ರ : | |

ಮಲೆನಾಡಿನಲ್ಲಿ ಸಂಪೂರ್ಣ ಸಾವಯವ ತೋಟ ತುಂಬಾ ವಿರಳ. ಅಂತಹದ್ದರಲ್ಲೇ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿ ಗ್ರಾಮದ ಚಂದ್ರಶೇಖರ್ ನಾರಣಾಪುರ ಅವರು ಸಂಪೂರ್ಣ ಸಾವಯವ ತೋಟ ಮಾಡಿದ್ದಾರೆ.ಸಾವಯವ ಕೃಷಿಯ ಬಗ್ಗೆ ಅವರಲ್ಲಿ ಅಪಾರ ಜ್ಞಾನವಿದೆ. ಈ ವಿಧಾನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಸರಳ ಪರಿಹಾರವಿದೆ. ಹೆಚ್ಚಿನ ಇಳುವರಿಯನ್ನು ಪಡೆಯುವ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಮಾಹಿತಿ ಅವರ ಬಳಿಯಿದೆ. ತಮ್ಮ ತೋಟಕ್ಕೆ ಬರುವ ರೈತರಿಗೆ ಆತ್ಮೀಯವಾಗಿ ಮಾರ್ಗದರ್ಶನ ನೀಡುವುದೆಂದರೆ ಅವರಿಗೆ ಎಲ್ಲಿಲ್ಲದ ಸಂತೋಷ.ಚಿಕ್ಕಮಗಳೂರು ನಗರದಿಂದ 3 ಕಿ.ಮೀ. ದೂರದಲ್ಲಿನ ಅವರ ತೋಟಕ್ಕೆ ಹೊಸ ಹೊಸ ಜನ ಭೇಟಿ ನೀಡುತ್ತಾರೆ. ಇದಕ್ಕಾಗಿಯೇ ಅವರು ಇತ್ತೀಚೆಗೆ ಭಾರತದಲ್ಲಿ ಜನಪ್ರಿಯವಾಗುತ್ತಿರುವ ಕೃಷಿ ಪ್ರವಾಸೋದ್ಯಮವನ್ನು ತಮ್ಮ ತೋಟದಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಿದ್ದಾರೆ.ತಮ್ಮ 13 ಎಕರೆ ತೋಟದಲ್ಲಿ ಅಡಿಕೆ, ಬಾಳೆ, ಕೋಕೊ, 19 ಜಾತಿಯ ಹಣ್ಣಿನ ಗಿಡಗಳು, ಶುಂಠಿ, ಭತ್ತ, ಗೋಧಿ ಬೆಳೆಯುತ್ತಿದ್ದಾರೆ. ಸುತ್ತ ಬೇಲಿಗೆ ಗ್ಲಿರಿಸೀಡಿಯಾ, ಜತ್ರೋಪ, ಲಂಟಾನ, ಹೊಂಗೆ, ಹರಳು ಬೆಳೆದು ಎರೆಗೊಬ್ಬರ ತಯಾರಿಯಲ್ಲಿ ಬಳಸುತ್ತಾರೆ. 12 ಹಸುಗಳನ್ನು ಸಾಕಿದ್ದಾರೆ. ಮೇವಿಗೆ ಹುಲ್ಲು ಬೆಳೆಸಿದ್ದಾರೆ. ಅಜೋಲಾ ಘಟಕವನ್ನು ಸ್ಥಾಪಿಸಿದ್ದಾರೆ. ಅಲ್ಲೇ ದೊಡ್ಡದಾದ ಬಯೋಡೈಜೆಸ್ಟರ್ ಘಟಕ ಇದೆ.ಅವರ ತೋಟದಲ್ಲಿ ಗಮನ ಸೆಳೆಯುವ ಬೆಳೆ ಎಂದರೆ ಶುಂಠಿ. ಏಕೆಂದರೆ ಅದಕ್ಕೆ ರೋಗ, ಕೀಟಗಳ ಬಾಧೆ ಜಾಸ್ತಿ. ಅದನ್ನು ನಿಯಂತ್ರಿಸಲು `ರಾಸಾಯನಿಕ ಔಷಧ ಬಳಕೆ ಅನಿವಾರ್ಯ, ಸಾವಯವ ವಿಧಾನದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ~ ಎಂಬುದು ಬಹುತೇಕ ರೈತರ ಅಭಿಪ್ರಾಯ.ಆದರೆ ಚಂದ್ರಶೇಖರ್ ಅರ್ಧ ಎಕರೆಯಲ್ಲಿ ಜೀವಾಮೃತ, ಗಂಜಲ, ಬೋಡೋ ದ್ರಾವಣಗಳನ್ನಷ್ಟೇ ಉಪಯೋಗಿಸಿ 32 ಸಾವಿರ ರೂಪಾಯಿ ಖರ್ಚು ಮಾಡಿ ಹುಲುಸಾಗಿ ಬೆಳೆ ತೆಗೆಯುತ್ತಿದ್ದಾರೆ. ಹುಳಿ ಮಜ್ಜಿಗೆ ಸಿಂಪಡಿಸಿ ಸೊರಗು ರೋಗ ಹತೋಟಿಗೆ ತಂದಿದ್ದಾರೆ. 150 ಚೀಲ ಇಳುವರಿ ನಿರೀಕ್ಷಿಸಿದ್ದಾರೆ. ಆದರೆ ಅವರ ಪಕ್ಕದ ಹೊಲದಲ್ಲಿ ರೈತರೊಬ್ಬರು ರಾಸಾಯನಿಕ ಕೃಷಿಯನ್ನು ಕೈಗೊಂಡು ಅರ್ಧ ಎಕರೆಗೆ 65 ಸಾವಿರ ರೂ ಖರ್ಚು ಮಾಡಿದ್ದಾರೆ.ಇನ್ನು ಇವರ ಭತ್ತದ ಕೃಷಿಯಂತೂ ವಿಶೇಷವಾಗಿದೆ. ಅರ್ಧ ಎಕರೆಯಲ್ಲಿ ತುಂಗಾ ತಳಿ ನಾಟಿ ಮಾಡಿದ್ದಾರೆ. ಇದೀಗ 3 ತಿಂಗಳಾಯಿತು. ಸಾಮಾನ್ಯವಾಗಿ ಈ ಸಮಯದಲ್ಲಿ ಎರಡೂವರೆ ಅಡಿ ಎತ್ತರ ಮತ್ತು 24 ಕವಲು ಒಡೆಯುತ್ತದೆ. ಆದರೆ ಇವರ ಜಮೀನಿನಲ್ಲಿ 6 ಅಡಿ ಎತ್ತರ ಬೆಳೆದು ಒಂದು ಬುಡದಲ್ಲಿ 78 ಕವಲು ಒಡೆದಿದೆ. ಭತ್ತದ ಕೃಷಿಗೆ ಗಂಜಲ ಮಾತ್ರ ಉಪಯೋಗಿಸಿದ್ದಾರೆ.13 ಎಕರೆ ತೋಟದಲ್ಲಿ ಅಡಿಕೆ ಮತ್ತು ಕೋಕೊ ಹಾಕಿದ್ದರೂ ಫಸಲು ಇನ್ನೂ ಪ್ರಾರಂಭವಾಗಿಲ್ಲ. ಬಾಳೆ  ಮತ್ತು ದಿನಕ್ಕೆ 75 ಲೀಟರ್ ಹಾಲು ಮಾರಾಟ ಸದ್ಯಕ್ಕೆ ಆದಾಯ ತಂದು ಕೊಡುತ್ತಿದೆ. ವರ್ಷಕ್ಕೆ 100 ಟನ್ ಗೊಬ್ಬರ ತಯಾರಿಸುತ್ತಾರೆ. ಇದರಲ್ಲಿ 30 ಟನ್ ಎರೆಹುಳ ಗೊಬ್ಬರ ಮಾರಾಟ ಮಾಡುತ್ತಾರೆ. ಈ ಆದಾಯ ತೋಟದ ನಿರ್ವಹಣೆಗೆ ಸಾಕು ಎನ್ನುತ್ತಾರೆ.ಇವರ ತೋಟದಲ್ಲಿ ಉಳುಮೆ ಇಲ್ಲ. ಸುಮಾರು 30 ಜಾತಿಯ ಕಳೆಹುಲ್ಲು ಇದೆ. ವರ್ಷಕ್ಕೆ 4 ಸಲ ಕತ್ತರಿಸಿ ಮುಚ್ಚಿಗೆ ಮಾಡುತ್ತಾರೆ. ಇದರಿಂದ ಮುಚ್ಚಿಗೆ ಕಳೆಯಲ್ಲಿ ಲಕ್ಷಾಂತರ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗಿ ಹ್ಯೂಮಸ್ ಉಂಟಾಗುತ್ತದೆ ಮತ್ತು ಮಣ್ಣು ಸವಕಳಿ ತಪ್ಪುತ್ತದೆ. ಸಾವಯವ ಕೃಷಿ ಯಶಸ್ವಿಯಾಗಬೇಕಾದರೆ ರೈತರು ತಮ್ಮ ಹೊಲದಲ್ಲೇ ಗೊಬ್ಬರ ಮತ್ತು ಕೀಟನಾಶಕ ತಯಾರಿಸಿಕೊಳ್ಳಬೇಕು ಎನ್ನುತ್ತಾರೆ ಚಂದ್ರಶೇಖರ್.ಇವರು ಕೃಷಿಗೆ ಬರುವುದಕ್ಕಿಂತ ಮುಂಚೆ 18 ವರ್ಷ ಪತ್ರಿಕಾ ರಂಗದಲ್ಲಿದ್ದರು. ನಂತರ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅಧ್ಯಯನ ನಡೆಸಿ `ಕರ್ನಾಟಕ ವೀರಶೈವ ಮಠಗಳು~ ಎಂಬ ಗ್ರಂಥವನ್ನು ಪ್ರಕಟಿಸಿದರು. ಇವರ ಸಾವಯವ ಕೃಷಿ ಸಾಧನೆ ಗುರುತಿಸಿ ಬಾಗಲಕೋಟೆ ತೋಟಗಾರಿಕೆ ವಿವಿ ಈಚೆಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಚಂದ್ರಶೇಖರ್ ಅವರನ್ನು ಸಂಪರ್ಕಿಸಲು 94484 84024.

ಪ್ರತಿಕ್ರಿಯಿಸಿ (+)