ಭಾನುವಾರ, ಜೂಲೈ 5, 2020
22 °C

ಸಾವಯವ ರೈತ ಈಗ ಕೃಷಿ ಪಂಡಿತ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಅತಿಯಾದ ರಸಗೊಬ್ಬರ, ಕೀಟನಾಶಕ ಮತ್ತು ನೀರು ಬಳಸುವ ಕೃಷಿಯಿಂದ ರೈತ ಕೈಸುಟ್ಟುಕೊಂಡಿದ್ದೇ ಹೆಚ್ಚು. ಇಂತಹ ಕೃಷಿಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವ ಜೊತೆಗೆ ಭೂಮಿಯ ಸತ್ವವೂ ಸಾಯುತ್ತದೆ. ಆದರೆ, ಶೂನ್ಯ ಬಂಡವಾಳದಿಂದ ಸಾವಯವ ಕೃಷಿ ಕೈಗೊಂಡು ಹೆಚ್ಚಿನ ಆದಾಯ ಗಳಿಸುವ ಜೊತೆಗೆ ಭೂಮಿಯ ಫಲವತ್ತತೆಯನ್ನೂ ಕಾಪಾಡಬಹುದು ಎಂಬುದನ್ನು ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ ಗ್ರಾಮದ ರೈತ ಅಶೋಕ ರಾಮು ಧುಮಾಳ ಸಾಬೀತುಪಡಿಸಿದ್ದಾರೆ.ಇವರು ತಮ್ಮ 12 ಎಕರೆಯಷ್ಟು ಭೂಮಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ಭೂಮಿಗೆ ರಸಗೊಬ್ಬರ ಹಾಕುವುದಿಲ್ಲ. ಬೆಳೆಗಳಿಗೆ ಕೀಟನಾಶಕ ಸಿಂಪರಣೆಯ ಮಾತೇ ಇಲ್ಲಾ. ಆದರೂ ಇವರ ಹೊಲದಲ್ಲಿ ಮಾರುದ್ದ ಬೆಳೆಗಳು ನಳನಳಿಸುತ್ತವೆ. ಕಾರಣವಿಷ್ಟೇ, ಅವರು ಭೂಮಿಗೆ ಕೇವಲ ಎರೆಹುಳುವಿನ ಗೊಬ್ಬರ ಹಾಕುತ್ತಾರೆ.ಬೆಳೆಗಳಿಗೆ ಜೈವಿಕ ಗೊಬ್ಬರ ಘಟಕದಿಂದ ಬಸಿದು ಬರುವ ರಸವನ್ನು ಸಿಂಪಡಿಸುತ್ತಾರೆ. ‘ಎರೆಹುಳುವಿನ ಗೊಬ್ಬರದಲ್ಲಿ ಶೇ 50ರಷ್ಟು ಮತ್ತು ಜೈವಿಕ ಗೊಬ್ಬರದಲ್ಲಿ ಶೇ 25ರಷ್ಟು ರೋಗನಿರೋಧಕ ಶಕ್ತಿಯಿದ್ದು, ಇವುಗಳ ಬಳಕೆಯಿಂದ ಬೆಳೆಗಳ ಬಳಿ ರೋಗರುಜಿನುಗಳು ಸುಳಿಯುವುದೇ ಇಲ್ಲ’ ಎನ್ನುತ್ತಾರೆ ಧುಮಾಳ. ಳೆದ ಮಾರುದ್ದ ತಂಬಾಕಿಗೆ ಎಂದೂ ಕೀಟನಾಶಕದ ವಾಸನೆಯೇ ಬಡಿಯುವುದಿಲ್ಲ. ಆದರೂ ತಂಬಾಕು ಎಲೆಗಳು ನೀರಿನಿಂದ ತೊಳೆದಂತಿರುತ್ತವೆ. ಒಂದಿಷ್ಟೂ ಕೀಟಗಳ ಬಾಧೆ ತಗುಲಿದ್ದು ಕಂಡುಬರುವುದಿಲ್ಲ. ಕೇವಲ ಜೈವಿಕ ದ್ರಾವಣವೇ ಅದಕ್ಕೆ ದಿವ್ಯ ಔಷಧಿಯಾಗಿದೆ.ಕಸದಿಂದ ರಸ ತೆಗೆಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅಶೋಕ, ಕೇವಲ ಚಪ್ಪರವೊಂದರ ತಂಪಾದ ಸ್ಥಳದಲ್ಲಿ ಎರೆಹುಳು ಗೊಬ್ಬರ ತಯಾರಿಸುತ್ತಿದ್ದು, ಇದರಿಂದ ಪ್ರತಿವರ್ಷ ತಮ್ಮ ಹೊಲಕ್ಕೆ ಬೇಕಾಗುವಷ್ಟು ಗೊಬ್ಬರ ಪಡೆಯುವ ಜೊತೆಗೆ ಕನಿಷ್ಠ ರೂ. ಒಂದು ಲಕ್ಷ ಆದಾಯವನ್ನು ಎರೆಹುಳು ಮಾರಾಟದಿಂದ ಪಡೆಯುತ್ತಾರೆ.

ಹೊಲದಲ್ಲಿ ಬೆಳೆಯುವ ಕಸಕಡ್ಡಿ, ಕಬ್ಬಿನ ರವದಿ, ಜಾನುವಾರುಗಳ ಕಲ್ಮಶವನ್ನೆಲ್ಲಾ ಈ ಘಟಕದಲ್ಲಿ ಹಾಕಿ ಎರೆಹುಳು ಗೊಬ್ಬರ ಪಡೆಯುತ್ತಿದ್ದು, ಇದಕ್ಕೆ ತಾವು ಹಾಕುವ ಬಂಡವಾಳ ಶೂನ್ಯ. 10 ಗುಂಟೆಯಷ್ಟು ಜಾಗೆಯಲ್ಲಿ ತಂಬಾಕು ಸಸಿ ತಯಾರಿಸಿ, ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಅವುಗಳ ಮಾರಾಟದಿಂದ ಸುಮಾರು ರೂ. 1 ಲಕ್ಷ ಲಾಭ ಗಳಿಸಿರುವ ಇವರು ಅದೇ ಜಾಗೆಯಲ್ಲಿ ಸದ್ಯ ಎಲೆಕೋಸು ಬೆಳೆಯಲಾಗಿದ್ದು, ಅದರಿಂದ ಇದುವರೆಗೆ ರೂ. 30 ಸಾವಿರ ಆದಾಯ ಬಂದಿದೆ.‘ಸಾವಯವ ಕೃಷಿಯಿಂದ  ಎಕರೆಯೊಂದರಲ್ಲಿ ಕನಿಷ್ಠ 1200 ಕೆಜಿ ತಂಬಾಕು ಇಳುವರಿ ಪಡೆದು, ಕನಿಷ್ಠ ರೂ. 1.5 ಲಕ್ಷ ಆದಾಯ ಗಳಿಸಬಹುದಾಗಿದೆ. ಅದೇ ಸಾಮಾನ್ಯ ಕೃಷಿ ರಸಗೊಬ್ಬರ, ಕೀಟನಾಶಕ ಮುಂತಾದ ಖರ್ಚು ವೆಚ್ಚಗಳನ್ನು ಕಳೆದು 30 ರಿಂದ 40 ಸಾವಿರ ಆದಾಯ ಗಳಿಸಲು ಹೆಣಗಾಡಬೇಕಾಗುತ್ತದೆ’ ಎನ್ನುತ್ತಾರೆ ಅಶೋಕ.

12 ಎಕರೆ ಹೊಲದಲ್ಲಿ  ಕುಟುಂಬಕ್ಕೆ ಬೇಕಾಗುವ ಎಲ್ಲಾ ಆಹಾರಧಾನ್ಯ ಮತ್ತು ಮಸಾಲೆ ಪದಾರ್ಥ, ಹಣ್ಣಿನ ಗಿಡಗಳನ್ನು ಅವರು ಬೆಳೆಯುತ್ತಾರೆ. ವಿಶೇಷವೆಂದರೆ ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳ ಬೀಜಗಳನ್ನೇ ಆಯ್ದು ಸಂಗ್ರಹಿಸಿಟ್ಟು, ಅವುಗಳನ್ನೇ ನಾಟಿಗೆ ಬಳಸುತ್ತಾರೆ.ಅಶೋಕ ಧುಮಾಳ ಸಾವಯವ ಕೃಷಿ ಪ್ರಚಾರಕರೂ ಆಗಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆ ಇವರು ಸಾವಯವ ಕೃಷಿ ಕುರಿತು ಉಪನ್ಯಾಸಗಳನ್ನೂ ನೀಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ 2007 ರಲ್ಲಿ ಕೃಷಿ ಇಲಾಖೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದೆ. ಕೆಂಗೇರಿ ಮುರಗೋಡ ಮಠವು ‘ಕೃಷಿಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಮೇಲಾಗಿ ರಾಜ್ಯ ಸರಕಾರ 2010ನೇ ಸಾಲಿನ ‘ಕೃಷಿ ಪಂಡಿತ’ ಪುರಸ್ಕಾರವನ್ನು ಧುಮಾಳ ಅವರಿಗೆ ಪ್ರಕಟಿಸಿದೆ.ರಸಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂಬ ಭ್ರಮೆಯಲ್ಲಿರುವ ರೈತರ ಕೃಷಿ ಮನುಕುಲಕ್ಕೆ ಮಾರಕವೇ ಸರಿ. ಭೂಮಿಯ ಫಲವತ್ತತೆ ಹಾಳಾಗಿ ಮುಂದೊಂದು ದಿನ ಆಹಾರಕ್ಕಾಗಿ ಹಾಹಾಕಾರ ಉಂಟಾಗಬಹುದು. ಈಗಲೇ ಎಚ್ಚೆತ್ತುಕೊಂಡು ಪ್ರತಿಯೊಬ್ಬರೂ ಅಶೋಕ ಧುಮಾಳ ಅವರಂತೆ ಸಾವಯವ ಕೃಷಿಗೆ ಜೈ ಎನ್ನುವುದು ಉತ್ತಮವಲ್ಲವೇ?  ಮಾಹಿತಿಗಾಗಿ: ಅಶೋಕ ಧುಮಾಳ: ಮೊ: 9886286584 ಸಂಪರ್ಕಿಸಬಹುದಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.