ಶನಿವಾರ, ಮೇ 15, 2021
25 °C
ಚಳ್ಳಕೆರೆ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಸಿ. ಶಿವಲಿಂಗಪ್ಪ ಅಭಿಮತ

`ಸಾಹಿತಿಗಳಿಗೆ ರಾಜಕೀಯ ಆಸೆ ಸಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: `ಸಾಹಿತಿಗಳಿಗೆ ರಾಜಕೀಯ ಪ್ರಜ್ಞೆ ಇರಬೇಕು. ಆದರೆ, ರಾಜಕೀಯ ಆಸೆ ಇರಬಾರದು' ಎಂದು ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಂಡಾಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಅವರು ಮಾತನಾಡಿದರು.ಚಳ್ಳಕೆರೆ ತಾಲ್ಲೂಕಿನ ತಳಕು ಮತ್ತು ಬೆಳಗೆರೆ ಮನೆತನಗಳ ಸಾಹಿತ್ಯಿಕ ಕೊಡುಗೆ ಅಪಾರವಾದುದು. ಇದರ ಜತೆಗೆ ವಿಶಿಷ್ಟ ಆಚರಣೆಗಳ ಮೂಲಕ ನೆಲಮೂಲ ಸಾಂಸ್ಕೃತಿಕ ಪರಂಪರೆಗಳನ್ನು ಮುಂದುವರಿಸುತ್ತಾ ಬಂದಿರುವ ಕಾಡಗೊಲ್ಲ ಮತ್ತು ಮ್ಯಾಸಬೇಡರ ಸಾಂಸ್ಕೃತಿಕ ಶ್ರೀಮಂತಿಕೆ ತಾಲ್ಲೂಕಿನ ಹೆಗ್ಗಳಿಕೆಗೆ ಸಾಕ್ಷಿ ಆಗಿದೆ ಎಂದರು.ಹಿಂದುಳಿದ, ದಲಿತ, ಅಲೆಮಾರಿ ಸಮುದಾಯಗಳ ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಆ ಮೂಲಕ ಮುಂದಿನ ಹಾದಿಯನ್ನು ರೂಪಿಸಿಕೊಳ್ಳಬೇಕಿದೆ. ಕುದಾಪುರ, ದೊಡ್ಡಉಳ್ಳಾರ್ತಿ ಹತ್ತಿರದ ಅಮೃತ ಮಹಲ್ ಕಾವಲ್‌ನಲ್ಲಿ ಸ್ಥಾಪನೆ ಆಗುತ್ತಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಬೇಕು.ಗಡಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕಿದೆ. ರಾಣೀಕೆರೆ ಫೀಡರ್ ಚಾನೆಲ್ ದುರಸ್ತಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಈಗಿರುವ ಮೊರಾರ್ಜಿ ದೇಸಾಯಿ ಶಾಲಾ ಸಮುಚ್ಛಯವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಹೇಳಿದರು.ದಲಿತ ಸಮುದಾಯದ ಅಭಿವೃದ್ದಿಗಾಗಿ ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಾವರಿಗೆ ಆದ್ಯತೆ ನೀಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನ, ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕು ಎಂದು ವೇದಿಕೆಯಲ್ಲಿ ಇದ್ದ ಶಾಸಕ ಟಿ. ರಘುಮೂರ್ತಿ ಅವರಿಗೆ ಮನವಿ ಮಾಡಿದರು.  ಶಾಸಕ ರಘುಮೂರ್ತಿ ಮಾತನಾಡಿ, ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡಲು ಪ್ರಯತ್ನಿಸಲಾಗುವುದು. ರಾಣೀಕೆರೆಗೆ ಶಿಡ್ಲಯ್ಯನ ಕೋಟೆಯಿಂದ ನೀರು ತರಲು ಈಗಾಗಲೇ ಸರ್ಕಾರದ ಮಟ್ಟದಲ್ಲಿ ರೂ 16ಕೋಟಿ ಹಣ ಬಿಡುಗಡೆ ಆಗಿದೆ. ಬೆಂಗಳೂರು ರಸ್ತೆಯಲ್ಲಿ ಸರ್ಕಾರಿ ಬಸ್ ನಿಲ್ದಾಣ ಕಾರ್ಯಕ್ಕೆ ಇನ್ನು 2 ತಿಂಗಳ ಒಳಗಾಗಿ ಚಾಲನೆ ನೀಡಲಾಗುವುದು ಎಂದರು.ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಪ್ರಸ್ತುತ ಜನಪದ  ಸಾಹಿತ್ಯ ಅವಸಾನದ ಅಂಚಿನಲ್ಲಿ ಇದೆ. ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಇಂತಹ ಸಾಹಿತ್ಯವನ್ನು ದಾಖಲು ಮಾಡಲು ಮುಂದೆ ಬರಬೇಕು. ನಾಡಿನ ಸಾಹಿತ್ಯ ಚರಿತ್ರೆಯಲ್ಲಿ ಚಳ್ಳಕೆರೆಗೆ ವಿಶಿಷ್ಟ ಸ್ಥಾನ ಇದೆ. ಇಲ್ಲಿ ಜನಿಸಿದ ತ.ರಾ.ಸು, ವೆಂಕಣ್ಣಯ್ಯ, ತ.ಸು. ಶಾಮರಾಯರು, ಬೆಳಗೆರೆ ಜಾನಕಮ್ಮ, ಕೃಷ್ಣಶಾಸ್ತ್ರಿ ನೀಡಿ ಹೋದ ಸಾಹಿತ್ಯ ಕೊಡುಗೆ ತಾಲ್ಲೂಕಿಗೆ ಕೀರ್ತಿ ತಂದಿದೆ ಎಂದು ಬಣ್ಣಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿದರು.ತಾ.ಪಂ. ಅಧ್ಯಕ್ಷ ಚಿದಾನಂದಪ್ಪ, ವಾಣಿಜ್ಯೋದ್ಯಮಿ ಬಿ.ಕೆ. ರಾಜಶೇಖರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವೀರಭದ್ರಪ್ಪ, ತಹಶೀಲ್ದಾರ್ ಎಚ್.ವಿ. ವಿಜಯರಾಜು, ಎಪಿಎಂಸಿ ಅಧ್ಯಕ್ಷ ರಾಂಬಾಬು, ಜಿ.ಪಂ. ಸದಸ್ಯೆ ಸಣ್ಣ ತಿಮ್ಮಕ್ಕ, ಎಚ್. ರಾಮಚಂದ್ರಪ್ಪ, ನೇರಲಗುಂಟೆ ರಾಮಪ್ಪ, ಬಸವರಾಜು. ನಂದನ ಶಿವ, ಟಿ.ಜೆ. ವೆಂಕಟೇಶ್, ಎನ್. ಸತೀಶ್ ಬಾಬು, ಹುರಳಿ ಬಸವರಾಜ್  ಇದ್ದರು

ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಅಧ್ಯಕ್ಷ ಪಿ. ಜಗದೀಶ್ ಸ್ವಾಗತಿಸಿದರು.  ಎಚ್.ವಿ. ಕೃಷ್ಣಮೂರ್ತಿ ನಿರೂಪಿಸಿದರು. ಶಿಕ್ಷಕ ಎಚ್. ಮಂಜುನಾಥ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.