ಬುಧವಾರ, ಏಪ್ರಿಲ್ 14, 2021
31 °C

ಸಾಹಿತ್ಯಾಧಾರಿತ ಚಿತ್ರಗಳು ನಿರ್ಮಾಣವಾಗಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತ್ಯಾಧಾರಿತ ಚಿತ್ರಗಳು ನಿರ್ಮಾಣವಾಗಬೇಕಿದೆ

ಬೆಂಗಳೂರು: ‘ಸವಕಲು ಕಥಾಹಂದರವುಳ್ಳ ಸಿನಿಮಾಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯಾಧಾರಿತ ಸದಭಿರುಚಿ ಚಿತ್ರಗಳು ನಿರ್ಮಾಣವಾಗಬೇಕಿದೆ’ ಎಂದು ಹಿರಿಯ ನಟ ರಾಜೇಶ್ ಅಭಿಪ್ರಾಯಪಟ್ಟರು.ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಕನ್ನಡ ಚಿತ್ರರಂಗವು 50 ಮತ್ತು 60ರ ದಶಕದಲ್ಲಿ ಕನ್ನಡ ಸಾಹಿತ್ಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿತ್ತು. ಹಾಗಾಗಿ ಅತ್ಯುತ್ತಮ ಚಿತ್ರಗಳು ತೆರೆಕಂಡವು.

ಆ ದಿನದ ಸಿನಿಮಾಗಳಲ್ಲಿ ಕಾದಂಬರಿ ಗಳ ಕಥಾಹಂದರವು ಮಿಳಿತ ಗೊಂಡಿದ್ದರಿಂದ ಯಶಸ್ವಿಯಾದವು’ ಎಂದರು.‘ಚಿಕ್ಕಂದಿನಿಂದಲೇ ನಾಟಕದ ಗೀಳು ಬಹುವಾಗಿ ಕಾಡುತ್ತಿತ್ತು. ಇದರಿಂದ ಸ್ಫೂರ್ತಿ ಪಡೆದು ‘ಶಕ್ತಿ ನಾಟಕ ಮಂಡಳಿ’ ಸ್ಥಾಪಿಸಿದೆ. ನಂತರ ದಿನಗಳಲ್ಲಿ ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ತಮ್ಮ ‘ವೀರಸಂಕಲ್ಪ’ ಚಿತ್ರದಲ್ಲಿ ಅವಕಾಶ ನೀಡಿದರು’ ಎಂದು ತಿಳಿಸಿದರು.‘ರಾಜಕೀಯದಲ್ಲಿರುವಂತೆ ಚಿತ್ರರಂಗದಲ್ಲೂ ಏಳಿಗೆಯನ್ನು ಸಹಿಸದವರಿಂದ ಆರಂಭದ ದಿನಗಳಲ್ಲೇ ನೋವನ್ನು ಅನುಭವಿಸಿದೆ. ಆ ಕಾರಣಕ್ಕಾಗಿ ಚಿತ್ರರಂಗದಿಂದ 2 ವರ್ಷ ಕಾಲ ದೂರ ಉಳಿದೆ. ಆಗ ಗುರುಗಳಾಗಿ ನಿರ್ದೇಶಕರಾದ ಬಿ.ಎಸ್.ನಾರಾಯಣ್ ಮತ್ತು ಸಿ.ವಿ.ಶಿವಶಂಕರ್ ನನಗೆ ಮಾರ್ಗದರ್ಶನ ನೀಡಿದರು. ‘ನಮ್ಮ ಊರು ‘ ಚಿತ್ರದಲ್ಲಿ ಅವಕಾಶ ನೀಡಿದರು’ ಎಂದು ಗತಕಾಲದ ದಿನಗಳನ್ನು ಸ್ಮರಿಸಿಕೊಂಡರು.‘ನಮ್ಮ ಊರು’ ಚಿತ್ರದ ಅಭೂತಪೂರ್ವ ಯಶಸ್ಸಿನಿಂದಾಗಿ ತಮಿಳು ಚಿತ್ರೋದ್ಯಮಲ್ಲಿ ಹಲವು ಅವಕಾಶಗಳು ಬೆನ್ನತ್ತಿ ಬಂದವು. ನಟ ಶಿವಾಜಿ ಗಣೇಶನ್‌ಗೆ ಪರ್ಯಾಯ ನಾಯಕನಾಗಿ ನಟಿಸುವಂತೆ ನಿರ್ದೇಶಕ ವೆಳ್ಳಂಪಳ್ಳಿ ಸೋಮನಾಥ್ ಆಹ್ವಾನವಿತ್ತರು. ಆದರೆ ಈ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಅಭಿನಯದಲ್ಲಿ ವ್ಯಕ್ತಪಡಿಸುವ ಅಭಿಲಾಷೆ ಹೊಂದಿದ್ದರಿಂದ ಎಲ್ಲಾ ಅವಕಾಶಗಳನ್ನು ನಯವಾಗಿ ತಿರಸ್ಕರಿಸಿದೆ’ ಎಂದು ತಿಳಿಸಿದರು.‘ನಿರ್ಮಾಪಕರು ಸಬ್ಸಿಡಿಗಾಗಿ ಚಿತ್ರ ನಿರ್ಮಿಸುತ್ತಿದ್ದಾರೆ. ಈ ದಿಸೆಯಲ್ಲಿ ಪಾತ್ರಗಳ ಆಯ್ಕೆಯಲ್ಲಿ ಆದಷ್ಟು ಜಾಗ್ರತೆ ವಹಿಸು’ ಎಂದು ಸಾಹಿತಿ ತ.ರಾ.ಸು ಅವರ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದೆ. ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾದೆ’ ಎಂದರು.‘ಭಾವ ಶುದ್ದಿ ಮತ್ತು ಭಾಷಾ ಶುದ್ದಿ ಗೊತ್ತಿಲ್ಲದ ಯುವಕರು ನಾಯಕರಾಗುತ್ತಿರುವುದು ವಿಪರ್ಯಾಸ. ಪಾತ್ರದ ಪರಕಾಯ ಪ್ರವೇಶ ಮಾಡದ ಹೊರತು ನಟನೆ ಕರಗತವಾಗುವುದಿಲ್ಲ. ಆ ದಿನಗಳಲ್ಲಿ ನಟರಲ್ಲಿ ಪ್ರತಿಭೆಯಿತ್ತು. ಆದರೆ ದುಡ್ಡಿರಲಿಲ್ಲ’ ಎಂದು ಹೇಳಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.