ಶನಿವಾರ, ಮೇ 15, 2021
25 °C

ಸಿಎಂ ಮನವಿಗೆ ಸ್ಪಂದಿಸದ ಪಿಯು ಉಪನ್ಯಾಸಕರು:ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರ ಕೈಬಿಡುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾಡಿರುವ ಮನವಿಯನ್ನು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ತಿರಸ್ಕರಿಸಿದ್ದು, ಬೇಡಿಕೆ ಈಡೇರುವವರೆಗೂ ಮೌಲ್ಯಮಾಪನಕ್ಕೆ ಹಾಜರಾಗುವುದಿಲ್ಲ ಎಂದು ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇತನ ತಾರತಮ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಇದೇ 19ರಂದು ಸಭೆ ಕರೆಯಲಾಗಿದ್ದು, ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರ ಕೈಬಿಡಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.ಆದರೆ ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸದ ಉಪನ್ಯಾಸಕರು, ವೇತನ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇಷ್ಟಾದರೂ ಸರ್ಕಾರ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ಬೇಡಿಕೆ ಈಡೇರುವವರೆಗೂ ಬಹಿಷ್ಕಾರ ಮುಂದುವರಿಯಲಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.ಈಚೆಗಷ್ಟೇ ಅಧಿಕಾರಿಗಳ ವೇತನ ಸಮಿತಿ ಶಿಫಾರಸಿನಂತೆ ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಕನಿಷ್ಠ 3ರಿಂದ 5 ಸಾವಿರ ರೂಪಾಯಿ ಜಾಸ್ತಿಯಾಗಿದೆ. ಹೊರ ರಾಜ್ಯಗಳಿಗಿಂತಲೂ ಹೆಚ್ಚಿನ ಸಂಬಳ ನೀಡಲಾಗುತ್ತಿದೆ. ಇಷ್ಟಾದರೂ ಮೌಲ್ಯಮಾಪನ ಬಹಿಷ್ಕಾರ ಮುಂದುವರಿದರೆ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದ್ದಾರೆ.

 

ಸದಾನಂದಗೌಡ ಅವರು ಶುಕ್ರವಾರ ರಾತ್ರಿ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ್ದು, ಶನಿವಾರವೂ ಬಹಿಷ್ಕಾರ ಮುಂದುವರಿದರೆ ಉಪನ್ಯಾಸಕರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.ಗೃಹ ಕಚೇರಿ `ಕೃಷ್ಣಾ~ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸದಾನಂದಗೌಡ, `ಉಪನ್ಯಾಸಕರ ಯಾವುದೇ ಬೇಡಿಕೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿಲ್ಲ. ಅವರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ. ಉಪನ್ಯಾಸಕರು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಬಹಿಷ್ಕಾರ ಕೈಬಿಡಬೇಕು~ ಎಂದು ಮನವಿ ಮಾಡಿದರು.ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಗುರುವಾರ ನೀಡಿರುವ ಆದೇಶದ ಅನುಷ್ಠಾನ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪ್ರತಿಭಟನೆ: ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಿರುವ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಬೆಂಗಳೂರು, ಮೈಸೂರು, ಬೆಳಗಾವಿ, ದಾವಣಗೆರೆ, ಮಂಗಳೂರು ಸೇರಿದಂತೆ ವಿವಿಧ ನಗರಗಳ 37 ಕೇಂದ್ರಗಳಲ್ಲಿ ಕಳೆದ ಸೋಮವಾರ ಮೌಲ್ಯಮಾಪನ ಆರಂಭವಾಗಿತ್ತು. ಆದರೆ ಸರ್ಕಾರ ಇದೇ 8ರಂದು ನೀಡಿದ್ದ ಭರವಸೆಯಂತೆ ಗುರುವಾರದ ಒಳಗೆ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉಪನ್ಯಾಸಕರು ಮೌಲ್ಯಮಾಪನ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ.ಯಾವ ಕೇಂದ್ರದಲ್ಲೂ ಶುಕ್ರವಾರ ಮೌಲ್ಯಮಾಪನ ನಡೆದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಇದೇ 19ರ ಒಳಗೆ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ, ತಿಂಗಳ ಅಂತ್ಯದಲ್ಲಿ ಫಲಿತಾಂಶ ಪ್ರಕಟಿಸಲು ಇಲಾಖೆ ಉದ್ದೇಶಿಸಿತ್ತು. ಆದರೆ ಬಹಿಷ್ಕಾರದಿಂದಾಗಿ ಫಲಿತಾಂಶ ಪ್ರಕಟಣೆ ತಡವಾಗುವ ಸಾಧ್ಯತೆಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.