ಶುಕ್ರವಾರ, ಜೂನ್ 5, 2020
27 °C

ಸಿಡಿಯುವ ಮುನ್ನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡಿಯುವ ಮುನ್ನ...‘ಮನಸು ತಣ್ಣಗೆ ಆಗಬೇಕಾದರೆ ಹೃದಯ ಬಿಸಿ ಆಗಬೇಕು’.ಹಾಗೆಂದದ್ದು ಕೆ.ಕಲ್ಯಾಣ್. ‘ಗನ್’ ಚಿತ್ರದ ಧ್ವನಿತಟ್ಟೆ ಬಿಡುಗಡೆ ಸಮಾರಂಭ ಅವರ ಹುಟ್ಟುಹಬ್ಬಕ್ಕೂ ಸಾಕ್ಷಿಯಾಗಿತ್ತು. ಗೀತಗುಚ್ಛದ ಬಿಡುಗಡೆ ನಂತರ ಕೇಕ್ ಕತ್ತರಿಸಿದ ಕಲ್ಯಾಣ್ ಮಾತನಾಡಿದ್ದು ಭಾವನೆಗಳ ಬಿಸಿ-ಕಾವು ಕುರಿತು.‘ಗನ್’ ಹರೀಶ್ ರಾಜ್ ನಿರ್ದೇಶನದ ಎರಡನೇ ಚಿತ್ರ. ‘ಕಲಾಕಾರ್’ ಚಿತ್ರದ ನಂತರ ಸೈಲೆಂಟಾಗಿದ್ದ ಹರೀಶ್ ಕೈಯಲ್ಲಿ ಈಗ ‘ಗನ್’!. ಮುರಳಿ ಎನ್ನುವ ಗೆಳೆಯರೊಬ್ಬರು ಚಿತ್ರದ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.ಆರಂಭದಲ್ಲಿ ಹರೀಶ್ ಗೊತ್ತುಪಡಿಸಿದ ಬಜೆಟ್ ಕೋಟಿಯೊಳಗೇ ಇತ್ತು. ಸಿನಿಮಾ ಮುಗಿಯುವ ವೇಳೆಗೆ ಬಜೆಟ್ 1.8 ಕೋಟಿ ಮುಟ್ಟಿದೆ. ಇದರಿಂದ ಮುರಳಿ ಅವರಿಗೇನೂ ಬೇಸರವಾಗಿಲ್ಲ. ಸಿನಿಮಾ ಚೆನ್ನಾಗಿ ಬಂದಿರುವುದೇ ಸಮಾಧಾನ ಎನ್ನುವ ತತ್ವಜ್ಞಾನ ಅವರದ್ದು. ಸಿನಿಮಾ ಪ್ರಚಾರವನ್ನು ಈಗಾಗಲೇ ಆರಂಭಿಸಿರುವ ಅವರು, ತೆಲುಗು-ತಮಿಳು ಪತ್ರಿಕೆಗಳಲ್ಲೂ ಜಾಹಿರಾತು ನೀಡುತ್ತಾರಂತೆ.ಬಜೆಟ್ ಮಿತಿಮೀರಿರುವುದರಲ್ಲಿ ತಮ್ಮ ತಪ್ಪೇನೂ ಇಲ್ಲ ಎನ್ನುವುದು ಹರೀಶ್ ಸ್ಪಷ್ಟನೆ. ನಾಯಕಿಯರ ಡೇಟ್ಸ್‌ಗಳಲ್ಲಿ ಉಂಟಾದ ವ್ಯತ್ಯಯ ಸೇರಿದಂತೆ ಕೈಮೀರಿದ ಹಲವು ಕಾರಣಗಳಿಂದ ನಿರ್ಮಾಣ ವೆಚ್ಚ ಹೆಚ್ಚಾಗಿದೆಯಂತೆ.ನಿರ್ದೇಶನದೊಂದಿಗೆ ನಾಯಕನಾಗಿ ನಟಿಸಿರುವ ಹರೀಶ್ ರಾಜ್ ಗೀತೆಯೊಂದನ್ನು ಗುನುಗುನಿಸುತ್ತಿದ್ದರು. ‘ಎಣ್ಣೆ ಯಾರು ಕಂಡುಹಿಡಿದ್ರು..’ ಎನ್ನುವ ಯೋಗರಾಜ ಭಟ್ ಬರೆದಿರುವ ಹಾಡು ಅವರಿಗೆ ಸಖತ್ ಕಿಕ್ ಕೊಟ್ಟಿದೆ. ಈ ಗೀತೆಯ ಚಿತ್ರೀಕರಣದಲ್ಲಿ ಆನೆಯೊಂದನ್ನು ಬಳಸಿಕೊಳ್ಳಲಾಗಿದೆಯಂತೆ. ಪ್ರತ್ಯೇಕ ಗೀತೆಗಳಲ್ಲಿ ರಚನಾ ಮೌರ್ಯ ಹಾಗೂ ಕಿರಣ್ ರಾಥೋಡ್ ಕಾಣಿಸಿಕೊಂಡಿದ್ದಾರಂತೆ.ನಿಖಿತಾ ಹಾಗೂ ಮಲ್ಲಿಕಾ ಕಪೂರ್ ಚಿತ್ರದ ನಾಯಕಿಯರು. ಒಬ್ಬಾಕೆ ಕಾಲೇಜು ವಿದ್ಯಾರ್ಥಿನಿ ಮತ್ತೊಬ್ಬಳು ಕಿರುತೆರೆಯಲ್ಲಿ ಮಾತಿನಮಲ್ಲಿ. ಇಬ್ಬರ ನಡುವೆ ಹರೀಶ್ ಹುಡುಗಾಟ, ಹುಡುಕಾಟ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.