ಶನಿವಾರ, ಏಪ್ರಿಲ್ 17, 2021
32 °C

ಸಿನಿಮಾ ಗೆಳತಿಯ ನೆಚ್ಚಿಕೊಂಡವರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕ, ನಾಯಕಿಯನ್ನು ಪ್ರಚಾರಕ್ಕೆ ಕರೆತರುವ ಕಷ್ಟವನ್ನು ಮುಖದ ಮೇಲೆ ತೋರಿಸುತ್ತಾ, ಅದರ ಕುರಿತು ಏನೊಂದೂ ದೂರದೆ ಕಷ್ಟಪಟ್ಟು ಮಾತನಾಡುತ್ತಿದ್ದವರು ಮಂಡ್ಯ ನಾಗರಾಜ್. ಅವರೇ ಹಣ ಖರ್ಚು ಮಾಡಿ, ನಿರ್ದೇಶಿಸಿರುವ ‘ಒಲವಿನ ಗೆಳತಿ’ ಬಿಡುಗಡೆಗೆ ಸಿದ್ಧವಾಗಿರುವ ಸಂಗತಿಯನ್ನು ಹೇಳುವುದು ಅವರ ಉದ್ದೇಶ.ಎಂಟು ಚಿತ್ರ ನಿರ್ಮಾಣ, ನಿರ್ದೇಶನದ ದೊಡ್ಡ ಅನುಭವ ಮಂಡ್ಯ ನಾಗರಾಜ್ ಅವರಿಗಿದೆ. ಸಾಯಿಕುಮಾರ್ ಅಭಿನಯದ ರಕ್ಷಕ, ಸುರೇಶ್ ಹೆಬ್ಳೀಕರ್ ಅಭಿನಯದ ಮರ್ಡರ್, ತಾಯಿಯ ಋಣ ಚಿತ್ರಗಳು ಆ ಸಾಲಿನಲ್ಲಿವೆ. 1991ರಲ್ಲಿ ಅವರು ತೆಗೆದ ‘ನಮ್ಮೂರ ರಾಮಾಯಣ’ ಚಿತ್ರಕ್ಕೆ ಶ್ರೇಷ್ಠ ಶೈಕ್ಷಣಿಕ ಚಿತ್ರ ಎಂಬ ಪ್ರಶಸ್ತಿಯೂ ಬಂದಿದೆ. ಒರಟ ಪ್ರಶಾಂತ್ ಅವರೇ ‘ಒಲವಿನ ಗೆಳತಿ’ಯ ನಾಯಕ. ಅವರು ಊರಿನಲ್ಲಿ ಇರದ ಕಾರಣ ಸುದ್ದಿಗೋಷ್ಠಿಗೆ ಬಂದಿರಲಿಲ್ಲ. ನಾಯಕಿ ಜ್ಯೋತಿ ಸಿರಿ ತಮಿಳಿನಲ್ಲಿ ಅವಕಾಶ ಸಿಕ್ಕಿರುವ ಕಾರಣ ಅಲ್ಲಿನ ವಿಮಾನ ಹತ್ತಿ ಹೋಗಿದ್ದರು.ಮೈಸೂರು, ಶ್ರೀರಂಗಪಟ್ಟಣ ಮೊದಲಾದ ತಾವು ಬಲ್ಲ ಪ್ರದೇಶಗಳಲ್ಲೇ ನಾಗರಾಜ್ 25 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. 60 ಲಕ್ಷ ರೂಪಾಯಿ ಬಜೆಟ್ಟಿನ ತಮ್ಮ ಚಿತ್ರದಿಂದ ಎಷ್ಟು ಹಣ ಬಂದೀತೋ ಎಂಬ ಆತಂಕ ಅವರಿಗೂ ಇದೆ. ಈ ಚಿತ್ರ ಮುಗಿಸಲು ಒಂದಿಷ್ಟು ಸಾಲ ಕೂಡ ಮಾಡಿಕೊಂಡಿದ್ದಾರೆ. ಚಿತ್ರ ಬಿಡುಗಡೆ ಮಾಡಲು ಇನ್ನೂ 15 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇದೆ.ಪ್ಯಾಟೆಯಿಂದ ನಾಯಕಿ ಹಳ್ಳಿಗೆ ಬರುತ್ತಾಳೆ. ಪ್ಯಾಟೆ ಹುಡುಗನೊಬ್ಬ ಮೊದಲೇ ಅವಳನ್ನು ಇಷ್ಟಪಟ್ಟಿದ್ದರೂ, ಅದು ಆಕೆಗೆ ಗೊತ್ತಿರುವುದಿಲ್ಲ. ಹಳ್ಳಿಯಲ್ಲಿ ಪ್ರಶಾಂತ್ ಜೊತೆ ಅವಳ ಪ್ರೀತಿ ಶುರುವಾಗುತ್ತದೆ. ಕೊನೆಗೆ ಪ್ರಶಾಂತ್ ಕೈಕೊಡುತ್ತಾನೆ. ಆ ಪಟ್ಟಣಪ್ರೇಮಿ ಕೈಹಿಡಿಯುತ್ತಾನೆ. ಪಟ್ಟಣ ಪ್ರೇಮಿಯ ಪಾತ್ರದಲ್ಲಿ ನವೀನ್ ಕೃಷ್ಣ ಅಭಿನಯಿಸಿದ್ದಾರೆ. ಹೊನ್ನವಳ್ಳಿ ಕೃಷ್ಣ, ಶೋಭರಾಜ್, ಬುಲೆಟ್ ಪ್ರಕಾಶ್ ಮೊದಲಾದವರು ಬಣ್ಣ ಹಚ್ಚಿರುವ ಚಿತ್ರವಿದು ಎಂದು ನಾಗರಾಜ್ ಹೆಮ್ಮೆಯಿಂದ ಹೇಳಿಕೊಂಡರು.ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿರುವ ಅಪೂರ್ವ ಅವರಿಗೆ ನಿರ್ದೇಶಕರು ಪಟ್ಟ ಕಷ್ಟದ ಅರಿವಿದೆ. ಬ್ಯಾಂಕ್ ಜನಾರ್ದನ್‌ಗೆ ಜೋಡಿಯಾಗಿರುವ ತಮ್ಮ ಪಾತ್ರವೂ ಹಾಸ್ಯದ ಧಾಟಿಯಲ್ಲಿದೆ ಎಂದ ಅವರಿಗೂ ಎಲ್ಲರೂ ಪ್ರಚಾರಕ್ಕೆ ಬಂದಿದ್ದರೆ ಚೆನ್ನಾಗಿತ್ತು ಎನ್ನಿಸಿದೆ. ಸಾಹಸ ನಿರ್ದೇಶಕ ನಂಜುಂಡಿ ನಾಗರಾಜ್ ಎರಡು ಹೊಡೆದಾಟದ ದೃಶ್ಯಗಳನ್ನು ಸಂಯೋಜಿಸಿ ಕೊಟ್ಟಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಬೋರ್ ಹೊಡೆಸುವುದಿಲ್ಲ ಎಂದು ಅವರು ಸರ್ಟಿಫಿಕೇಟ್ ಕೊಟ್ಟರು.ಭಾರತೀಯ ಭೂಸೇನೆಯಲ್ಲಿ ಕೆಲಸ ಮಾಡಿರುವ ರವಿರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಡ್ಯ ನಾಗರಾಜ್ ಅವರೇ ‘ಈ ಜನ್ಮ ನಿನಗಾಗಿ’ ಎಂಬ ಚಿತ್ರದಲ್ಲಿ ರವಿರಾಜ್‌ಗೆ ಮೊದಲ ಅವಕಾಶ ನೀಡಿದ್ದರು. ಈ ಸಿನಿಮಾ ಅವರಿಗೆ ಎರಡನೇ ಛಾನ್ಸ್. ಇದರಲ್ಲಾದರೂ ಗೆಲುವು ಸಿಕ್ಕೀತೆ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿದೆ.ಖಳನಾಯಕನ ಪಾತ್ರದಲ್ಲಿ ನಟಿಸಿರುವ ಸಚ್ಚಿದಾನಂದ ಭಟ್ ಕೂಡ ನಿರ್ದೇಶಕರ ಶ್ರಮವನ್ನು ಹೊಗಳಿದರು. ‘ಈ ಜನ್ಮ ನಿನಗಾಗಿ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಅವರಿಗೆ ಈ ಚಿತ್ರ ಒಂದು ಜಿಗಿತವೇ ಸರಿ. ಕ್ರಿಕೆಟ್‌ನ ಭರಾಟೆಯೆಲ್ಲಾ ಮುಗಿದ ಮೇಲೆ ‘ಒಲವಿನ ಗೆಳತಿ’ಯನ್ನು ತೆರೆಕಾಣಿಸುವ ಯೋಚನೆಯನ್ನು ನಾಗರಾಜ್ ಮಾಡಲಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.