ಬುಧವಾರ, ಜೂನ್ 23, 2021
24 °C

ಸಿಬಿಐ ತನಿಖೆಗೆ ಎಚ್.ಡಿ.ರೇವಣ್ಣ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿರುವ ಹಲ್ಲೆ ಖಂಡನಾರ್ಹವಾಗಿದ್ದು, ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು~ ಎಂದು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.`ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ? ಎಂಬ ಅನುಮಾನ ಕಾಡುತ್ತಿದೆ. ಗುಪ್ತಚರ ಇಲಾಖೆ ಹಾಗೂ ಗೃಹ ಸಚಿವರು ಪೂರ್ವಮಾಹಿತಿ ಇದ್ದರೂ ಮೌನಕ್ಕೆ ಶರಣಾಗಿದ್ದಾರೆ. ಅಷ್ಟೇ ಅಲ್ಲ ಸರ್ಕಾರ ಈ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ನ್ಯಾಯಾಂಗ ತನಿಖೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಅದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಆದ್ದರಿಂದ ಸಿಬಿಐ ತನಿಖೆ ನಡೆಸಬೇಕು~ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.`ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಚಿತ್ರ ಮತ್ತು ವಿಡಿಯೋ ಲಭ್ಯ ಇವೆ. ನ್ಯಾಯ ಕಾಪಾಡಬೇಕಾದ ವಕೀಲರು ಅಕ್ಷರಶಃ ದಾಂದಲೆ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ನಾಲ್ಕನೇ ಆಧಾರ ಸ್ತಂಭವಾದ ಪತ್ರಿಕಾರಂಗ ಹೀಗೆ ಎಲ್ಲರಿಗೂ ಅವರದ್ದೇ ಆದ ಸ್ವಾತಂತ್ರ್ಯವಿದೆ. ಆದರೆ, ವಕೀಲರು ಹಲ್ಲೆ ಮಾಡುವ ಮೂಲಕ ಪತ್ರಕರ್ತರ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರ ಮೇಲೆ ಕ್ರಮಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.`ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು, ಸರ್ಕಾರದ ಸಾಧನೆ ಬಿಂಬಿಸಲು ಮಾಧ್ಯಮಗಳು ಬೇಕು. ಆದರೆ ಸದನದಲ್ಲಿ ನೀಲಿಚಿತ್ರ ವೀಕ್ಷಣೆ ಮಾಡಿರುವುದನ್ನು ಪ್ರಸಾರ ಮಾಡುವುದು ಬೇಡವಾಗಿದೆ. ಅಂದರೆ ಅವರಿಗೆ ಏನು ಬೇಕೋ ಅದನ್ನು ಮಾತ್ರ ಪ್ರಸಾರ ಮಾಡಬೇಕು ಎಂಬಂತಾಗಿದೆ. ಈ ಹಿನ್ನೆಲೆಯಲ್ಲೇ ಖಾಸಗಿ ಚಾನೆಲ್ ಆರಂಭಿಸುವ ಮೂಲಕ ಪತ್ರಕರ್ತರ ಹಕ್ಕುಚ್ಯುತಿಗೆ ಬಿಜೆಪಿ ಮುಂದಾಗಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಘಟನೆಯಲ್ಲಿ ವಕೀಲರಿಗೂ ಏಟು ಬಿದ್ದಿವೆ ಎಂಬ ಮಾತು ಕೇಳಿ ಬಂದಿವೆ. ಪೊಲೀಸರು, ವಕೀಲರು, ಮಾಧ್ಯಮದವರು ಯಾರೇ ಆಗಿರಲಿ, ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಕೀಲರ ಮೇಲೆ ಹಲ್ಲೆ ನಡೆದಿದ್ದರೆ ಯಾರು ಹಲ್ಲೆ ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಸತ್ತು ಹೋಗಿದ್ದು, ಎಲ್ಲಕ್ಕೂ ಜೆಡಿಎಸ್ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ~ ಎಂದು ಲೇವಡಿ ಮಾಡಿದರು.`ಬಂಧಿತ ವಕೀಲ ರಂಗನಾಥ್ ಜೆಡಿಎಸ್ ಸದಸ್ಯರೇ?~ ಎಂಬ ಪ್ರಶ್ನೆಗೆ, `ನನಗೆ ನಾಲ್ಕು ಜನ ರಂಗನಾಥರು ಗೊತ್ತಿದ್ದಾರೆ. ಬಂಧಿತ ರಂಗನಾಥ್ ಪಕ್ಷದ ಸದಸ್ಯನೋ ಅಲ್ಲವೋ ಗೊತ್ತಿಲ್ಲ. ಬೇಕಿದ್ದರೆ ಪಕ್ಷದ ರಾಜ್ಯಾಧ್ಯಕ್ಷರನ್ನು ಕೇಳಿ ಹೇಳುತ್ತೇನೆ~ ಎಂದು ನಗೆ ಚಟಾಕಿ ಹಾರಿಸಿದರು.`ಜಿ.ಪಂ. ಅಧ್ಯಕ್ಷೆ ಸುನೀತಾವೀರಪ್ಪಗೌಡ ಇದುವರೆಗೂ ರಾಜೀನಾಮೆ ಕೊಟ್ಟಿಲ್ಲ, ಹಾಗಾದರೆ ಹೈಕಮಾಂಡ್‌ಗಿಂತ ಅವರು ದೊಡ್ಡವರಾ?~ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, `ಅದಕ್ಕೆ ಜಿಲ್ಲಾಧ್ಯಕ್ಷರು ಉತ್ತರ ನೀಡುತ್ತಾರೆ. ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ~ ಎಂದಷ್ಟೇ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಸಾ.ರಾ.ಮಹೇಶ್, ಚಿಕ್ಕಮಾದು, ಉಪಮೇಯರ್ ಎಂ.ಜೆ.ರವಿಕುಮಾರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.