ಸೋಮವಾರ, ಜೂನ್ 14, 2021
27 °C

ಸಿಬಿಐ ತನಿಖೆ ಒಪ್ಪಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ನಗರದ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಮಾಧ್ಯಮದವರು ಹಾಗೂ ಪೊಲೀಸರ ಮೇಲೆ ವಕೀಲರು ಹಲ್ಲೆ ನಡೆಸಿರುವುದನ್ನು ವಿವಿಧ ಸಂಘಟನೆಗಳ ಕಾರ್ಯಕರ್ತರು ಖಂಡಿಸಿದ್ದು, ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.`ಈ ಹಿಂದೆ ಪೊಲೀಸರು ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದ ವಕೀಲರು, ಏಳು ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದರು. ಆಗ ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹಿಸಿ ವಕೀಲರ ವರ್ತನೆಯನ್ನು ಪ್ರದರ್ಶಿಸಿದ್ದರಿಂದ ಮಾಧ್ಯಮದವರ ಮೇಲೆ ಅವರು ಸೇಡಿನ ಮನೋಭಾವ ಬೆಳೆಸಿಕೊಂಡಿದ್ದಾರೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಮತ್ತೆ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ನಿರಂತರ ಸೇವಾ ಸಂಸ್ಥೆಯ ಸದಸ್ಯರು ಆಗ್ರಹಿಸಿದ್ದಾರೆ.ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಗೂಂಡಾ ವಕೀಲರನ್ನು ತಕ್ಷಣವೇ ಬಂಧಿಸಿ ಜೈಲಿಗೆ ಕಳುಹಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುತ್ತೇವೆ. ಇದು ಇಡೀ ನಾಗರಿಕ ಸಮಾಜದ ಮೇಲಾಗಿರುವ ಹಲ್ಲೆಯಾಗಿದೆ. ಈ ಹಿಂದೆ ವಕೀಲರು ರಸ್ತೆ ತಡೆ ಮಾಡಿದಾಗಲೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಈಗಲೂ ಸುಮ್ಮನಾದರೆ ಮುಂದೆ ಆಗಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ವಕೀಲರೇ ನಿರಂತರವಾಗಿ ಕಾನೂನಿಗೆ ಧಕ್ಕೆ ಉಂಟು ಮಾಡುತ್ತಿರುವುದು ಸರಿಯಲ್ಲ. ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಹಿಂಸಾತ್ಮಕ ಸಂಘರ್ಷಕ್ಕೆ ಗೃಹ ಇಲಾಖೆಯ ವೈಫಲ್ಯವೇ ಕಾರಣ. ಘಟನೆ ಬಗ್ಗೆ ನಿಸ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಇದೊಂದು ಪೂರ್ವ ನಿಯೋಜಿತ ಕೃತ್ಯ. ಸಾರ್ವಜನಿಕರಿಗೆ ರಕ್ಷಣೆ ಒದಗಿಸುವ ಪೊಲೀಸರ ಮೇಲೆ ಹಾಗೂ ಜನರ ಧ್ವನಿಯಾಗಿರುವ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವ ವಕೀಲರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ನ್ಯಾಯವಾದಿಗಳಿಗೆ ದೇಶದಲ್ಲಿ ಉತ್ತಮ ಸ್ಥಾನಮಾನವಿದೆ. ಆದರೆ ನಿರಂತರವಾಗಿ ಗೂಂಡಾಗಳ ರೀತಿ ವರ್ತಿಸುತ್ತಿರುವ ಕೆಲವು ವಕೀಲರಿಂದ ಅವರ ವೃತ್ತಿಯ ಗೌರವ ಕಳೆದು ಹೋಗುತ್ತಿದೆ ಎಂದು ಅಂಬೇಡ್ಕರ್ ಸಂಘರ್ಷ ಸಮಿತಿಯ ಕಾರ್ಯಕರ್ತರು ತಿಳಿಸಿದ್ದಾರೆ.ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ, ಅವರನ್ನು ನ್ಯಾಯಾಲಯದಲ್ಲಿ ದಿಗ್ಬಂಧನ ಮಾಡಿದ್ದ ವಕೀಲರನ್ನು ಬಂಧಿಸಬೇಕು. ಅಲ್ಲದೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಕ್ಕೆ ಕಲ್ಲಿನಿಂದ ಹೊಡೆದಿದ್ದಾರೆ. ಕೃತ್ಯದ ಹಿಂದಿರುವ ವಕೀಲರು ಜೈಲು ಸೇರಬೇಕು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಈ ಅಮಾನುಷವಾದ ಕೃತ್ಯ ನಡೆಸಿದ ವಕೀಲರನ್ನು ಶೀಘ್ರವೇ ಪತ್ತೆ ಮಾಡಿ ಗೂಂಡಾ ಕಾಯ್ದೆ ಅಡಿ ಅವರನ್ನು ಬಂಧಿಸಬೇಕು ಹಾಗೂ ಅವರ ವಕೀಲ ವೃತ್ತಿಯ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.