ಬುಧವಾರ, ಜೂನ್ 16, 2021
28 °C

ಸಿಬಿಐ ವಶಕ್ಕೆ ಮೆಹಫೂಜ್ ಅಲಿಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಸಿಬಿಐ ವಶದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ  ಸಹಚರ ಮೆಹಫೂಜ್ ಅಲಿಖಾನ್‌ನನ್ನು ಸಿಬಿಐ ವಿಶೇಷ ನ್ಯಾಯಾಲಯ ಇದೇ 12ರವರೆಗೆ ತನಿಖಾ ತಂಡದ ವಶಕ್ಕೆ ಒಪ್ಪಿಸಿ ಸೋಮವಾರ ಆದೇಶ ಹೊರಡಿಸಿದೆ. ಸಿಬಿಐ ಅಧಿಕಾರಿಗಳು ಮಧ್ಯಾಹ್ನವೇ ಆತನನ್ನು ವಶಕ್ಕೆ ಪಡೆದಿದ್ದಾರೆ.ಐದು ತಿಂಗಳಿಗೂ ಹೆಚ್ಚು ಕಾಲದಿಂದ ತಲೆಮರೆಸಿಕೊಂಡಿದ್ದ ಅಲಿಖಾನ್, ಶುಕ್ರವಾರ ಹಠಾತ್ತನೆ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರು ಆದೇಶ ಹೊರಡಿಸಿದ್ದರು. ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಉಂಟಾದ ಸಂಘರ್ಷದ ವಾತಾವರಣದಿಂದಾಗಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆಯಲು ಸಿಬಿಐ ಅಧಿಕಾರಿಗಳಿಗೆ ಅವಕಾಶವೇ ದೊರೆತಿರಲಿಲ್ಲ.ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಸಿಬಿಐ ಅಧಿಕಾರಿಗಳು, ಅಲಿಖಾನ್‌ನನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿದರು. `ಪ್ರಮುಖ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಈಗಾಗಲೇ ಸಿಬಿಐ ವಶದಲ್ಲಿದ್ದಾರೆ.

 

ಆದರೆ, ಮೊದಲನೇ ಆರೋಪಿಯ ಎಲ್ಲ ವ್ಯವಹಾರಗಳನ್ನೂ ಬಲ್ಲ ಅಲಿಖಾನ್‌ನನ್ನು ವಿಚಾರಣೆಗೆ ಒಳಪಡಿಸದೇ ಇದ್ದರೆ ತನಿಖೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಸಿಬಿಐ ವಶಕ್ಕೆ ನೀಡಬೇಕು~ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.ಸಿಬಿಐ ಬೇಡಿಕೆಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಎಂಟು ದಿನಗಳ ಕಾಲ ಆರೋಪಿಯನ್ನು ತನಿಖಾ ತಂಡದ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದರು. ತಕ್ಷಣವೇ ನ್ಯಾಯಾಲಯದ ಆದೇಶದ ಪ್ರತಿ ಪಡೆದುಕೊಂಡ ಸಿಬಿಐ ಅಧಿಕಾರಿಗಳು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ಅಲಿಖಾನ್‌ನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ಮುಂದುವರಿದ ವಿಚಾರಣೆ: ಅಲಿಖಾನ್‌ನನ್ನು ವಶಕ್ಕೆ ಪಡೆದ ಬಳಿಕ ತೀವ್ರ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಜನಾರ್ದನ ರೆಡ್ಡಿ ಅವರು ಬಹಿರಂಗಪಡಿಸಿರುವ ಕೆಲ ಸಂಗತಿಗಳನ್ನು ಖಚಿತಪಡಿಸಿಕೊಳ್ಳಲು ಆತನನ್ನು ಪ್ರಶ್ನಿಸಲಾಗಿದೆ. ಈ ಹಿಂದೆ ಸಿಬಿಐ, ಅಲಿಖಾನ್ ಮನೆಯಿಂದ ವಶಪಡಿಸಿಕೊಂಡಿದ್ದ ಎಂಟು ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ಗಳಿಂದ ಸಂಗ್ರಹಿಸಿದ ಮಾಹಿತಿಯ ಬಗ್ಗೆ ಆತನಿಂದ ಪ್ರತಿಕ್ರಿಯೆ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಜನಾರ್ದನ ರೆಡ್ಡಿ ಅವರ ವಿಚಾರಣೆ ಸೋಮವಾರವೂ ಮುಂದುವರಿದಿದೆ. ರೆಡ್ಡಿ ಅವರ ಸಹಚರರಲ್ಲಿ ಕೆಲವರನ್ನು ಸಿಬಿಐ ಕಚೇರಿಗೆ ಕರೆಸಿಕೊಂಡಿದ್ದು, ಅಕ್ರಮ ಗಣಿಗಾರಿಕೆ, ಹಣದ ವರ್ಗಾವಣೆ ಮತ್ತಿತರ ವಿಷಯಗಳ ಬಗ್ಗೆ ಪ್ರಶ್ನಿಸಲಾಗಿದೆ. ಸಿಬಿಐ ಡಿಐಜಿ ಆರ್.ಹಿತೇಂದ್ರ ನೇತೃತ್ವದ ತಂಡ ಆರೋಪಿಗಳ ವಿಚಾರಣೆಯಲ್ಲಿ ನಿರತವಾಗಿದ್ದು, ಆರೋಪಿಗಳನ್ನು ಬಳ್ಳಾರಿಗೆ ಕರೆದೊಯ್ಯುವುದಕ್ಕೆ ಸಂಬಂಧಿಸಿದಂತೆ ಗೋಪ್ಯತೆ ಕಾಯ್ದುಕೊಂಡಿದೆ.ಉನ್ನತ ಮೂಲಗಳ ಪ್ರಕಾರ, ಜನಾರ್ದನ ರೆಡ್ಡಿ ಮತ್ತು ಸಹಚರರು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಗಳಿಸಿದ ಹಣವನ್ನು ವಿದೇಶಗಳಿಗೆ ಅಕ್ರಮವಾಗಿ ವರ್ಗಾಯಿಸಿರುವ ಬಗ್ಗೆ ಅಲಿಖಾನ್‌ನನ್ನು ಸಿಬಿಐ ತೀವ್ರವಾಗಿ ಪ್ರಶ್ನಿಸುತ್ತಿದೆ. ದಾಖಲೆಗಳಲ್ಲಿ ಅದಿರಿನ ಮೌಲ್ಯ ಕಡಿಮೆ ದಾಖಲಿಸಿರುವುದು, ವಿದೇಶಿ ವಿನಿಮಯ ವರ್ಗಾವಣೆಯಲ್ಲಿ ವಂಚನೆ, ವಿದೇಶಗಳಲ್ಲಿ ಬೇನಾಮಿ ಹೂಡಿಕೆ ಮತ್ತಿತರ ಗಂಭೀರ ಆರೋಪಗಳ ಬಗ್ಗೆ ಆತನಿಂದ ಉತ್ತರ ಪಡೆಯಲು ತನಿಖಾ ತಂಡ ಸೋಮವಾರದಿಂದಲೇ ಕಾರ್ಯಪ್ರವೃತ್ತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.