ಶನಿವಾರ, ಮೇ 8, 2021
19 °C

ಸಿಯಾಚಿನ್- ಪಾಕಿಸ್ತಾನದ ಕಪಟ ನಾಟಕ

ಡಿ.ವಿ.ರಾಜಶೇಖರ Updated:

ಅಕ್ಷರ ಗಾತ್ರ : | |

ದುರಂತ ಅಥವಾ ಸೋಲು ಭವಿಷ್ಯವನ್ನು ನಿರ್ಧರಿಸುವುದೇ ಆಗಿದ್ದರೆ ಪಾಕಿಸ್ತಾನ ಎಂದೋ ಭಾರತದೊಡನೆ ಮೈತ್ರಿ ಮಾಡಿಕೊಳ್ಳುತ್ತಿತ್ತು. 1947ರ ಕಾಶ್ಮೀರ ಅತಿಕ್ರಮಣ ಪ್ರಯತ್ನದಿಂದ ಹಿಡಿದು 1999ರ ಕಾರ್ಗಿಲ್ ಯುದ್ಧದವರೆಗೆ ಭಾರತದ ಜೊತೆ ನಡೆಸಿದ ಸಂಘರ್ಷಗಳು ಹಾಗೂ ದುರಂತಗಳಿಂದ ಪಾಕಿಸ್ತಾನ ಪಾಠ ಕಲಿಯುತ್ತಿತ್ತು.ಕೀಳರಿಮೆಯಿಂದ ಹುಟ್ಟಿದ ಒಣ ಜಂಬ ಮತ್ತು ಸೇಡಿನ ಮನೋಭಾವದಿಂದ ಭಾರತದ ಜೊತೆ ಪಾಕಿಸ್ತಾನ ಸಂಘರ್ಷಕ್ಕೆ ಇಳಿಯುತ್ತಲೇ ಬಂದಿದೆ. ಹೀಗಾಗಿ ಪಾಕಿಸ್ತಾನದ ಆಡಳಿತಗಾರರ ಬಗ್ಗೆ ಭಾರತಕ್ಕೆ ವಿಶ್ವಾಸವೇ ಇಲ್ಲವಾಗಿದೆ.ಈಗ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಅಸ್ಫಾಕ್ ಪರ್ವೇಜ್ ಕಯಾನಿ ಹಿಮಾಲಯದ ಕಾರಕೋರಂ ಪರ್ವತ ಶ್ರೇಣಿಯ ಭಾರತ -ಪಾಕಿಸ್ತಾನ ನಡುವಣ ಅಂತರರಾಷ್ಟ್ರೀಯ ನಿಯಂತ್ರಣ ರೇಖೆಯ ಉತ್ತರಕ್ಕಿರುವ ಸಿಯಾಚಿನ್ ಹಿಮರಾಶಿ ಪ್ರದೇಶವನ್ನು ಮಿಲಿಟರಿಯಿಂದ ಮುಕ್ತಗೊಳಿಸಬೇಕೆಂದು ಮಾಡಿರುವ ಸಲಹೆ ಅನುಮಾನಕ್ಕೆ ಎಡೆಕೊಟ್ಟಿದೆ.  ಈ ಸಲಹೆಗೆ ದುರಂತದ ಹಿನ್ನೆಲೆ ಇದೆ. ಸಿಯಾಚಿನ್ ಪ್ರದೇಶದ ಗಿಯಾರಿ ಮಿಲಿಟರಿ ಶಿಬಿರ ಇದೇ ತಿಂಗಳ ಏಳರಂದು ಹಿಮಪಾತಕ್ಕೆ ಸಿಕ್ಕಿ 135ಕ್ಕೂ ಹೆಚ್ಚು ಪಾಕ್ ಸೈನಿಕರು ಮತ್ತು 11 ನಾಗರಿಕರು ಸತ್ತ  ಹಿನ್ನೆಲೆಯಲ್ಲಿ ಕಯಾನಿ ಈ ಸಲಹೆ ಮಾಡಿದ್ದಾರೆ. ಆ ಪ್ರದೇಶವನ್ನು ಎರಡೂ ದೇಶಗಳು ಮಿಲಿಟರಿಯಿಂದ ಮುಕ್ತಗೊಳಿಸುವುದು ಒಳ್ಳೆಯದೇ. ಸಮುದ್ರ ಮಟ್ಟದಿಂದ 22 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮ ಪ್ರದೇಶವನ್ನು ಹಗಲು ರಾತ್ರಿ ಕಾಯುವುದು ಯಾರಿಗೂ ಬೇಡವಾದ ಕೆಲಸ. ಎರಡೂ ದೇಶಗಳು ಅದಕ್ಕಾಗಿ ಅಪಾರ ಸಂಪನ್ಮೂಲವನ್ನು ವೆಚ್ಚಮಾಡುತ್ತಿವೆ. ಸಿಯಾಚಿನ್ ಹಿಮರಾಶಿ ಪ್ರದೇಶದಲ್ಲಿ ಉಷ್ಣಾಂಶ ಮೈನಸ್ 60 ರಿಂದ 80 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಎರಡೂ ದೇಶಗಳ ನೂರಾರು ಸೈನಿಕರು ಇಂತಹ ವಾತಾವರಣದಲ್ಲಿ ಬದುಕು ಸಾವಿನ ನಡುವೆ ಹೋರಾಡುತ್ತ ಕಾವಲು ಕಾಯಬೇಕಾಗುತ್ತದೆ. ಸಾವಿರಾರು ಯೋಧರು ಶೀತದಿಂದ ಸತ್ತಿದ್ದಾರೆ. ಇದೆಲ್ಲಾ ಏಕೆ ಬೇಕು? ಮೂರು ದಶಕಗಳ ಹಿಂದೆ ಹಿಮಾಲಯದ ಪರ್ವತ ಶ್ರೇಣಿಯಲ್ಲಿರುವ ಲಡಾಕ್‌ನ ಲೆಹ್‌ನಲ್ಲಿ ಭಾರತದ ವಾಯುಪಡೆ ತನ್ನ ನೆಲೆ ಆರಂಭಿಸಿದ ಸಂದರ್ಭವನ್ನು ವರದಿ ಮಾಡಲು ದೆಹಲಿಯಿಂದ ಕೆಲವು ಪತ್ರಕರ್ತರು ಹೋಗಿದ್ದರು. ಆ ತಂಡದಲ್ಲಿ ನಾನೂ ಇದ್ದೆ. ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿರುವ ಲೆಹ್‌ನಲ್ಲಿ (ಸಿಯಾಚಿನ್‌ನಲ್ಲಿರುವ ಯೋಧರಿಗೆ ಆಹಾರ ಸಾಮಗ್ರಿ ಒದಗಿಸುವ ಒಂದು ನೆಲೆ) ಯಾವ ಸಂದರ್ಭದಲ್ಲಿ ಎಂಥ ಹವಾಮಾನ ಇರುತ್ತದೆ ಎನ್ನುವುದನ್ನು ಊಹಿಸಲಸಾಧ್ಯ. ನಾವು ಅಲ್ಲಿದ್ದಾಗ ಹಿಮಪಾತವಾಗಿ ಅಲ್ಲಿಯೇ ಉಳಿಯಬೇಕಾಗಿ ಬಂತು. ಸಾಮಾನ್ಯ ಚಳಿಯನ್ನೇ ತಡೆದುಕೊಳ್ಳಲಾರದ ನಾವು ಮೈನಸ್ ಹತ್ತು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇರಬೇಕಾಯಿತು. ಇಡೀ ದೇಹ ಜಡ್ಡುಕಟ್ಟಿತ್ತು. ಜೀವ ಇದೆಯೋ ಇಲ್ಲವೋ ಅರಿವಿಗೆ ಬಾರದಂತಹ ಸ್ಥಿತಿ. 11 ಸಾವಿರ ಅಡಿ ಎತ್ತರದಲ್ಲಿ ಮತ್ತು ಮೈನಸ್ 10 ಡಿಗ್ರಿ ಸೆಲ್ಸಿಯಸ್‌ನಲ್ಲಿ ಈ ಸ್ಥಿತಿಯಾದರೆ ಇನ್ನು 22 ಸಾವಿರ ಅಡಿ ಎತ್ತರದಲ್ಲಿ ಮೈನಸ್ 60 ರಿಂದ 80 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವ ಸಿಯಾಚಿನ್‌ನಲ್ಲಿ ಎಂಥ ಕ್ಲಿಷ್ಟ ಪರಿಸ್ಥಿತಿ ಇರುತ್ತದೆ ಎನ್ನುವುದನ್ನು ಊಹಿಸಿಕೊಳ್ಳಿ. ಇಂಥ ಪರಿಸ್ಥಿತಿಯಲ್ಲಿ ಎರಡೂ ದೇಶಗಳು ಯೋಧರು ಬದುಕಲು ಹೋರಾಡುತ್ತಾ ಏಕೆ ಇರಬೇಕಾಗಿದೆ ಮತ್ತು ಇದಕ್ಕೆ ಮೂಲ ಕಾರಣ ಯಾರು ಎನ್ನುವುದನ್ನು ಕಯಾನಿ ಅವರು ಇತಿಹಾಸದಿಂದ ತಿಳಿದುಕೊಳ್ಳಬೇಕಾಗುತ್ತದೆ. ಅಥವಾ ತಿಳಿದೇ ಭಾರತವನ್ನು ಪರೀಕ್ಷಿಸಲು ಅವರು ಹೀಗೆ ಹೇಳಿರಬಹುದು. ಸಿಯಾಚಿನ್ ಸಮಸ್ಯೆ ಹೊಸದಲ್ಲ. ಕಾಶ್ಮೀರ ವಿವಾದದ ಭಾಗವಾಗಿ ಪಾಕಿಸ್ತಾನ ಆ ಸಮಸ್ಯೆಯನ್ನು ಉಭಯ ದೇಶಗಳ ಮಾತುಕತೆಗಳಲ್ಲಿ ಪ್ರಸ್ತಾಪಿಸುತ್ತ ಬಂದಿದೆ. ಇತ್ತೀಚೆಗೆ ಅಸಿಫ್ ಅಲಿ ಜರ್ದಾರಿ ಅವರು ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆ ನಡೆಸಿದ ಚರ್ಚೆಯಲ್ಲಿಯೂ ಸಿಯಾಚಿನ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈಗ ಕಯಾನಿ ನಿರ್ದಿಷ್ಟ ಸಂದರ್ಭದ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಉದ್ದೇಶ ಏನಿರಬಹುದು?  ಪಾಕ್ ಮಿಲಿಟರಿ, ಐಎಸ್‌ಐ ಅಷ್ಟೇ ಏಕೆ ಪಾಕ್ ಪ್ರಚೋದಿತ ಉಗ್ರವಾದಿಗಳು ಈಗ ಆಫ್ಘಾನಿಸ್ತಾನದ ಕಡೆ ಹೆಚ್ಚು ಗಮನಕೊಟ್ಟಿದ್ದಾರೆ. ಅಮೆರಿಕದ ಸೇನೆ ಅಲ್ಲಿಂದ ವಾಪಸಾಗುವ ವೇಳೆಗೆ (2014) ಆಫ್ಘಾನಿಸ್ತಾನವನ್ನು ತನ್ನ ಕೈಗೊಂಬೆ ಮಾಡಿಕೊಳ್ಳುವ ಸಂಚು ಪಾಕಿಸ್ತಾನದ್ದು. ಇಂಥ ಸಂದರ್ಭದಲ್ಲಿ ಭಾರತಕ್ಕೆ ಸಂಬಂಧಿಸಿದ ವಿವಾದಗಳು ಅಲ್ಲಿಯವರೆಗಾದರೂ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಪಾಕ್ ಮಿಲಿಟರಿಯ ಲೆಕ್ಕಾಚಾರ ಇರಬಹುದು. ಈ ಹಿನ್ನೆಲೆಯಲ್ಲಿ ನೋಡಿದರೆ ಕಯಾನಿ ಸಲಹೆ ಪ್ರಾಮಾಣಿಕವಾದುದು ಅನ್ನಿಸುವುದಿಲ್ಲ. ಅವರು ಸಿಯಾಚಿನ್ ವಿಷಯ ಪ್ರಸ್ತಾಪಿಸಿದ ಒಂದೇ ದಿನದಲ್ಲಿ ವಿದೇಶಾಂಗ ಖಾತೆ ಅವರ ಹೇಳಿಕೆಗೆ ವಿರುದ್ಧವಾದ ಹೇಳಿಕೆ ನೀಡಿದೆ.ಸಿಯಾಚಿನ್‌ನ ಒಂದು ಅಂಗಲವನ್ನೂ ಬಿಟ್ಟುಕೊಡುವುದಿಲ್ಲ ಮತ್ತು ಅಲ್ಲಿಂದ ಮಿಲಿಟರಿಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಒಳಾಡಳಿತ ಖಾತೆ ಸಚಿವ ರಹಮಾನ್ ಮಲ್ಲಿಕ್ ಹೇಳಿದ್ದಾರೆ. ಇದೊಂದು ಕಪಟ ನಾಟಕ ಎನ್ನುವುದಕ್ಕೆ ಈ ವಿರೋಧಾಭಾಸದ ಹೇಳಿಕೆಗಳೇ ಸಾಕ್ಷಿ.ಪಾಕಿಸ್ತಾನದ ಸಲಹೆ ಉತ್ತಮವಾದದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆ ನೋಡಿದರೆ ಭಾರತ ಮೊದಲು ಅದೇ ಅಭಿಪ್ರಾಯ ಹೊಂದಿತ್ತು. ಆದರೆ ಪಾಕಿಸ್ತಾನ ಹಲವು ಬಾರಿ ಸಿಯಾಚಿನ್ ವಿಚಾರದಲ್ಲಿ ಆಕ್ರಮಣಕಾರಿ ಧೋರಣೆ ತಳೆದಿದ್ದರಿಂದ  ಅದನ್ನು ರಕ್ಷಿಸಲು ಅನಿವಾರ್ಯವಾಗಿ ಮಿಲಿಟರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ಬಂತು.ಸಿಯಾಚಿನ್ ಇತಿಹಾಸವನ್ನೇ ನೋಡಿ. ದೇಶ ವಿಭಜನೆ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಗಡಿ ಒಪ್ಪಂದವಾಗಿದೆ. ಆಗ ಈ ಸಿಯಾಚಿನ್ ಪ್ರದೇಶವನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಆ ಪ್ರದೇಶ ಯಾವ ದೇಶಕ್ಕೂ ಬೇಕು ಅನ್ನಿಸಲಿಲ್ಲ. 1972ರ ಶಿಮ್ಲೋ ಒಪ್ಪಂದದಲ್ಲೂ ಈ ಸಿಯಾಚಿನ್ ಪ್ರಸ್ತಾಪ ಇಲ್ಲ. ಅಂತರರಾಷ್ಟ್ರೀಯ ಗಡಿ ರೇಖೆ ಕೆ-2 (ಕಾರಕೋರಂ ಪರ್ವತ ಶ್ರೇಣಿ-2) ಎನ್‌ಜೆ 9842 ಸ್ಥಳದಿಂದ (ನಕ್ಷೆಯಲ್ಲಿರುವ ಸ್ಥಳದ ಸಂಖ್ಯೆ) ಹಿಮರಾಶಿಯ ಉತ್ತರ ದಿಕ್ಕಿಗೆ ಹೋಗುತ್ತದೆ ಎಂದಷ್ಟೇ ತಿಳಿಸಲಾಗಿದೆ. ಅಲ್ಲಿಂದ ಮುಂದೆ ಹಿಮರಾಶಿ ಸುಮಾರು 40 ಮೈಲಿ ಉದ್ದ ಚೀನಾ ಗಡಿಯವರೆಗೆ ಹರಡಿದೆ. ಈ ಹಿಮರಾಶಿ ಪ್ರಪಂಚದಲ್ಲಿಯೇ ಅತಿ ಉದ್ದವಾದುದು (17 ಕಿ.ಮೀ.). ಇಂಡಸ್ ಸೇರಿದಂತೆ ಹಲವು ನದಿಗಳಿಗೆ ಮೂಲ ಈ ಹಿಮಪ್ರದೇಶ.  1965ರಲ್ಲಿ ಪಾಕಿಸ್ತಾನ ಗಡಿಯಲ್ಲಿರುವ ಅಕ್ಸಾಯಿಚಿನ್ ಭೂಭಾಗವನ್ನು ಚೀನಾಕ್ಕೆ ಕೊಟ್ಟಾಗ ಎರಡೂ ದೇಶಗಳ ನಡುವೆ ಮನಸ್ತಾಪ ಉಂಟಾಗಿತ್ತು. ಭಾರತವನ್ನು ಎದುರಿಸುವ ದಿಸೆಯಲ್ಲಿ ಚೀನಾವನ್ನು ಬಳಸಿಕೊಳ್ಳುವ ಕುತಂತ್ರ ಪಾಕಿಸ್ತಾನದ್ದಾಗಿತ್ತು.1984ರವರೆಗೆ ಸಿಯಾಚಿನ್ ಸಂಘರ್ಷದ ವಿಷಯವಾಗಿರಲಿಲ್ಲ. ಸಿಯಾಚಿನ್ ಹಿಮರಾಶಿ ಪ್ರದೇಶಕ್ಕೆ ಪಾಕಿಸ್ತಾನದ ಸೈನಿಕರು ಆಗಿಂದಾಗ್ಗೆ ಬರುತ್ತಿರುವ ವರ್ತಮಾನ ಭಾರತದ ಮಿಲಿಟರಿಗೆ ಗೊತ್ತಿತ್ತು. 20 ಸಾವಿರ ಅಡಿಗಳಿಗೂ ಎತ್ತರದ ಹಿಮರಾಶಿಯ ಬೆಟ್ಟಗಳ ಆರೋಹಣ ಒಂದು ಸಾಹಸ. ವಿವಿಧ ದೇಶಗಳ ಪರ್ವತಾರೋಹಿಗಳ ತಂಡಗಳು 60ರ ದಶಕದಿಂದಲೂ ಸಿಯಾಚಿನ್ ಹಿಮಗಿರಿಗಳ ಆರೋಹಣ ಮಾಡುತ್ತ ಬಂದಿವೆ. ವಿಶ್ವದ ನಕ್ಷೆಯನ್ನು ಸಿದ್ಧಪಡಿಸುವ ಅಮೆರಿಕ ಮತ್ತಿತರ ದೇಶಗಳ ಸಂಸ್ಥೆಗಳು ಸಿಯಾಚಿನ್ ಪ್ರದೇಶವನ್ನು ಪಾಕಿಸ್ತಾನದ ಭಾಗವಾಗಿ ನಮೂದಿಸಿವೆ. ಹೀಗಾಗಿ ಆರೋಹಣ ತಂಡಗಳು ಪಾಕಿಸ್ತಾನದಿಂದಲೇ ಅನುಮತಿ ಪಡೆಯುತ್ತ ಬಂದಿವೆ. ಅವರ ಜೊತೆಯಲ್ಲಿ ಪಾಕ್ ಯೋಧರೂ ಹೋಗಿದ್ದಾರೆ. ಇದು ಭಾರತಕ್ಕೆ ಗೊತ್ತಿಲ್ಲದ ವಿಚಾರ ಅಲ್ಲ. ಎರಡೂ ದೇಶಗಳ ನಡುವೆ ವೈಮನಸ್ಸು ಹೆಚ್ಚಾದ (ಎಪ್ಪತ್ತರ ದಶಕದಲ್ಲಿ) ನಂತರ ಬಹುಶಃ ಸಿಯಾಚಿನ್ ಆಕ್ರಮಿಸಿ ಭಾರತಕ್ಕೆ ಪಾಠ ಕಲಿಸಬೇಕು ಎನ್ನುವ ಆಲೋಚನೆ ಪಾಕ್ ಮಿಲಿಟರಿಗೆ ಬಂದಿರಬೇಕು. ಹೀಗಾಗಿ ಪಾಕಿಸ್ತಾನದ ಮಿಲಿಟರಿ ಸಿಯಾಚಿನ್‌ನ ಹತ್ತಿರದ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಎಪ್ಪತ್ತರ ದಶಕದ ಅಂತ್ಯದಲ್ಲಿ ಆರಂಭಿಸಿತು. ಪಾಕಿಸ್ತಾನ ಸಿಯಾಚಿನ್ ಆಕ್ರಮಿಸಿಕೊಳ್ಳುವಂಥ ಸಾಹಸಕ್ಕೆ ಇಳಿಯುತ್ತದೆ ಎಂದು ಭಾರತ ಎಂದೂ ಯೋಚಿಸಿರಲಿಲ್ಲ. 1978ರಲ್ಲಿ ಭಾರತದ ಮಿಲಿಟರಿ ತನ್ನ ಸೈನಿಕರ ತಂಡವೊಂದು ಸಿಯಾಚಿನ್ ಆರೋಹಣ ಮಾಡಿತು. ಅಲ್ಲಿ ಪಾಕಿಸ್ತಾನದ ಕಡೆಯಿಂದ ಹಲವು ತಂಡಗಳು ಬಂದು ಹೋದ ಬಗ್ಗೆ ಮಾಹಿತಿಗಳು, ಮಿಲಿಟರಿ ಅವಶೇಷಗಳು ದೊರಕಿದ್ದವು. ಭಾರತದ ಮಿಲಿಟರಿಗೆ ಅನುಮಾನಗಳು ಆರಂಭವಾದವು. ಸಿಯಾಚಿನ್ ಆಕ್ರಮಿಸಿಕೊಳ್ಳಲು ಪಾಕಿಸ್ತಾನ ಸಿದ್ಧತೆ ನಡೆಸಿದೆ ಎಂಬ ಖಚಿತ ಮಾಹಿತಿಯನ್ವಯ 1984ರ ಏಪ್ರಿಲ್ 13 ರಂದು ಭಾರತದ ಮಿಲಿಟರಿಯ ಒಂದು ತಂಡ ಸಿಯಾಚಿನ್‌ಗೆ ಬಂದು ಇಳಿಯಿತು.ಪಾಕಿಸ್ತಾನ ಸೇನೆಯ ಪ್ರತಿರೋಧದ ನಡುವೆಯೂ ಭಾರತ ಸುಮಾರು 70 ಕಿ.ಮೀ ಹಿಮರಾಶಿ ಪ್ರದೇಶವನ್ನು ಮತ್ತು ಮೂರು ಕಣಿವೆ ಪ್ರದೇಶಗಳನ್ನು ಆಕ್ರಮಿಸಿತು. ವಿಶ್ವದ ಅತಿ ಎತ್ತರದ ಹಿಮಪ್ರದೇಶದಲ್ಲಿ ನಡೆದ ಯುದ್ಧ ಇದಾಗಿದೆ. ಈ ಯುದ್ಧದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಯೋಧರು ಸತ್ತರು. ಬಹಳ ಮಂದಿ ಕೊರೆಯುವ ಹಿಮದಿಂದ ಸತ್ತಿದ್ದರು. ಈ ಯುದ್ಧದಲ್ಲಿ ಸೋತ ಪಾಕಿಸ್ತಾನ 1990, 1995, 1999ರಲ್ಲಿ ಮತ್ತೆ ಸಿಯಾಚಿನ್ ಆಕ್ರಮಿಸಿಕೊಳ್ಳಲು ಯತ್ನಿಸಿತು. ಅದರಲ್ಲಿ ಮುಖ್ಯವಾದ್ದು ಕಾರ್ಗಿಲ್ ಯುದ್ಧ. ಆಗ ಮುಷರಫ್ ಮಿಲಿಟರಿ ಮುಖ್ಯಸ್ಥ. ನವಾಜ್ ಷರೀಫ್ ಪ್ರಧಾನಿ. ಸಿಯಾಚಿನ್‌ಗೆ ಮಿಲಿಟರಿ ಮತ್ತು ಸರಕು ಸಾಗಣೆಯ ಮಾರ್ಗಮಧ್ಯದಲ್ಲಿರುವ ಪ್ರದೇಶ ಕಾರ್ಗಿಲ್. ಅದನ್ನು ಆಕ್ರಮಿಸಿದರೆ ಸಿಯಾಚಿನ್ ಸಂಪರ್ಕ ಕತ್ತರಿಸಿದಂತಾಗುತ್ತದೆ ಮತ್ತು ಭಾರತ ರಾಜಿಗೆ ಬಂದಲ್ಲಿ ಕಾರ್ಗಿಲ್ ಬಿಟ್ಟುಕೊಟ್ಟು ಸಿಯಾಚಿನ್ ಪಡೆಯಬಹುದೆಂಬುದು ಪಾಕ್ ಲೆಕ್ಕಾಚಾರವಾಗಿತ್ತು. ಈ ವಿಚಾರದಲ್ಲಿ ಭಾರತದ ಮಿಲಿಟರಿ ಗುಪ್ತಚರ ವಿಭಾಗ ವಿಫಲವಾಯಿತು. ಅತಿಕ್ರಮಣದ ಮಾಹಿತಿ ತಿಳಿಯಲು ಭಾರತಕ್ಕೆ ತಡವಾದರೂ ಸಾಹಸದಿಂದ ಪಾಕ್ ಮಿಲಿಟರಿಯನ್ನು ಹಿಂದಕ್ಕಟ್ಟುವಲ್ಲಿ ಯಶಸ್ವಿಯಾಯಿತು.ಸಿಯಾಚಿನ್ ತನ್ನದೆಂಬುದು ಪಾಕ್ ವಾದ. ದೇಶ ವಿಭಜನೆ ನಂತರ ಸಿಯಾಚಿನ್ ಹಿಮಗಿರಿಗಳನ್ನು ಹತ್ತುವ ಸಾಹಸಿಗಳೆಲ್ಲರೂ ತಮ್ಮಿಂದ ಅನುಮತಿ ಪಡೆದಿದ್ದಾರೆ. ಅಮೆರಿಕದ ರಕ್ಷಣಾ ನಕ್ಷೆ ಸಂಸ್ಥೆ, ಬ್ರಿಟಾನಿಕಾ, ನ್ಯಾಷನಲ್ ಜಿಯಾಗ್ರಫಿಕ್ ಸಂಸ್ಥೆಗಳು ತಯಾರಿಸಿದ ವಿಶ್ವದ ಪ್ರಮುಖ ಭೂಪಟಗಳೆಲ್ಲಾ ಸಿಯಾಚಿನ್ ತಮ್ಮ ದೇಶದ ಭಾಗವೆಂದೇ ನಮೂದಿಸಿವೆ. ಭಾರತ ಎಂದೂ ಅದು ತನ್ನ ಪ್ರದೇಶವೆಂದು ಹಕ್ಕು ಮಂಡಿಸಿಲ್ಲ. ಇದರಿಂದ ಸಿಯಾಚಿನ್ ತನ್ನದು ಎಂಬ ವಾದ ಪಾಕಿಸ್ತಾನದ್ದು. ಭಾರತ ಈ ವಾದವನ್ನು ಒಪ್ಪಿಲ್ಲ. ಗಡಿ ನಕ್ಷೆಯ ಪ್ರಕಾರ ಅದು ತನ್ನ ಭಾಗವೆಂದು ಹೇಳುತ್ತಿದೆ. 1984ರ ನಂತರ ಸಿಯಾಚಿನ್ ಭಾರತದ ವಶದಲ್ಲಿದೆ. ಈಗ ಸಿಯಾಚಿನ್ ಹಿಮರಾಶಿಯ ಯಾವುದೇ ಪ್ರಮುಖ ಪ್ರದೇಶ ಪಾಕ್ ವಶದಲ್ಲಿ ಇಲ್ಲ. ಅದರ ಒಂದು ಕಣಿವೆ ಪಾಕ್ ವಶದಲ್ಲಿದೆ. ಅದೂ ಸಿಯಾಚಿನ್‌ನಿಂದ 5ರಿಂದ 15 ಕಿ.ಮೀ.ದೂರದಲ್ಲಿದೆ. ತನಗೆ ಸೇರಿದ ಸುಮಾರು 2600 ಕಿ.ಮೀ. ಪ್ರದೇಶವನ್ನು ಭಾರತ ಅತಿಕ್ರಮಿಸಿದೆ ಎಂದು ಪಾಕಿಸ್ತಾನ ಹೇಳುತ್ತಿದೆ.ಪೂರ್ಣ ಸಿಯಾಚಿನ್ ಪ್ರದೇಶವನ್ನು ತನಗೆ ಕೊಡಬೇಕೆಂದು ಪಾಕಿಸ್ತಾನ ಹೇಳುತ್ತಿದೆ. ಅದು ತನ್ನದೆಂದು ಭಾರತ ಹೇಳುತ್ತಿದೆ. ಪಾಕಿಸ್ತಾನದ ಜೊತೆ ಸಿಯಾಚಿನ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ನಿವೃತ್ತ ಮಿಲಿಟರಿ ಅಧಿಕಾರಿಗಳು ಮತ್ತು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ. ಕಯಾನಿ ಅವರ ಸಲಹೆ ಉತ್ತಮವಾದುದೇ ಆದರೂ ಪಾಕಿಸ್ತಾನವನ್ನು ನಂಬುವಂತಿಲ್ಲ ಎನ್ನುವುದು ಅವರ ವಾದ. ಪಾಕಿಸ್ತಾನದಲ್ಲಿ ಸರ್ಕಾರ ಮತ್ತು ಮಿಲಿಟರಿ ನಡುವೆ ಹೊಂದಾಣಿಕೆ ಇದ್ದಂತೆ ಕಾಣುತ್ತಿಲ್ಲ. ಇಂಥ ಸಂದರ್ಭದಲ್ಲಿ ಭಾರತ ಸಿಯಾಚಿನ್‌ನಿಂದ ಮಿಲಿಟರಿ ವಾಪಸ್ ಪಡೆಯುವಂಥ ಸಾಹಸಕ್ಕೆ ಕೈಹಾಕದಿರುವುದೇ ಒಳ್ಳೆಯದು. ಆ ವಿಚಾರದಲ್ಲಿ ಮಾತುಕತೆ ಮುಂದುವರಿಸುವುದು ಮತ್ತು ವಿವಾದಗಳ ಬಗ್ಗೆ ಹೆಚ್ಚು ತಿಳುವಳಿಕೆ ಪಡೆಯುವುದು ತಪ್ಪೇನಲ್ಲ. ಕಾಶ್ಮೀರ ವಿವಾದದ ಭಾಗವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭಾರತ ಯೋಚಿಸಬೇಕು. ಮುಂಬೈ ದಾಳಿಯ ರೂವಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯ ತೋರಿಸಿದರೆ ಪಾಕಿಸ್ತಾನದ ಬಗ್ಗೆ ಭಾರತೀಯರಿಗೆ ಸ್ವಲ್ಪ ನಂಬಿಕೆ ಬರಬಹುದು.  ಹಾಗೆ ನೋಡಿದರೆ ಸಿಯಾಚಿನ್ ಎರಡೂ ದೇಶಗಳಿಗೆ ಪ್ರತಿಷ್ಠೆಯ ವಿಷಯವಾಗಬಾರದು. ಹಲವು ನದಿಗಳ ಜೀವ ಸೆಲೆಯಾಗಿರುವ ಮತ್ತು ದಕ್ಷಿಣ ಏಷ್ಯಾದ ವಾತಾವರಣ ಹಾಗೂ ಜಲಶಕ್ತಿ ಪಾತಳಿಗಳಲ್ಲಿ ಒಂದಾಗಿರುವ ಸಿಯಾಚಿನ್ ಹಿಮನದಿ ಪ್ರದೇಶವನ್ನು ಕಾಪಾಡುವ ದಿಸೆಯಲ್ಲಿ ಎರಡೂ ದೇಶಗಳು ಪ್ರಯತ್ನ ಪಡಬೇಕು. ಬಾಲ್ಟಿ ಭಾಷೆಯಲ್ಲಿ ಸಿಯಾಚಿನ್ ಎಂದರೆ ಕಪ್ಪು ಗುಲಾಬಿ ಹೂವು ಎಂದರ್ಥ. ಭಾರತ ಮತ್ತು ಪಾಕಿಸ್ತಾನದ ವೈಮನಸ್ಯದಿಂದಾಗಿ ಸಿಯಾಚಿನ್ ಗುಲಾಬಿ ಹೂವುಗಳು ಕಪ್ಪಾಗಿವೆ ಎಂದು ಪರಿಸರ ಪ್ರೇಮಿಗಳು ಭಾವನಾತ್ಮಕವಾಗಿ ಹೇಳುತ್ತಾರೆ. ಇದೇನೇ ಇದ್ದರೂ ಕೆ-2 ಪ್ರದೇಶದಲ್ಲಿ ಹಿಮ ಶಾಂತಿ ಉದ್ಯಾನ ರಚಿಸಬೇಕೆಂದು ಅಂತರರಾಷ್ಟ್ರೀಯ ಪರಿಸರ ರಕ್ಷಣಾ ಸಂಸ್ಥೆಗಳು ಬಹಳ ಕಾಲದಿಂದ ಒತ್ತಾಯಿಸುತ್ತಿವೆ. ಅದು ಆಗಬೇಕು. ಆದರೆ ದುರದೃಷ್ಟವಶಾತ್ ಸಿಯಾಚಿನ್ ಮಿಲಿಟರಿ ಸಂಘರ್ಷದ ಕೇಂದ್ರವಾಗಿದೆ. ಅದೇ ದೊಡ್ಡ ದುರಂತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.