ಮಂಗಳವಾರ, ಜನವರಿ 28, 2020
23 °C

ಸೀಖೆ ಸೊಗಡು ಕೃತಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಕುವಳ್ಳಿ (ಚಿಕ್ಕನಾಯಕನಹಳ್ಳಿ ತಾಲ್ಲೂಕು): ಲೇಖಕನೊಬ್ಬನ ಸಾಮಾಜಿಕ ಬದ್ಧತೆ ಹುಟ್ಟಿದ ಮಣ್ಣಿನ ಒಡನಾಟದೊಂದಿಗೆ ಮಿಳಿತಗೊಂಡಾಗ ಆ ಲೇಖಕನಿಗೆ ವಿಶೇಷ ಒಳನೋಟಗಳು ದಕ್ಕುತ್ತವೆ. ಗ್ರಹಿಕೆಯ ತೆಕ್ಕೆಯೊಳಗೆ ಗ್ರಾಮೀಣ ಪರಿಸರ ಕಂಡರಿಯದ ವಿಸ್ಮಯಗಳು ಅನಾವರಣಗೊಳ್ಳುತ್ತವೆ ಎಂದು ಪ್ರಜಾವಾಣಿ ಸಹಾಯಕ ಸಂಪಾದಕರಾದ ದಿನೇಶ್ ಅಮಿನ್‌ಮಟ್ಟು ಅಭಿಪ್ರಾಯಪಟ್ಟರು.ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಾಕುವಳ್ಳಿ ತೋಟದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕ   ಎಸ್.ಗಂಗಾಧರಯ್ಯ ಅವರ ಸೀಖೆ ಸೊಗಡು, ಎರ‌್ಮಾ, ಬಯಲ ಪರಿಮಳ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.`ಬದುಕಿನ ನಿಜ ಕ್ಷಣಗಳು, ನಿಜ ವ್ಯಕ್ತಿಗಳು, ಅವರುಗಳು ಕಟ್ಟಿಕೊಂಡ ಮುಗ್ಧ ಲೋಕ ಓದುಗನನ್ನು ನಿಬ್ಬೆರಗಾಗಿಸುತ್ತವೆ. ಅದೇ ರೀತಿ ಜನಸಾಮಾನ್ಯನ ಅಸಾಮಾನ್ಯ ಬದುಕಿನ ಕಸುವಿನಿಂದ ಸಾಹಿತ್ಯವು ಜೀವ ತುಂಬಿಕೊಳ್ಳುತ್ತದೆ~ ಎಂದು ಹೇಳಿದರು.ಕೃತಿಗಳ ಕುರಿತು ಮಾತನಾಡಿದ ಲೇಖಕ ನಟರಾಜ್ ಹುಳಿಯಾರ್, ಬರವಣಿಗೆಯ ಸೂಕ್ಷ್ಮತೆ ಹಾಗೂ ಲೇಖಕನೊಬ್ಬ ಅದನ್ನು ಕಾಪಾಡಿಕೊಳ್ಳುವ ತುರ್ತಿನ ಬಗ್ಗೆ ಹೇಳಿದರು. ಬರೆಯುವವರಿಗೆ ಕೇವಲ ಆಳವಾದ ಅಧ್ಯಯನ ಇದ್ದರೆ ಸಾಲದು, ಅದರ ಜೊತೆಗೆ ಬದುಕಿನ ಬಗ್ಗೆ ಅಪಾರ ಪ್ರೀತಿ, ಸುತ್ತಲಿನದನ್ನು ಗಮನಿಸಲು ಬೇಕಿರುವ ವಿಶೇಷ ಸಂಯಮ ಬೇಕು. ಇದನ್ನು ಗಂಗಾಧರಯ್ಯ ಅವರ ಬರಹಗಳು ಹೇಳುತ್ತವೆ ಎಂದರು.ಹಳ್ಳಿಯ ತೋಟದಲ್ಲಿ ಹೀಗೆ ಇಷ್ಟೊಂದು ಜನ ಒಂದೆಡೆ ಕುಳಿತು ಮಾತನಾಡುವುದು ಈ ಕಾಲಕ್ಕೆ ಅಗತ್ಯವಾಗಿ ಬೇಕಿರುವ ಸಂಗತಿ ಎಂದು ರೈತ ಚಳವಳಿ ನೇತಾರ ಕಡಿದಾಳ್ ಶಾಮಣ್ಣ ತಿಳಿಸಿದರು.ಲೇಖಕ ಬಿ.ಚಂದ್ರೇಗೌಡ, ಬೆಟ್ಟದ ಬುಡದ ನೀಲಮಜ್ಜಿ, ಕಿರುತೆರೆ ನಟರಾದ ಅಚ್ಯುತ್ ಕುಮಾರ್, ಧರ್ಮೇಂದ್ರ ಅರಸ್, ಭವಾನಿ ಮುಂತಾದವರು ಹಾಜರಿದ್ದರು. ಜಿ.ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)