ಬುಧವಾರ, ಜನವರಿ 22, 2020
22 °C
ಬಿಪಿಎಲ್ ಕಾರ್ಡ್‌ ವಿಚಾರ: ಜಿಲ್ಲಾಧಿಕಾರಿ ಎಚ್ಚರಿಕೆ

ಸುಳ್ಳು ಮಾಹಿತಿ ನೀಡಿದರೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯಲ್ಲಿ ಅರ್ಹರಲ್ಲದಿದ್ದರೂ ಬಿಪಿಎಲ್ ಪಡಿತರ ಚೀಟಿ ಪಡೆದಿರುವವರು, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಆಯಾ ತಾಲ್ಲೂಕು ಕಚೇರಿಗೆ ಪಡಿತರ ಚೀಟಿಗಳನ್ನು ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಸೂಚನೆ ನೀಡಿದ್ದಾರೆ.ಪಡಿತರ ಚೀಟಿಗಳನ್ನು ಪಡೆಯಲು ಕೆಲ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಕೆಲವರು ಅರ್ಹರಲ್ಲದಿದ್ದರೂ ತಮಗೆ ಅನ್ವಯಿಸದ ಕಾರ್ಡ್‌ಗಳನ್ನು ಹೊಂದಿದ್ದಾರೆ. ಕೆಲವರು ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದು ಕೊಂಡಿರುವುದು ಕಂಡುಬಂದಿದೆ. ಅನರ್ಹರು ಬಿಪಿಎಲ್ ಕಾರ್ಡನ್ನು ಹಿಂತಿರುಗಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ.ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್‌ ಪಡೆದಿರುವ ಗುಂಡ್ಲುಪೇಟೆ ತಾಲ್ಲೂಕಿನ 48 ಕುಟುಂಬದ ಮುಖ್ಯಸ್ಥರ ವಿರುದ್ಧ ಈಗಾಗಲೇ ಮೊಕದ್ದಮೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳಗೊಂಡ ಕುಟುಂಬಗಳು, ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಉದ್ಯಮ, ಮಂಡಳಿ, ನಿಗಮಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿ, ಸಹಕಾರ ಸಂಘಗಳ ಖಾಯಂ ನೌಕರ ಸಿಬ್ಬಂದಿ, ವೃತ್ತಿಪರ ವರ್ಗಗಳಾದ ವೈದ್ಯರು, ವಕೀಲರು, ಲೆಕ್ಕ ಪರಿಶೋಧಕರು, ಆಸ್ಪತ್ರೆ ನೌಕರರು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ ಎಂದು ತಿಳಿಸಿದರು.ಮೂರು ಎಕ್ಟೇರ್ (7.5 ಎಕರೆ) ಒಣ ಭೂಮಿ ಅಥವಾ ಇದಕ್ಕೆ ಸರಿಸಮಾನವಾದ ನೀರಾವರಿ ಭೂಮಿ ಹೊಂದಿದವರು ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ ನೌಕರರು (ಅನುದಾನ ರಹಿತ ಕನ್ನಡ ಶಾಲೆಗಳ ನೌಕರರನ್ನು ಹೊರತುಪಡಿಸಿ) ನೊಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಸ್, ಕಮಿಷನ್ ಏಜೆಂಟ್ಸ್, ಬೀಜ ಮತ್ತು ಗೊಬ್ಬರ ಇನ್ನಿತರ ಡೀಲರ್‌ಗಳು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆ ನೀಡಿ ವರಮಾನ ಪಡೆಯುವವರು, ಬಹು ರಾಷ್ಟ್ರೀಯ ಕಂಪನಿ, ಉದ್ಧಿಮೆ, ಕೈಗಾರಿಕೆಗಳ ನೌಕರರು ಸಹ ಬಿಪಿಎಲ್ ಕಾರ್ಡ್ ಪಡೆಯುವುದು ಕಾನೂನು ಬಾಹಿರವಾಗಿದೆ ಎಂದರು.ಸೈಕಲ್, ಗಾಡಿಗಳ ಮೇಲೆ ತಳ್ಳಿಕೊಂಡು ವ್ಯಾಪಾರ ಮಾಡುವವರು, ರಸ್ತೆ ಬದಿಯಲ್ಲಿ ಕುಳಿತು ತರಕಾರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವವರು, ಗೂಡನ್‌ಗಳಲ್ಲಿ ವ್ಯಾಪಾರ ಚಟುವಟಿಕೆ ನಡೆಸುವವರು ಹೊರತುಪಡಿಸಿ ಉಳಿದ ಎಲ್ಲ ವ್ಯಾಪಾರಸ್ಥರು, ಇತರೆ ಯಾವುದೇ ಆದಾಯ ಮೂಲವಿಲ್ಲದೆ ಒಂದು ಆಟೊರಿಕ್ಷಾವನ್ನು ಹೊಂದಿ ಸ್ವತಃ ಚಾಲನೆ ಮಾಡುವವರು ಹೊರತುಪಡಿಸಿ 100 ಸಿಸಿ.ಗೆ ಮೇಲ್ಪಟ್ಟ ದ್ವಿಚಕ್ರ, ಕಾರು ಸೇರಿದಂತೆ ಇನ್ನಿತರ ಇಂಧನ ಚಾಲಿತ ವಾಹನಗಳನ್ನು ಹೊಂದಿರುವ ಸದಸ್ಯರ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಒಂದೇ ಕಡೆ ವಾಸವಿರುವ ಕುಟುಂಬಗಳು ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿರುವುದು, ಸದಸ್ಯರು ಎರಡು ಕಡೆ ಹೆಸರು ದಾಖಲು ಮಾಡಿರುವುದು ಸಹ ಅಪರಾಧವಾಗುತ್ತದೆ ಎಂದು ಹೇಳಿದರು.ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಹೊಂದಿರುವವರು ಡಿ. 15ರೊಳಗೆ ಸಂಬಂಧಪಟ್ಟ ತಾಲ್ಲೂಕು ಕಚೇರಿಗಳಿಗೆ ಹಿಂತಿರುಗಿಸಿ ಎಪಿಎಲ್ ಕಾರ್ಡ್ ಪಡೆದುಕೊಳ್ಳಬೇಕು. ನಿಗದಿತ ಅವಧಿಯೊಳಗೆ ಕಾರ್ಡ್ ಹಿಂದಿರುಗಿಸದೆ ತನಿಖೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬುವುದು ಕಂಡುಬಂದಲ್ಲಿ ಅಂಥಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)