ನಾನು ಬಡವಿ ಆತ ಬಡವ /ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು /ಅದಕು ಇದಕು ಎದಕು...

ವರಕವಿ ದ.ರಾ.ಬೇಂದ್ರೆ ಹೇಳಿ ಮುಗಿಸಿದ್ದಾರೆ. ಆ ಮುತ್ತಿನಂಥ ಸಾಲುಗಳು ಬಣ್ಣಗಳಾದರೆ? ಹಿರಿಯ ಕಲಾವಿದ ರಾ. ಸೂರಿ ಕ್ಯಾನ್ವಾಸ್ ಮೇಲೆ ಎಳೆದು ತಂದದ್ದು ಕಡು ಬಡತನವನ್ನು. ಜತೆಗೆ ಅದರ ಒಳಗೆ ಅವಿತು ಕುಳಿತ ಜೀವನ ಸಿರಿಯನ್ನು.

ದೃಷ್ಟಿಗೆ ಸುಲಭಕ್ಕೆ ನಿಲುಕದ ಸಾಮಾನ್ಯರ ಹಾಡುಪಾಡು ಸೂರಿ ಕಲೆಯ ಬಹುದೊಡ್ಡ ದನಿ. ಯಾರೂ ಗಮನಿಸದ, ಕಂಡರೂ ಮರೆತುಬಿಡಬಹುದಾದ ಕೆಲವು ಕ್ಷಣಗಳೇ ಇಲ್ಲಿ ದಿವ್ಯತ್ವಕ್ಕೆ ಏರಿವೆ. ನೋವು ನುಂಗಿ ನಲಿವು ಉಣಿಸುವ ಬದುಕು ಚಂದಗಟ್ಟಿದೆ.

ಕಾಲವನ್ನು ಅರ್ಥ ಪೂರ್ಣವಾಗಿ ಸೆರೆಹಿಡಿಯಲಾಗಿದೆ. ಜೀವನದ ಕಟುವಾಸ್ತವದಿಂದ ಕನಸಿಗೆ ಕರೆದೊಯ್ಯುವ ಶಕ್ತಿ ಇಲ್ಲಿನ ಮಾಂತ್ರಿಕ ಬಣ್ಣಗಳಿಗೆ ಇದೆ. ನಿರ್ಲಕ್ಷಿತರು ಈ ಕಲಾಕೃತಿಗಳ ರೂಪದರ್ಶಿಯರು. ಸೂರ್ಯನಿಗೂ ಕಾಣದ್ದು ಸೂರಿಗೆ ಕಂಡಿದೆ. ಆ ಅರ್ಥದಲ್ಲಿ ಅವರು ಕುಂಚ ಹಿಡಿದ ಕವಿ. ಕೊಳಲು ಮಾರುವ ಮುದುಕ, ದೊಂಬರಾಟದ ಅನಾಮಿಕ, ಬಾಳ ಮುಸ್ಸಂಜೆಯಲ್ಲಿ ದಿನ ಎಣಿಸುತ್ತಿರುವ ಹಣ್ಣು ಹಣ್ಣು ಮುದುಕಿಯರು, ಉಯ್ಯಾಲೆಯಲ್ಲಿ ತೂಗುತ್ತಿರುವ ಬಾಲ್ಯ ಹೀಗೆ ಅವರು ಚಿತ್ರಿಸಿರುವುದೆಲ್ಲ ಒಂದು ಬಗೆಯ ಜೀವನದಿ, ಜೀವನದ ನದಿ.

ಯುಗಾದಿ ದಿನ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸೂರಿ ಅವರ 15ಕ್ಕೂ ಹೆಚ್ಚು ತೈಲ ಚಿತ್ರಗಳು ಹಾಗೂ ಸುಮಾರು 20 ರೇಖಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ನಾಲ್ಕು ವರ್ಷಗಳಲ್ಲಿ ಮೂಡಿ ಬಂದ ಕಲಾಕೃತಿಗಳು ಇವು. ಹಳ್ಳಿ ಹಳ್ಳಿ ತಿರುಗುತ್ತಾ, ತಮ್ಮ `ಮೂರನೇ ಕಣ್ಣು~ ಕ್ಯಾಮೆರಾದಿಂದ ಕಂಡದ್ದನ್ನು ದಾಖಲಿಸಿಕೊಳ್ಳುವುದು ಸೂರಿ ಅವರ ಅಭ್ಯಾಸ. ನಂತರ ದಿನಗಟ್ಟಲೆ ಧ್ಯಾನಿಸುತ್ತಾ ಛಾಯಾಚಿತ್ರಗಳನ್ನು ಕ್ಯಾನ್ವಾಸ್ಗೆ ಇಳಿಸಲಾಗುತ್ತದೆ. ಛಾಯಾಚಿತ್ರದ ಛಾಪು ಮರೆಯಾಗಿ ಕಲಾವಂತಿಕೆ ಮುನ್ನೆಲೆಗೆ ಬರುತ್ತದೆ. ಅವರ ಸುಪ್ತಮನಸ್ಸಿನಲ್ಲಿ ಹಳ್ಳಿಗಾಡಿನ ಸೊಗಸು ಅಚ್ಚಳಿಯದಂತಿದೆ. ಹೀಗಾಗಿಯೇ ಅವರು ಯಾವುದೇ ವಸ್ತು ಆಯ್ದುಕೊಂಡರೂ ಅಲ್ಲಿ ಕಾಣುವುದು ಹಳ್ಳಿಯ ಖದರ್.

ಸೂರಿ ಮೊದಲಿನಿಂದಲೂ ವಾಸ್ತವವಾದಿ ಕಲಾವಿದ. ಅವರ ಅನೇಕ ಕಲಾಕೃತಿಗಳು ಈ ನೆಲೆಯಲ್ಲೇ ಮೂಡಿ ಬಂದವು. ಅನೇಕ ಬಾರಿ ಬೇರೆ ಕಲಾಪ್ರಕಾರಗಳಿಗೆ ಹೊರಳಲು ಮನಸ್ಸಾದರೂ ಅವರು ಬದಲಾಗಲಿಲ್ಲ. ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುವವರ ಸಂಖ್ಯೆ ವಿರಳವಾಗಿರುವುದನ್ನು ಗಮನಿಸಿದ ಅವರು ಇದನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದರು. ಅಂದಹಾಗೆ ರೇಖಾಚಿತ್ರಗಳಲ್ಲಿ ಅವರು ಬಳಸಿರುವುದು ಎಮ್ಮೆಯನ್ನು. ಚಾರ್ಕೋಲ್ನಿಂದ ಮೂಡಿರುವ ಈ ಕಲಾಕೃತಿಗಳಿಗೆ ಕಪ್ಪು ಬಿಳುಪಿನ ಸೊಗಸಿದೆ.

ಎಮ್ಮೆಯನ್ನೇ ಏಕೆ ಆಯ್ದುಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, `ಕಲಾ ವಿದ್ಯಾರ್ಥಿಗಳಿಗೆ ನೆರಳು ಬೆಳಕಿನ ಸಂಕೀರ್ಣತೆಯನ್ನು ಅರ್ಥ ಮಾಡಿಸಲು ಪ್ಲಾಸ್ಟರ್ ಆಫ್ ಪ್ಯಾರಿಸ್ನ ಕೃತಿಗಳನ್ನು ಎದುರಿಗಿಡುತ್ತಾರೆ. ಆದರೆ ನನಗೆ ಎಮ್ಮೆ ಅಂತಹ ಛಾಯಾ ಸಂಕೀರ್ಣತೆ ಇರುವ ಪ್ರಾಣಿ ಎನಿಸಿತು. ಪ್ಲಾಸ್ಟರ್ ಆಫ್ ಪ್ಯಾರೀಸ್ನ ಕೃತಿಗಳು ಬಿಳಿಯದ್ದಾದರೆ ಎಮ್ಮೆ ಕಪ್ಪು ವರ್ಣದ ಅನೇಕ ಛಾಯೆಗಳನ್ನು ಬಿಂಬಿಸುವ ಪ್ರಾಣಿ. ಅದರ ಮುಗ್ಧತೆ, ಗತ್ತು ಮುಂತಾದ ಕಾರಣಗಳಿಗಾಗಿ ಎಮ್ಮೆ ನಿನಗೆ ಸಾಟಿ ಇಲ್ಲ ಅನಿಸಿತು~ ಎಂದು ಮನಸಾರೆ ನಕ್ಕರು ಅವರು.

ಬೆಂಗಳೂರಿನವರೇ ಆದ ಸೂರಿ ಹುಟ್ಟಿದ್ದು 1949ರಲ್ಲಿ. ಬಣ್ಣಗಳ ಹುಚ್ಚಿಗೆ ಬಿದ್ದು ಸಿನಿಮಾ ಬ್ಯಾನರ್ ಬರೆಯುವವರ ನಡುವೆ ಸೇರಿಕೊಂಡಿದ್ದ ಅವರು ನಂತರ ಕಲಾಮಂದಿರ ಸೇರಿಕೊಂಡರು. ಎರಡು ಮೂರು ವರ್ಷ ಅಲ್ಲಿ ನೆಪಮಾತ್ರದ ಕಲಿಕೆ. ಕಲಾವಿದ ಬಿ.ಕೆ.ಎಸ್ ವರ್ಮಾ ಕನ್ನಡದ ಮಾಸಪತ್ರಿಕೆಯೊಂದಕ್ಕೆ ಸೇರುವಂತೆ ಸೂಚಿಸಿದರು.

ಅಲ್ಲಿಂದ ಪತ್ರಿಕೆಗಳ ಅಲೆದಾಟ ಆರಂಭವಾಯಿತು. 1982ರಿಂದ 2000ದವರೆಗೆ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಬಳಗದಲ್ಲಿ ಕಲಾವಿದನಾಗಿ ದುಡಿದರು. ನಂತರ ಮುಕ್ತ ಕಲಾವಿದನಾಗಿ ಚಾಚಿಕೊಂಡರು.

ಬದುಕನ್ನು ಸೂಕ್ಷ್ಮವಾಗಿ ಗಮನಿಸುವುದು ಸೂರಿ ಅವರಿಗೆ ಸಾಧ್ಯವಾದದ್ದು ಹೇಗೆ? ಅದಕ್ಕೆ ಕಾರಣ ಅವರ ಸಾಹಿತ್ಯಾಸಕ್ತಿ. ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಕುಂ. ವೀರಭದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳ ಕಲಾಕೃತಿಗಳು ಅವರಿಗೆ ಒಳನೋಟವನ್ನು ತಂದಿತ್ತವು. ಪತ್ರಿಕಾ ಕಚೇರಿಗಳಲ್ಲಿ ಚಿತ್ರ ಒದಗಿಸಲೆಂದು ನೀಡುತ್ತಿದ್ದ ಕತೆ, ಕವನಗಳೇ ಕಲಾಸೆಲೆಯಾದವು. `ಕನ್ನಡ ಸಾಹಿತ್ಯದಿಂದ ಪ್ರಭಾವಿತನಾಗಿದ್ದು~ ಬಹಳ ಎಂಬ ಮಾತು ಅವರದು.

ಪ್ರಾಚ್ಯವಸ್ತು ಸಂಗ್ರಹಾಲಯ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಚೆನ್ನೈ ಗ್ರಾಫಿಕ್ ಶಿಬಿರ, ಚಿತ್ರಕಲಾ ಪರಿಷತ್ ಪ್ರಾಯೋಜಿತ ಜಲವರ್ಣ ಶಿಬಿರ, ಧಾರವಾಡದ ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯ ಮುಂತಾದವು ಏರ್ಪಡಿಸಿದ್ದ ಕಲಾ ಶಿಬಿರಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.

16ನೇ ಅಖಿಲ ಭಾರತ ಚಿತ್ರಕಲಾ ಪ್ರದರ್ಶನ, ದಕ್ಷಿಣ ಕನ್ನಡ ಕಲಾ ಮಂಡಳಿಯ ಸಮೂಹ ಪ್ರದರ್ಶನ, ಹಂಪಿ ವಿಜಯನಗರ ಸಾಮ್ರಾಜ್ಯ ಕುರಿತ ಏಕವ್ಯಕ್ತಿ ಪ್ರದರ್ಶನ ಇವರ ಕಲಾಭಿವ್ಯಕ್ತಿಗೆ ವೇದಿಕೆ ಒದಗಿಸಿವೆ. ಪುಟ ವಿನ್ಯಾಸಕ್ಕಾಗಿ 1977ರಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿ, ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಶುಕ್ರವಾರ ಹಿರಿಯ ಕಲಾವಿದ ಎಸ್.ಜಿ.ವಾಸುದೇವ್ ಅವರು ಸಂಜೆ ಆರು ಗಂಟೆಗೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕಲಾವಿದರಾದ ಕೆ.ಚಂದ್ರನಾಥ ಆಚಾರ್ಯ, ಎನ್.ಮರಿಶಾಮಾಚಾರ್, ಜೆಎಂಎಸ್ ಮಣಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಶನಿವಾರದಿಂದ ಇದೇ ತಿಂಗಳ 28ರವರೆಗೆ ಪ್ರದರ್ಶನ ಸಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.