ಸೇತುವೆ ಮೇಲೆ ತೋಟ
ನಗರಾಭಿವೃದ್ಧಿಯ ಭರದಲ್ಲಿ ಬೆಂಗಳೂರು ತನ್ನ ಒಡಲ ತುಂಬ ಕಾಂಕ್ರೀಟ್ ಕಾಡನ್ನೇ ತುಂಬಿಕೊಂಡಿದ್ದರೂ ಅಲ್ಲಲ್ಲಿ ಇರುವಷ್ಟು ಜಾಗದಲ್ಲೇ ಹಸಿರನ್ನು ಬೆಳೆಸುವ ಪ್ರಯತ್ನ ನಡೆಯುತ್ತಲೇ ಇದೆ. ಹೀಗಾಗಿಯೇ ಬೆಂಗಳೂರಿನ ಹಸಿರು ಅಲ್ಪಸ್ವಲ್ಪವಾದರೂ ಉಳಿದುಕೊಂಡಿದೆ. ಇದಕ್ಕೊಂದು ನಿದರ್ಶನ ಮೈಸೂರು ರಸ್ತೆಯ ಮೇಲು ಉದ್ಯಾನ (ರೂಫ್ ಗಾರ್ಡನ್).
ಬೆಂಗಳೂರು- ಮೈಸೂರು ರೈಲು ನಾಯಂಡನಹಳ್ಳಿಯನ್ನು ಹಾದು ಹೋಗುತ್ತದೆ. ಇಲ್ಲಿ ಮೈಸೂರು ರಸ್ತೆಯಲ್ಲಿ ಬಂದು ಅಡ್ಡ ರಸ್ತೆ ಹಿಡಿದು ಪ್ರಮುಖ ರೈಲ್ವೆ ಕ್ರಾಸಿಂಗ್ ಮೂಲಕ ಎಡಕ್ಕೆ ತಿರುಗಿದರೆ ಗಂಗೊಂಡನ ಹಳ್ಳಿ, ಬಲಕ್ಕೆ ತಿರುಗಿದರೆ ಪಂತರ ಪಾಳ್ಯ ಮೊದಲಾದ ಬಡಾವಣೆಗಳನ್ನು ಪ್ರವೇಶಿಸಬಹುದಾಗಿತ್ತು. ಅಲ್ಲಿಂದ ವಿಜಯನಗರ, ನಾಗರಬಾವಿ ಮುಂತಾದೆಡೆಗೆ ಸಂಪರ್ಕ ಸಾಧ್ಯವಿತ್ತು. ನಡುವಿನ ಒಂದಷ್ಟು ಎತ್ತರದ ಜಾಗ ಗುಡಿ ಕೈಗಾರಿಕೆಗಳ ಕೇಂದ್ರವಾಗಿತ್ತು.
ಆದರೆ ನೆಲ ಮಟ್ಟದ ರೈಲ್ವೆ ಕ್ರಾಸಿಂಗ್ನಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಆಗಾಗ ಅನಾನುಕೂಲವಾಗುತ್ತಿತ್ತು. ರೈಲು ಬರುವಾಗ ಗೇಟ್ ಹಾಕಬೇಕಾಗುತ್ತಿತ್ತು. ಈ ತೊಂದರೆ ತಪ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆ ಜಾಗವನ್ನು ಪಡೆದುಕೊಂಡು ರೈಲ್ವೆ ಕ್ರಾಸಿಂಗ್ ಮುಚ್ಚಿ ಅದಕ್ಕೆ ಬದಲಾಗಿ ಕೆಳ ಸೇತುವೆ ನಿರ್ಮಿಸಿದೆ. ಇದರಡಿ ವಾಹನಗಳು ಹಾದು ಮೈಸೂರು ರಸ್ತೆಯನ್ನು ಸೇರಲು ಅನುಕೂಲ ಕಲ್ಪಿಸಿದೆ.
ಕೆಳ ಸೇತುವೆಯಿಂದಾಗಿ ಹೊರ ವರ್ತುಲ ರಸ್ತೆ ಸಾಕಾರಗೊಳ್ಳಲು ಸಾಧ್ಯವಾಗಿದೆ. ಯಶವಂತಪುರ, ಹೆಬ್ಬಾಳ ಮುಂತಾದ ಕಡೆಗಳಿಂದ ಮೈಸೂರು ರಸ್ತೆ ಸೇರಲು ಸುಮಾರು 6 ಕಿಮಿ ಪ್ರಯಾಣದ ಅಂತರ ಕಡಿಮೆಯಾಗುತ್ತದೆ. ಜೊತೆಗೆ ಲೆವೆಲ್ ಕ್ರಾಸಿಂಗ್ನ ಕಿರಿಕಿರಿಯೂ ಇಲ್ಲ.
ಅಂದಾಜು 79 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಕೆಳ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಓಡಾಟಕ್ಕೆ ತೊಂದರೆಯಾಗುವುದು ಎಲ್ಲರ ಅನುಭವ. ಆದರೆ ಇಲ್ಲಿ ಹಾಗೆ ಆಗದಂತೆ ಮಾಡಿದ್ದಾರೆ. ಸಂಗ್ರಹವಾಗುವ ನೀರು ವೃಷಭಾವತಿಯನ್ನು ಸೇರುವ ವ್ಯವಸ್ಥೆ ಕಲ್ಪಿಸಿದ್ದಾರೆ.
ಇಲ್ಲಿನ ಇನ್ನೊಂದು ವಿಶೇಷವೇ ರೂಫ್ ಗಾರ್ಡನ್. ‘ಕಟ್ ಅಂಡ್ ಕವರ್’ ತಂತ್ರಜ್ಞಾನ ಬಳಸಿ ಸುಮನಹಳ್ಳಿಯಿಂದ ನಾಯಂಡನಹಳ್ಳಿಗೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆಯ ಮೇಲೆ ರೈಲ್ವೆ ಸೇತುವೆಯ ಸಮೀಪ 172 x 42 ಮೀಟರ್ ಜಾಗವನ್ನು ಖಾಲಿ ಬಿಡದೆ ಸುಂದರವಾದ ಉದ್ಯಾನ ನಿರ್ಮಿಸಲಾಗಿದೆ.
ಬಿಸಿಲು ಕಾಲದಲ್ಲೂ ಹಸಿರಿನಿಂದ ಕಂಗೊಳಿಸುವ ಈ ಉದ್ಯಾನದ ಒಂದು ಬದಿಯಲ್ಲಿ 6 ಲಕ್ಷ ಲೀಟರ್ನಷ್ಟು ಮಳೆ ನೀರು ಸಂಗ್ರಹಿಸುವ ಬೃಹತ್ ತೊಟ್ಟಿಯಿದೆ. ಈ ನೀರನ್ನೇ ಉದ್ಯಾನದ ಸಸ್ಯ ಸಂಪತ್ತು ಹಾಗೂ ಪಕ್ಕದಲ್ಲೆೀ ಇರುವ ಸುಲಭ ಶೌಚಾಲಯಕ್ಕೆ ಪೂರೈಸಲಾಗುತ್ತದೆ. ಕೊಳವೆ ಬಾವಿಗಳ ಮರು ಭರ್ತಿಗೂ ಸಹಾಯವಾಗಿದೆ.
ಇದರ ಮತ್ತೊಂದು ಬದಿಯಲ್ಲಿ ಸೌರಶಕ್ತಿ ಬಳಕೆಗಾಗಿ ಪ್ಯಾನಲ್ಗಳನ್ನು ಅಳವಡಿಸಲಾಗಿದ್ದು ಅದರದ್ದೇ ಬೆಳಕು ಉದ್ಯಾನವನ್ನು ರಾತ್ರಿ ಬೆಳಗುತ್ತದೆ. ಸದ್ಯದಲ್ಲೇ ‘ಕಾರಂಜಿ’ ರಂಜಿಸಲಿದೆ. ಈ ಉದ್ಯಾನ ಸಂಪೂರ್ಣವಾಗಿ ಸಾರ್ವಜನಿಕರ ವಾಯು ವಿಹಾರಕ್ಕಾಗಿಯೇ ಮೀಸಲು ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.
ಈ ‘ಛಾವಣಿ ತೋಟ’ದಿಂದ ಬೀಸುವ ತಂಗಾಳಿಯಿಂದಾಗಿ ಸುತ್ತಮುತ್ತಲ ಬಡಾವಣೆಗಳಲ್ಲಿ ತಾಪಮಾನ ಸ್ವಲ್ಪ ಕಡಿಮೆಯೇ ಇದೆ. ಜೊತೆಗೆ ಕೆಳ ರಸ್ತೆಯ ಇಕ್ಕೆಲದ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸುವ ಬದಲು ಸಸ್ಯ ಕ್ರೀಪರ್ಗಳನ್ನು ಬೆಳೆಸಿ ‘ಹಸಿರು ಗೋಡೆಗಳ’ ತೋಟ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ಇಂಥ ವ್ಯವಸ್ಥೆ ಪುಣೆಯಲ್ಲಿದೆ.
ಚಿತ್ರ: ವಿಶ್ವನಾಥ ಸುವರ್ಣ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.