ಗುರುವಾರ , ಜನವರಿ 23, 2020
29 °C

ಸೈಕಲ್‌ ಮೇಲೆ ಸ್ಮಾರ್ಟ್‌ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಕಲ್‌ ತುಳಿಯುವುದೆಂದರೆ ಕೆಲ­ವರಿಗೆ ಇಷ್ಟ, ಮತ್ತೆ ಕೆಲವರಿಗೆ ಕಷ್ಟ, ಇನ್ನು ಕೆಲವರಿಗೆ ತಾತ್ಸಾರ. ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿಜ್ಞಾನಿಗಳು ಸೈಕಲ್‌ ಸವಾರಿ­ಯನ್ನು ಜನಪ್ರಿಯ­ಗೊಳಿ­ಸಲು ಹೊಸತೊಂದು ತಂತ್ರ ಕಂಡು ಹಿಡಿದಿದ್ದಾರೆ.ಸೈಕಲ್‌ ತುಳಿಯುತ್ತಾ ತುಳಿಯುತ್ತಾ ವೇಗ ಹೆಚ್ಚಿದಂತೆ ಸೈಕಲ್‌­ ಚಕ್ರದಿಂದಲೇ ವಿದ್ಯುತ್‌ ಉತ್ಪಾದನೆ­ಯಾಗುವ ಮತ್ತು ಅದೇ ಶಕ್ತಿಯಲ್ಲಿ ಚಲಿಸುವ ತಂತ್ರಜ್ಞಾನ ಇದು.ಇದರ­ಲ್ಲೇನು ವಿಶೇಷ ಈಗಾಗಲೇ ಇಂತಹ ತಂತ್ರಜ್ಞಾನ ಬಂದಿದೆಯಲ್ಲಾ ಎನ್ನಬೇಡಿ. ಇಲ್ಲೇ ಇರುವುದು ವಿಶೇಷ!

ನೀವು ಕೊಪೆನ್‌ಹೆಗನ್‌  ಎಂಬ ನಗರದ ಕುರಿತು ಕೇಳಿರಬಹುದು. ಡೆನ್ಮಾರ್ಕ್‌ನ ರಾಜಧಾನಿಯಾಗಿರುವ ಈ ನಗರ ಪ್ರಪಂಚದಲ್ಲೇ ಸೈಕಲ್‌ ಸವಾರಿಗೆ ಹೇಳಿ ಮಾಡಿಸಿದ ತಾಣ.ಇಲ್ಲಿನ ಒಟ್ಟಾರೆ ಜನಸಂಖ್ಯೆ­ಯಲ್ಲಿ ಶೇ 55ರಷ್ಟು ಜನರು ಸೈಕಲ್‌ ಬಳಸುತ್ತಾರೆ. ಇವರೆ­ಲ್ಲರು ಪ್ರತಿ ದಿನ ಸೈಕಲ್‌ ತುಳಿಯುವ ಒಟ್ಟು ದೂರ ಲೆಕ್ಕ ಹಾಕಿದರೆ  120 ಲಕ್ಷ ಕಿ.ಮೀ ದಾಟು­ತ್ತದೆ.  ಹಾಗಾಗಿಯೇ ಬೈಸಿಕಲ್‌ ಸವಾರಿಯ ಹೊಸ ಸಾಧ್ಯತೆಗಳತ್ತ ಈ ನಗರ ಸದಾ ಕಣ್ಣು ನೆಟ್ಟಿರುತ್ತದೆ. ಈ ನಗರದ ಕಂಪೆನಿಯೊಂದು ‘ಎಂಐಟಿ’ ವಿಜ್ಞಾನಿ­ಗಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದ ಪರವಾನಗಿ ಪಡೆದುಕೊಂಡಿದೆ.ಈ ತಂತ್ರಜ್ಞಾನ ಬಳಸಿ ‘ಕೊಪೆನ್‌­ಹೆಗನ್‌’  ನಗರದ ಹೆಸರಿನಲ್ಲೇ ‘ಕೊಪೆನ್‌­ಹೆಗನ್‌ ಸೈಕಲ್‌ ಚಕ್ರ’ವನ್ನು ಅಭಿವೃದ್ಧಿ­ಪಡಿಸಲಾಗಿದೆ. ನೋಡಲು ಕ್ರೀಡೆಗಳಲ್ಲಿ ಬಳಸುವ ಸೈಕಲ್‌ಗಳಲ್ಲಿ ಇರುವಂತೆಯೇ ಕಾಣುವ ಈ ಚಕ್ರವನ್ನು ಸುಲಭವಾಗಿ ಯಾವುದೇ ಮಾದರಿಯ ಸೈಕಲ್‌ಗಳಿಗಾದರೂ ಜೋಡಿ­ಸಿಕೊಳ್ಳಬಹುದು. ಆಮೇಲೆ ಸೈಕಲ್‌ ಹತ್ತಿ ಹೊರಟ­ರಾಯಿತು.

ಸೈಕಲ್‌ನ ವೇಗ  ಗಂಟೆಗೆ 20 ಮೈಲು ದಾಟು­ತ್ತಿದ್ದಂತೆ ವಿದ್ಯುತ್‌ ಉತ್ಪಾದನೆ ಪ್ರಾರಂಭವಾ­­ಗುತ್ತದೆ.ಹೀಗೆ ಉತ್ಪಾದನೆ­ಯಾಗುವ ವಿದ್ಯುಚ್ಛಕ್ತಿಯು  ಸೈಕಲ್  ಚಕ್ರದಲ್ಲಿಯೇ ಅಳವಡಿಸಲಾಗಿರುವ ಬ್ಯಾಟರಿಯಲ್ಲಿ ಸಂಗ್ರ­ಹವಾಗುತ್ತದೆ(ಚಿತ್ರ ನೋಡಿ). ಅಷ್ಟೇ ಅಲ್ಲ, ಈ ತಂತ್ರಜ್ಞಾನದ ಸಂಪೂರ್ಣ ಸದುಪ­ಯೋಗ ಪಡೆದು­ಕೊಳ್ಳಲು  ಕಂಪೆನಿ ವಿಶಿಷ್ಟ ಅಪ್ಲಿಕೇಷನ್‌ ಒಂದನ್ನೂ ಅಭಿವೃದ್ಧಿ­ಪಡಿಸಿದೆ.ನಿಸ್ತಂತು ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವ ಈ ಅಪ್ಲಿಕೇಷನ್‌, ಸವಾರನ ಸ್ಮಾರ್ಟ್‌ಫೋನ್‌ನಲ್ಲಿ ಸೈಕಲ್‌ ವೇಗವನ್ನು ಪ್ರದರ್ಶಿಸುತ್ತದೆ. ಸೈಕಲ್‌ ತುಳಿಯುವ ವ್ಯಕ್ತಿಯ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಕೊಬ್ಬು ಕರಗಿದೆ ಎನ್ನುವುದನ್ನೂ ನಿಖರವಾಗಿ ತಿಳಿಸುತ್ತದೆ.  ಅಲ್ಲದೆ, ಎದೆಬಡಿತ, ರಕ್ತದೊತ್ತಡದ ಮೇಲೆಯೂ ನಿಗಾ ವಹಿಸುತ್ತದೆ.

ಇದೆಲ್ಲ ಅನುಕೂಲಗಳ ಜತೆಗೇ ಇನ್ನೂ ಕೆಲವು ಸೌಲಭ್ಯಗಳು ಈ ಸೈಕಲ್‌ನಲ್ಲಿದೆ.ಸವಾರ ಸೈಕಲ್‌ ಬಿಟ್ಟು ಬೇರೆಲ್ಲಿಗೋ ಹೋದರೆ, ತನ್ನಿಂದ ತಾನೇ ಸೈಕಲ್ ಲಾಕ್‌ ಆಗುವಂತೆ ಮಾಡುತ್ತದೆ ಈ ಅಪ್ಲಿಕೇಷನ್‌. ಹಾಗಾಗಿ ಇದೊಂದು ಬಹಳ ಸ್ಮಾರ್ಟ್‌ ಆದ ಅಪ್ಲಿಕೇಷನ್‌ ಎನ್ನುತ್ತಾರೆ ‘ಎಂಎಟಿ’ನಿಂದ ತಂತ್ರಜ್ಞಾನದ ಪರವಾನಗಿ ಪಡೆದು­ಕೊಂಡಿರುವ ‘ಸೆನ್ಸಬಲ್‌ ಸಿಟಿ’ ಲ್ಯಾಬ್‌ನ ಸಹಾಯಕ ನಿರ್ದೇಶಕ ಅಸ್ಸಾಫ್‌ ಬ್ರೈಡರ್‌ಮನ್‌.ಈ ವಿಶಿಷ್ಟ ‘ಕೊಪೆನ್‌­ಹೆಗನ್‌’ ಚಕ್ರದಲ್ಲಿ ಉತ್ಪಾದ­ನೆಯಾಗುವ ವಿದ್ಯುಚ್ಛಕ್ತಿ ಮತ್ತು ಸವಾರನ ಪೆಡಲ್‌ ತುಳಿಯುವ ಕಾಲಿನ ಶಕ್ತಿಯ ಜತೆಗೆ ಸೇರಿಕೊಂಡಾಗ, ಸಾಮಾನ್ಯ ಸೈಕಲ್‌ ‘ವಿದ್ಯುತ್‌ ಚಾಲಿತ’ ವಾಹನದಂ­ತಾ­­ಗುತ್ತದೆ. ಈ ಮೂಲಕ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿಯೂ ಕ್ರಮಿಸಬ­ಹುದಾಗಿದೆ ಎನ್ನುವು­ದು ಅವರ ವಿವರಣೆ.ವಿದ್ಯುಚ್ಛಕ್ತಿ ಉತ್ಪಾದಿಸಿ, ಸಂಗ್ರಹಿಸಿಟ್ಟು­ಕೊಂಡು ಸೈಕಲ್‌ಗೆ ವೇಗ ಒದಗಿಸುವಂತಹ ಈ ವಿಶೇಷ ಚಕ್ರದ ಬೆಲೆ 699 ಡಾಲರ್‌ (ಅಂದಾಜು ರೂ.43 ಸಾವಿರ).ಇದು ಬಹಳ ದುಬಾರಿ ಅನಿಸಿದರೂ ದೀರ್ಘಾವಧಿ­ಯಲ್ಲಿ ಹೆಚ್ಚು ಲಾಭ ತರುತ್ತದೆ. ಇಂತಹ ಒಂದು ಸಾವಿರ ಸೈಕಲ್‌ ಚಕ್ರಗಳು ಈಗಾಗಲೇ ಮಾರಾಟವಾಗಿವೆ. ಅಮೆರಿಕ, ಆಸ್ಟ್ರೇಲಿ­ಯಾ, ಕೀನ್ಯಾ, ಮಡಗಾಸ್ಕರ್‌ನಲ್ಲಿ  ಕೂಪೆ­ನ್‌ಹೆಗನ್‌ ಚಕ್ರಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ ಎಂದು ಈ ಸೈಕಲ್‌ ಚಕ್ರಗಳಿಗೆ ಮುಂಗಡ ಕಾಯ್ದಿರಿಸುವ ವೆಬ್‌ಸೈಟ್‌ ಹೇಳಿದೆ.

ಪ್ರತಿಕ್ರಿಯಿಸಿ (+)