ಸೋಮವಾರ, ಜನವರಿ 27, 2020
26 °C

ಸೈಕ್ಲಿಂಗ್‌ನಲ್ಲಿ ಲೋಕೇಶ್

–ಗಿರೀಶ ದೊಡ್ಡಮನಿ. Updated:

ಅಕ್ಷರ ಗಾತ್ರ : | |

ಸೈಕ್ಲಿಂಗ್‌ನಲ್ಲಿ ಲೋಕೇಶ್

ರ್ನಾಟಕದ ಸೈಕ್ಲಿಂಗ್ ಕ್ರೀಡೆಯ ಭೂಪಟವನ್ನು ತೆರೆದಿಟ್ಟರೆ ವಿಜಾಪುರ, ಬಾಗಲಕೋಟೆ, ಬೆಳಗಾವಿ ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಬೈಸಿಕಲ್ ಚಕ್ರದ ಗುರುತು ಸಿಗುವುದು ಅಪರೂಪ. ಅದರಲ್ಲೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಂತೂ ತೀರಾ ಅಪರೂಪ. ಆದರೆ ಕಳೆದ ಒಂದು ದಶಕದಿಂದ ಮೈಸೂರಿನ ಹೆಸರೂ ಅಂತರರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಕಾಣುವಂತೆ ಮಾಡಿರುವ ಶ್ರೇಯ  ಲೋಕೇಶ ನರಸಿಂಹಾಚಾರಗೆ ಸಲ್ಲುತ್ತದೆ.

ಅಂತರರಾಷ್ಟ್ರೀಯಮಟ್ಟದ ಸೈಕ್ಲಿಸ್ಟ್‌ ಆಗುವ ಗುರಿಯನ್ನು ಬೆನ್ನತ್ತಿದ ಈ ಕನಸು ಕಂಗಳ ಯುವಕ, ಒಡವೆ ತಯಾರಿಸುವ ಕೆಲಸ, ಸೈಕಲ್ ಮೆಕ್ಯಾನಿಕ್, ಸೈಕಲ್ ವ್ಯಾಪಾರಿಯಾಗಿ ಕಾರ್ಯನಿರ್ವಹಿಸಿ ಬೆಳೆದರು.  ಕೃಷ್ಣರಾಜನಗರದ ಚಿನ್ನದ ಒಡವೆ ತಯಾರಿಸುವ ಕುಟುಂಬದ  ಹುಡುಗ ಮೈಸೂರಿನ ಸೈಕ್ಲಿಂಗ್‌ ಕ್ರೀಡೆಗೆ ಸ್ವರ್ಣದ ಗರಿಗಳನ್ನು ಏಕಾಂಗಿಯಾಗಿ ಅಲಂಕರಿಸುತ್ತಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವ ಲೋಕೇಶ್, ದುಬೈ,  ಶ್ರೀಲಂಕಾಗಳಲ್ಲಿಯೂ ಸೈಕ್ಲಿಂಗ್‌ನಲ್ಲಿ ಭಾಗವಹಿಸಿದ್ದಾರೆ.

ರಸ್ತೆ, ಟ್ರ್ಯಾಕ್ ಮತ್ತು ಮೌಂಟೇನ್ ಸೈಕ್ಲಿಂಗ್‌ಗಳಲ್ಲಿ ಅವರು ಕಳೆದ 12 ವರ್ಷಗಳಿಂದ ಪದಕಗಳ ಸಾಧನೆ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸೈಕ್ಲಿಂಗ್‌ನ ಕ್ಲಿಷ್ಟಕರವಾದ ಸ್ಪರ್ಧೆಗಳಾದ 2ಡಿ ರೇಸಿಂಗ್, ಸ್ಟೇಜ್ ರೇಸಿಂಗ್‌ಗಳಲ್ಲೂ ಭಾಗವಹಿಸುತ್ತಿದ್ದಾರೆ. ಕಿನ್‌ಕಿನ್ ಅಂತರರಾಷ್ಟ್ರೀಯ ವೃತ್ತಿಪರ ಸೈಕ್ಲಿಂಗ್ ಕ್ಲಬ್‌ನ ಸಕ್ರೀಯ ಸದಸ್ಯರೂ ಆಗಿದ್ದಾರೆ. ಈ ಸಂಸ್ಥೆಯು ಭಾರತದ ಮೊಟ್ಟಮೊದಲ ವೃತ್ತಿಪರ ಸೈಕ್ಲಿಂಗ್ ಕ್ಲಬ್ ಆಗಿದ್ದು, ಇತ್ತೀಚೆಗೆ ಥಾಯ್ಲೆಂಡ್‌ನಲ್ಲಿ ನಡೆದ ಟೂರ್ ಡಿ ಫ್ರೆಂಡ್‌ಶಿಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದರು.ಕಳೆದ ತಿಂಗಳಷ್ಟೇ ದುಬೈ ರೇಸ್‌ನಲ್ಲಿ ಭಾಗವಹಿಸಿ ಬಂದಿರುವ ಅವರು, ಭಾನುವಾರ (ಡಿ.15) ಮುಂಬೈನಲ್ಲಿ ಆರಂಭವಾದ ಏಷ್ಯಾ ಟೂರ್ 2013 ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ಈ ಸ್ಪರ್ಧೆಯ ಟೂರ್‌ ಡಿ ಇಂಡಿಯಾ ವಿಭಾಗದ ಸ್ಟೇಜ್‌ 1 (106 ಕಿ.ಮೀ), ಡಿಸೆಂಬರ್ 12ರಿಂದ ಜೈಪುರನಿಂದ ಸ್ಟೇಜ್ 2  (102 ಕಿ.ಮೀ) ಮತ್ತು ಡಿಸೆಂಬರ್ 22ರಂದು ಸ್ಟೇಜ್ 3 ರೇಸ್ ದೆಹಲಿಯ ಬುದ್ಧ ಅಂತರರಾಷ್ಟ್ರೀಯ ಸರ್ಕೀಟ್‌ನಲ್ಲಿ ನಡೆಯಲಿವೆ. ಈ ಮೂರು ಹಂತಗಳಲ್ಲಿಯೂ 26 ವರ್ಷದ ಲೋಕೇಶ್ ಭಾಗವಹಿಸಲಿದ್ದಾರೆ. ಶ್ರಮದ ಹಾದಿ: ಮಧ್ಯಮವರ್ಗದ ಕುಟುಂಬದ ಹುಡುಗ  ಲೋಕೇಶ್‌ಗೆ ಶಾಲಾ ದಿನಗಳಿಂದ ಸೈಕ್ಲಿಂಗ್ ಹವ್ಯಾಸ. ಮನೆಯಲ್ಲಿ ಅಣ್ಣ ನೀಡಿದ ಪ್ರೋತ್ಸಾಹದಿಂದ ಸ್ವಯಂ ಕಲಿಕೆಯಿಂದಲೇ ಸೈಕ್ಲಿಂಗ್ ಕೌಶಲಗಳನ್ನು ಕಲಿತರು. ಸುಮಾರು 700 ಕಿಲೋಮಿಟರ್‌ಗೂ ಹೆಚ್ಚು ದೂರವಿರುವ ‘ಸೈಕ್ಲಿಂಗ್ ಕಾಶಿ’ ವಿಜಾಪುರಕ್ಕೆ ಹೋಗಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಲ್ಲಿಯ ಹಿರಿಯ ಸೈಕ್ಲಿಸ್ಟ್‌ಗಳು ಮತ್ತು ತರಬೇತುದಾರರಾದ ಚಂದ್ರು ಕುರಣಿ, ಶ್ರೀಶೈಲ ಕುರಣಿ, ರಜಪೂತ್, ಬೆಂಗಳೂರಿನ ವೆಂಕಟೇಶ ಮತ್ತಿತರರಿಂದ ಮಾರ್ಗದರ್ಶನ ಪಡೆದರು.ದುಬಾರಿ ಮೊತ್ತದ ಸ್ಪರ್ಧಾ ಸೈಕಲ್‌ ಕೊಳ್ಳಲು  ಚಿನ್ನದ ಅಂಗಡಿಯಲ್ಲಿ ದುಡಿದು ಹಣ ಸೇರಿಸಿದರು. ಅಣ್ಣ ಕೂಡ ಸಹಾಯಹಸ್ತ ಚಾಚಿದ್ದರು. ನಂತರ ಬೆಂಗಳೂರಿನಲ್ಲಿ ಸೈಕ್ಲಿಂಗ್ ಅಂಗಡಿಯಲ್ಲಿಯೂ ಕೆಲಸ ಮಾಡಿದರು. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಸ್ಪರ್ಧಾ ದರ್ಜೆಯ ಸೈಕ್ಲಿಂಗ್ ಮಳಿಗೆಯನ್ನು ಆರಂಭಿಸಿರುವ ಅವರು ಇಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆಗೆ ಮುಂದಾಗಿದ್ದಾರೆ.ಎಸ್ಸೆಸ್ಸೆಲ್ಸಿಯವರೆಗೆ ವಿದ್ಯಾಭ್ಯಾಸ ಪೂರೈಸಿದ್ದರೂ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ನಿರರ್ಗಳ ವಾಗಿ ಮಾತನಾಡುವುದನ್ನು ಕಲಿತಿದ್ದಾರೆ. ಇದರಿಂದಾಗಿ ಸ್ನೇಹಿತರ ವಲಯವೂ ದೊಡ್ಡದಿದ್ದು, ಸೈಕ್ಲಿಂಗ್‌ನಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಮೊದಲ ಬಾರಿಗೆ ಟ್ರಯಥ್ಲಾನ್‌ ಮತ್ತು ಡುಯಥ್ಲಾನ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದರು.  ಎಲ್ಲ ವಯೋವರ್ಗ ದವರೂ ಭಾಗವಹಿಸುವ ಸ್ಟೇಜ್ ರೇಸ್‌ ಕೂಡ ಆಯೋಜಿಸಿ ಯಶಸ್ವಿಯಾಗಿದ್ದಾರೆ.‘ಮೈಸೂರಿನಲ್ಲಿ ಸೈಕ್ಲಿಂಗ್‌ ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದೆ. ಇಲ್ಲಿ ಸೈಕ್ಲಿಂಗ್‌ ಪ್ರತ್ಯೇಕ ರಸ್ತೆಗಳು ಇವೆ. ಮಕ್ಕಳಿಗೂ ಸಾಕಷ್ಟು ಆಸಕ್ತಿ ಇದೆ. ಈ ಭಾಗದಲ್ಲಿಯೂ ಸೈಕ್ಲಿಂಗ್‌ ಕ್ರೀಡೆಯ ವಿವಿಧ ವಿಭಾಗಗಳನ್ನು ಅಭಿವೃದ್ಧಿ ಪಡಿಸುವ ಆಸಕ್ತಿ ಇದೆ. ಹಲವಾರು ಗೆಳೆಯರು ಮತ್ತು ಹಿತೈಷಿಗಳು ಜೊತೆಗೂಡಿದ್ದಾರೆ’ ಎಂದು ತಮ್ಮ ಭವಿಷ್ಯದ ಕನಸುಗಳನ್ನು ವಿವರಿಸುತ್ತಾರೆ ಲೋಕೇಶ್.ಸೈಕ್ಲಿಂಗ್ ಆರೋಗ್ಯ ರಕ್ಷಣೆಗೂ ಸಹಕಾರಿ ಮತ್ತು ಪರಿಸರ ಸ್ನೇಹಿಯೂ ಆಗಿದ್ದು, ಎಲ್ಲ ವಯೋಮಿತಿಯವರಿಗೆ ಹಲ ವಾರು ಸ್ಪರ್ಧೆಗಳು ಇವೆ. ಹವ್ಯಾಸಿ ಮತ್ತು ವೃತ್ತಿಪರ ಕ್ರೀಡೆ ಯಾಗಿ ತೊಡಗಿಸಿಕೊಳ್ಳುವುದರಿಂದ ಸಾಧನೆ ಮಾಡಬ ಹುದು ಎಂದು ಮೈಸೂರು ನಗರದಲ್ಲಿ ಜಾಗೃತಿ ಮೂಡಿಸುತ್ತಿರುವ ಲೋಕೇಶ್ ಈಗ ‘ಟೂರ್ ಡಿ ಇಂಡಿಯಾ’ದಲ್ಲಿ ಪದಕ ಗೆದ್ದು ಬರುವ ವಿಶ್ವಾಸದೊಂದಿಗೆ ತೆರಳಿದ್ದಾರೆ.

–ಗಿರೀಶ ದೊಡ್ಡಮನಿ.

ಪ್ರತಿಕ್ರಿಯಿಸಿ (+)