ಶನಿವಾರ, ಜನವರಿ 18, 2020
22 °C

ಸೈನೆಡ್‌ ಹಂತಕ ಮೋಹನ ಕುಮಾರ್‌: ಸುನಂದಾ ಕೊಲೆ ಪ್ರಕರಣ ಸಾಬೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸೈನೈಡ್‌ ತಿನ್ನಿಸಿ ಮಹಿಳೆಯರನ್ನು ಕೊಲೆ ಮಾಡುತ್ತಿದ್ದ ಆರೋಪಿ, ಬಂಟ್ವಾಳ ತಾಲ್ಲೂಕಿನ ಕನ್ಯಾನದ ಶಿಕ್ಷಕ ಮೋಹನ ಕುಮಾರ್‌ ವಿರುದ್ಧ ಇನ್ನೊಂದು ಕೊಲೆ ಪ್ರಕರಣ ಸಾಬೀತಾಗಿದೆ. 



ಮೋಹನ ಸುಳ್ಯ ತಾಲ್ಲೂಕಿನ ಪೆರುವಾಜೆಯ ಸುನಂದಾ (28) ಅವರನ್ನು ಅಪಹರಿಸಿ ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಬಿ.ಕೆ.ನಾಯಿಕ ಅವರು ಬುಧವಾರ ಆದೇಶ ನೀಡಿದರು. ಮೋಹನನ ಮೇಲಿರುವ 20 ಕೊಲೆ ಪ್ರಕರಣಗಳ ಪೈಕಿ ಮೂರರಲ್ಲಿ ಆತನಿಗೆ ಶಿಕ್ಷೆ ಆಗುವುದು ಖಚಿತವಾದಂತಾಗಿದೆ.



71 ಪುಟಗಳ ಆದೇಶವನ್ನು ಓದಿದ ನ್ಯಾಯಾಧೀಶರು, ಮೋಹನ ಕುಮಾರ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 366 (ಮಹಿಳೆಯ ಅಪಹರಣ), 376 (ಅತ್ಯಾಚಾರ), 328 (ವಿಷ ತಿನಿಸುವುದು), 392 ಮತ್ತು 394 (ಚಿನ್ನಾಭರಣ ದೋಚಿದ್ದು), 417 (ನಂಬಿಕೆ ದ್ರೋಹ), 302 (ಕೊಲೆ) ಹಾಗೂ 201 (ಸಾಕ್ಷ್ಯ ನಾಶ) ಆರೋಪಗಳು ಸಾಂದರ್ಭಿಕ ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದರು.



ಮಂಗಳೂರಿನಲ್ಲಿ ಸಮಾವೇಶವೊಂದರಲ್ಲಿ ಸುನಾಂದಾ ಅವರನ್ನು ಮಾತನಾಡಿಸಿದ್ದ ಮೋಹನ, ತನ್ನನ್ನು ಕೇಂದ್ರ ಸರ್ಕಾರಿ ನೌಕರ ಶಶಿಧರ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ. ಆಕೆಯ ಮೊಬೈಲ್‌ ಸಂಖ್ಯೆ ಪಡೆದು ಮದುವೆಯಾಗುವುದಾಗಿ ನಂಬಿಸಿದ್ದ. ಮದುವೆ ಸಂಬಂಧಿ ದೋಷ ಪರಿಹಾರಕ್ಕಾಗಿ  ಆಕೆಗೆ ಕುಂಕುಮ ನೀಡಿದ್ದಲ್ಲದೇ, ಮಲ್ಲ  ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಬೇಕೆಂದು ತಿಳಿಸಿದ್ದ.



ಊರಿನ ದುರ್ಗಾ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದ ಸುನಂದಾ ಈ ಸಲುವಾಗಿ 2008ರ ಫೆ.11ರಂದು ಬೆಳ್ಳಾರೆಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಿಂದ ರೂ 25 ಸಾವಿರ ಸಾಲ ಪಡೆದಿದ್ದರು.



ಅದೇ ದಿನ ಮೋಹನ ಆಕೆಯನ್ನು ಮೈಸೂರಿನ ಉಮಾಮಹೇಶ್ವರಿ ಲಾಡ್ಜ್‌ಗೆ ಕರೆದೊಯ್ದು ಕೆಲವು ತಾಸು ತಂಗಿದ್ದ. ಆಕೆಯೊಂದಿಗೆ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದ.



ಅಂದು ಸಂಜೆ, ದೇವಸ್ಥಾನಕ್ಕೆ ಹೋಗುವ ನೆಪ ಹೇಳಿ, ಆಕೆ ಧರಿಸಿದ್ದ ಚಿನ್ನಾಭರಣ ಹಾಗೂ ರೂ 25 ಸಾವಿರ  ನಗದನ್ನು ಲಾಡ್ಜ್‌ನ ಕೊಠಡಿಯಲ್ಲಿಡುವಂತೆ ಸೂಚಿಸಿದ್ದ. ಆಕೆಯನ್ನು ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕರೆತಂದಿದ್ದ ಆತ, ಗರ್ಭಧಾರಣೆಯಾಗುವುದನ್ನು ತಡೆಯುವ ಮಾತ್ರೆ ಎಂದು ಹೇಳಿ ಸೈನೈಡ್‌ ನೀಡಿದ್ದ. ಅದನ್ನು ತಿಂದ ಸುನಂದಾ ಕುಸಿದು ಬಿದ್ದು ಮೃತಪಟ್ಟಿದ್ದರು. ಬಳಿಕ ಮೋಹನ, ಲಾಡ್ಜ್‌ನಲ್ಲಿದ್ದ ರೂ 25 ಸಾವಿರ ನಗದು ಹಾಗೂ  ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಸುನಂದಾ ಬಳಿ ಇದ್ದ ಮೊಬೈಲ್‌ ನೆರವಿನಿಂದ ಪೊಲೀಸರು ಆಕೆಯ ಮನೆಯವರಿಗೆ ಮಾಹಿತಿ ನೀಡಿದ್ದರು.



ತಾಯಿ ರತ್ನಾವತಿ, ಸಹೋದರಿ ಹಾಗೂ ಸಂಬಂಧಿಕರೊಬ್ಬರು ಅದೇ ರಾತ್ರಿ ಮೈಸೂರಿಗೆ ತೆರಳಿ ಸುನಂದಾ ಮೃತದೇಹವನ್ನು ಗುರುತಿಸಿದ್ದರು.



ಮೋಹನ ಪರಿಚಯವಾಗಿದ್ದನ್ನು ಸುನಂದಾ ತಾಯಿಯ ಬಳಿ ಹಿಂದೆಯೇ ಹೇಳಿಕೊಂಡಿದ್ದರು. ಸುನಂದಾ, ಮೋಹನನ ಜತೆಗಿದ್ದುದನ್ನು ಸಂಬಂಧಿಯೊಬ್ಬರು ನೋಡಿದ್ದರು. 1 ವರ್ಷ ಎಂಟು ತಿಂಗಳ ಬಳಿಕ ಮೋಹನನ ಬಂಧನವಾದಾಗ ಆತನೇ ಸುನಂದಾ ಪ್ರಿಯಕರ ಶಶಿಧರ ಪೂಜಾರಿ ಎಂಬುದು ತಿಳಿದುಬಂದಿತ್ತು.



ಲಾಡ್ಜ್‌ನ ವ್ಯವಸ್ಥಾಪಕ ಹಾಗೂ ರೂಂ ಬಾಯ್‌ ಸಾಕ್ಷ್ಯ, ಮೋಹನ ನೀಡಿದ ಸೈನೈಡ್‌ ತಿಂದೂ ಬದುಕಿ ಬಂದ ಮಹಿಳೆಯೊಬ್ಬರ ಸಾಕ್ಷ್ಯ, ತೊಕ್ಕೊಟ್ಟಿನ ಆಶೀರ್ವಾದ್‌ ಫೈನಾನ್ಸ್‌ನಲ್ಲಿ ಮೋಹನ ಅಡವಿಟ್ಟಿದ್ದ ಸುನಂದಾಳ ಒಡವೆಗಳು ಪತ್ತೆಯಾಗಿದ್ದು ಈ ಪ್ರಕರಣ ಸಾಬೀತಾಗಲು ನೆರವಾಗಿವೆ.



ಬರಿಮಾರು ಗ್ರಾಮದ ಅನಿತಾ ಹಾಗೂ ವಾಮದ ಪದವು ಗ್ರಾಮದ ಲೀಲಾ  ಕೊಲೆ ಪ್ರಕರಣಗಳಲ್ಲೂ ಮೋಹನನ ಮೇಲಿನ ಆರೋಪ ಸಾಬೀತಾಗಿತ್ತು. ಈ ಮೂರು ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ನಿರ್ಧರಿಸುವ ಸಲುವಾಗಿ ನ್ಯಾಯಾಧೀಶರು ಇದೇ 19ರಂದು ಸರ್ಕಾರಿ ವಕೀಲ ಚೆಯ್ಯಬ್ಬ ಬ್ಯಾರಿ ಹಾಗೂ ಮೋಹನನ ಹೇಳಿಕೆ ಆಲಿಸಲಿದ್ದಾರೆ.

ಪ್ರತಿಕ್ರಿಯಿಸಿ (+)