ಶುಕ್ರವಾರ, ಆಗಸ್ಟ್ 7, 2020
25 °C

ಸೈಬರ್ ಯುಗದೊಳ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಬರ್ ಯುಗದೊಳ್...

ಇಷ್ಟು ದಿನಗಳಿಂದ ಕಾಯ್ದುಕೊಂಡು ಬಂದಿದ್ದ ಗುಟ್ಟಿಗೆ ನಿರ್ದೇಶಕ ಮಧುಚಂದ್ರ ತೆರೆಎಳೆದರು. ಚಿತ್ರದ ಹೆಸರು ಗುರುತಿಸಿ ಎಂದು ಪದಬಂಧ ನೀಡಿ ಬಹುಮಾನದ ಆಸೆ ಹುಟ್ಟಿಸಿದ್ದ ಅವರು ಚಿತ್ರದ ಹೆಸರು, ನಾಯಕ, ನಾಯಕಿಯರನ್ನು ಕೊನೆಗೂ ಪರಿಚಯಿಸುವ ಮನಸ್ಸು ಮಾಡಿದರು.

 

`ಐಎಲ್‌ಯು~ ಎಂಬ ತಾತ್ಕಾಲಿಕ ಹೆಸರಿನಿಂದ ಕರೆಯಲಾಗುತ್ತಿದ್ದ ಈ ಚಿತ್ರದ ಹೆಸರು `ಸೈಬರ್ ಯುಗದೊಳ್ ನವ ಯುವ ಮಧುರ ಪ್ರೇಮ ಕಾವ್ಯ~.ಶೀರ್ಷಿಕೆ ದೀರ್ಘವಾಗಿದ್ದರೂ ಜನ ಅರಗಿಸಿಕೊಳ್ಳಬಲ್ಲರು ಎಂಬ ವಿಶ್ವಾಸ ನಿರ್ದೇಶಕರದು. ಚಿತ್ರಕ್ಕೆ ತಾರಾಗಣದ ಶಕ್ತಿ ದೊಡ್ಡದು ಎಂದು ಮಧುಚಂದ್ರ ಹೇಳಿದರು. ಅವರು ಸಿನಿ ಬರಹಗಾರ ಮಂಜು ಮಾಂಡವ್ಯ ಅವರ ಸಹೋದರ.ಚಿತ್ರದ ನಾಯಕಿ ಶ್ವೇತಾ ಶ್ರೀವಾಸ್ತವ್. `ಮುಕ್ತ ಮುಕ್ತ~ ಧಾರಾವಾಹಿ ಮತ್ತು `ಆ ದಿನಗಳು~ ಚಿತ್ರದಲ್ಲಿ ನಟಿಸಿ ಗುರುತಿಸಿಕೊಂಡವರು. `ಲಕುಮಿ~ ಧಾರಾವಾಹಿಯಲ್ಲಿ ನಟಿಸಿದ್ದ ಮೂಡಿಗೆರೆಯವರಾದ ಗುರುನಂದನ್ ನಾಯಕ.ಚಿತ್ರದ ಶೀರ್ಷಿಕೆಯನ್ನು ವಿಶಿಷ್ಟವಾಗಿಟ್ಟಿರುವ ಮಧುಚಂದ್ರ ಕಾಪಾಡಿಕೊಂಡಿದ್ದ ಅದರ ರಹಸ್ಯವನ್ನು ವಿಶಿಷ್ಟವಾಗಿಯೇ ಪ್ರಹಸನದ ಮೂಲಕ ಅನಾವರಣಗೊಳಿಸಿದರು. ಬಳಿಕ ಚಿತ್ರೀಕರಿಸಿದ ಮೂರು ಹಾಡುಗಳನ್ನೂ ಪ್ರದರ್ಶಿಸಿದರು.ನಾಯಕನ ಪಾತ್ರ ಲಭಿಸಿದ ಬಳಿಕ ಗುರುನಂದನ್ ಧಾರಾವಾಹಿ ಬಳಗವನ್ನು ತ್ಯಜಿಸಿದ್ದಾರೆ. ನಿರ್ಮಾಪಕ ಅಶ್ವಿನಿ ವಿಜಯಕುಮಾರ್ ಅವರ ಸ್ನೇಹಿತರಾಗಿರುವ ಅವರು ಚಿತ್ರಕ್ಕಾಗಿ ಎರಡು ತಿಂಗಳು ನಿರಂತರ ಅಭ್ಯಾಸ ನಡೆಸಿದ್ದರಂತೆ.ನಾಯಕಿ ಶ್ವೇತಾ ಶ್ರೀವಾಸ್ತವ್ ಎರಡು ಸಿನಿಮಾಗಳಲ್ಲಿ ಹೆಚ್ಚುಕಡಿಮೆ ಒಟ್ಟೊಟ್ಟಿಗೆ ನಾಯಕಿಯಾಗಿ ಬಣ್ಣ ಹಚ್ಚುವ ಅವಕಾಶ ಸಿಕ್ಕಿದ್ದರ ಖುಷಿಯಲ್ಲಿದ್ದರು. ತಾವು ಬಯಸುವ ಎಲ್ಲಾ ಗುಣಗಳೂ ಸಿನಿಮಾದಲ್ಲಿದೆ ಎಂದು ಅವರು ಸಂತಸದಿಂದ ಹೇಳಿಕೊಂಡರು.

ಸುಂದರ್ ಮತ್ತು ವೀಣಾ ಸುಂದರ್ ದಂಪತಿ ತೆರೆ ಮೇಲೂ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ.ನಿಜಜೀವನದಲ್ಲಿ ಪತಿಯಾಗಿರುವುದು ತುಂಬಾ ಬೇಸರದ ಕೆಲಸ ಎಂದು ಸುಂದರ್ ಚಟಾಕಿ ಹಾರಿಸಿದರು. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಸಹೋದರ ವಾಸು ದೀಕ್ಷಿತ್ ಹಾಗೂ ಅಭಿಲಾಷ್ ಲಾಕ್ರಾ ಸ್ವರ ಸಂಯೋಜನೆ ಮಾಡಿದ್ದಾರೆ.ಶರತ್ ಲೋಹಿತಾಶ್ವ, ಸೀತಾ ಕೋಟೆ, ಮನೋಜ್ ಜವಾ, ಸುಷ್ಮಾ ನಾಣಯ್ಯ, ಅಚ್ಯುತಕುಮಾರ್, ನಂಜುಂಡ, ಕಿರಣ್ಮಯಿ ಮುಂತಾದ ತಾರಾಬಳಗದ ಸದಸ್ಯರು ಹಾಜರಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.